ADVERTISEMENT

‘ಪ್ರತಿ ಹಳ್ಳಿಯಲ್ಲೂ ಗ್ರಂಥಾಲಯ ಸ್ಥಾಪನೆ ಆಗಲಿ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 15:00 IST
Last Updated 15 ಏಪ್ರಿಲ್ 2019, 15:00 IST
ಬಾಣಗಹಳ್ಳಿಯಲ್ಲಿ ಭಾನುವಾರ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಶಾಲಾ ವಿದ್ಯಾರ್ಥಿಗೆ ಉಪನ್ಯಾಸಕ ದೇವರಾಜ್ ನೋಟ್‌ ಪುಸ್ತಕ ವಿತರಿಸಿದರು
ಬಾಣಗಹಳ್ಳಿಯಲ್ಲಿ ಭಾನುವಾರ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಶಾಲಾ ವಿದ್ಯಾರ್ಥಿಗೆ ಉಪನ್ಯಾಸಕ ದೇವರಾಜ್ ನೋಟ್‌ ಪುಸ್ತಕ ವಿತರಿಸಿದರು   

ಚನ್ನ‍ಪಟ್ಟಣ: ‘ಗ್ರಾಮಗಳಲ್ಲಿ ಸ್ವತಂತ್ರವಾಗಿ ಗ್ರಂಥಾಲಯವನ್ನು ಸ್ಥಾಪಿಸಿ ಓದುವ ಮುಕ್ತ ವಾತಾವರಣ ನಿರ್ಮಿಸಿದಾಗ ಮಾತ್ರ ಅಂಬೇಡ್ಕರ್ ಆಶಯ ಈಡೇರಲು ಸಾಧ್ಯ’ ಎಂದು ಎಂದು ಅರಳಾಳುಸಂದ್ರ ಸರ್ಕಾರಿ ಪದವಿ-ಪೂರ್ವ ಕಾಲೇಜಿನ ಉಪನ್ಯಾಸಕ ದೇವರಾಜ್ ಆರ್.ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಾಣಗಹಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರ 128ನೇ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಸರ್ಕಾರದ ಯಾವ ಸಹಾಯವೂ ಇಲ್ಲದೆ ಗ್ರಂಥಾಲಯವನ್ನು ರೂಪಿಸುವ ಮಟ್ಟಕ್ಕೆ ಯುವ ಜನರ ಆಲೋಚನೆ ಬೆಳೆಯಬೇಕು. ಈ ರೀತಿಯ ಆರೋಗ್ಯಕರ ಆಲೋಚನೆ ಬಂದಾಗ ಮಾತ್ರ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು ಮುನ್ನೆಲೆಗೆ ಬಂದು ಘನತೆ ಬದುಕು ಸಾಗಿಸಲು ಸಾಧ್ಯ’ ಎಂದರು.

ADVERTISEMENT

ಗ್ರಾಮದಲ್ಲಿ ಅಂಬೇಡ್ಕರ್‌ ಆಶಯಕ್ಕೆ ಅನುಗುಣವಾಗಿ ಸ್ಥಾಪನೆಯಾಗಿರುವ ಗ್ರಂಥಾಲಯದಲ್ಲಿ ಉತ್ಕೃಷ್ಟ ಪುಸ್ತಕಗಳು ಇದ್ದು ಸದುಪಯೋಗ ಪಡಿಸಿಕೊಳ್ಳಬೇಕು. ಇದೇ ರೀತಿ ದೇಶದ ಎಲ್ಲಾ ಹಳ್ಳಿಗಳಲ್ಲೂ ಒಂದೊಂದು ಗ್ರಂಥಾಲಯ ಸ್ಥಾಪಿಸಿ, ಓದುವ ವಾತಾವರಣ ನಿರ್ಮಿಸಿದರೆ ಅಂಬೇಡ್ಕರ್ ಕಂಡ ಕನಸು ಈಡೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ಅರಳಾಳುಸಂದ್ರ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಮೂರ್ತಿ ಮಾತನಾಡಿ, ಗ್ರಂಥಾಲಯ ನಿರ್ಮಿಸಿ ಮಕ್ಕಳ ಜ್ಞಾನದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್, ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಡಾ.ಶಾಂತರಾಜ್ ಅಧ್ಯಕ್ಷತೆ ವಹಿಸಿದ್ದರು. ಡಾ.ರವಿಕುಮಾರ್ ಬಾಗಿ, ಸಿದ್ದರಾಜು ಹಾಗೂ ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.