ADVERTISEMENT

ಮುಂದಿನ ಹಂತಗಳು ಬಿಜೆಪಿಗೆ ನಿರ್ಣಾಯಕ

ದೇಶದ ಅರ್ಧಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಮತದಾನ ಪೂರ್ಣ l ಇನ್ನು ನಾಲ್ಕು ಹಂತಗಳು ಬಾಕಿ

ಶೆಮಿಜ್‌ ಜಾಯ್‌
Published 24 ಏಪ್ರಿಲ್ 2019, 20:30 IST
Last Updated 24 ಏಪ್ರಿಲ್ 2019, 20:30 IST
   

ನವದೆಹಲಿ: ಲೋಕಸಭೆಯ 543 ಕ್ಷೇತ್ರಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳ ವಿಧಿಯನ್ನು ದೇಶದ ಮತದಾರ ಈಗಾಗಲೇ ನಿರ್ಣಯಿಸಿ ಆಗಿದೆ. ದೇಶದ ಅರ್ಧಕ್ಕಿಂತ ಹೆಚ್ಚಿನ ಭಾಗಗಳಲ್ಲಿ ಮತದಾನ ಪೂರ್ಣಗೊಂಡಿದೆ. 2014ರಲ್ಲಿ ಬಿಜೆಪಿ ಅತಿ ಹೆಚ್ಚು ಕ್ಷೇತ್ರಗಳನ್ನು ಗೆದ್ದುಕೊಂಡ ಪ್ರದೇಶಗಳಲ್ಲಿ ಇನ್ನು ಮುಂದೆ ಮತದಾನ ನಡೆಯಲಿದೆ.

ಹಿಂದಿ ಭಾಷಿಕ ಪ್ರದೇಶಗಳಾದ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಅರ್ಧ ಭಾಗಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಮುಂದಿನ ನಾಲ್ಕು ಹಂತಗಳಲ್ಲಿ ಮತದಾನ ಆಗಲಿದೆ. ಈ ರಾಜ್ಯಗಳಲ್ಲಿ ಕಳೆದ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಹಾಗಾಗಿ, ಈ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ಬಿರುಸು ಏರಲಿದೆ.

ಮುಂದಿನ 4 ಹಂತಗಳಲ್ಲಿ ಮತದಾನ ನಡೆಯಲಿರುವ 241 ಕ್ಷೇತ್ರಗಳ ಪೈಕಿ 146ರಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು. ಉತ್ತರ ಪ್ರದೇಶದ 46, ಮಧ್ಯ ಪ್ರದೇಶದ 26, ರಾಜಸ್ಥಾನದ 25, ಬಿಹಾರದ 18 ಮತ್ತು ಜಾರ್ಖಂಡ್‌ನ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ದೆಹಲಿ
ಮತ್ತು ಹರಿಯಾಣದಲ್ಲಿ ಈ ಹಂತ ಗಳಲ್ಲಿಯೇ ಮತದಾನ ನಡೆಯಲಿದೆ. ಈ ರಾಜ್ಯಗಳಲ್ಲಿಯೂ ಬಿಜೆಪಿ ತಲಾ ಏಳು ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು.

ADVERTISEMENT

2014ರ ಸಾಧನೆಯನ್ನು ಪುನರಾವರ್ತಿಸುವುದು ಬಿಜೆಪಿಗೆ ಸಾಧ್ಯವಾಗದು ಎಂದು ಚುನಾವಣಾ ವಿಶ್ಲೇಷಕರು ಹೇಳುತ್ತಿದ್ದಾರೆ. ಬಿಜೆಪಿ ಮುಖಂಡರೂ ಅದನ್ನು ಒಪ್ಪಿಕೊಳ್ಳುತ್ತಾರೆ. ಈ ರಾಜ್ಯಗಳಲ್ಲಿ ಆಗುವ ನಷ್ಟವು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಮೂಲಕ ಭರ್ತಿಯಾಗಲಿದೆ ಎಂಬ ಬಿಜೆಪಿಯ ವಾದವನ್ನು ರಾಜಕೀಯ ವಿಶ್ಲೇಷಕರು ಒಪ್ಪುತ್ತಿಲ್ಲ.

ಮೊದಲ ಮೂರು ಹಂತಗಳಲ್ಲಿ ಮತದಾನ ನಡೆದ 302 ಕ್ಷೇತ್ರಗಳಲ್ಲಿ 122 ಕ್ಷೇತ್ರಗಳನ್ನು ಕಳೆದ ಬಾರಿ ಬಿಜೆಪಿ ಗೆದ್ದಿತ್ತು. ಮೊದಲ ಮೂರು ಹಂತಗಳಲ್ಲಿ ಮುಖ್ಯವಾಗಿ ದಕ್ಷಿಣ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮತದಾನ ನಡೆದಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ದಕ್ಷಿಣ ಭಾರತದ ಪೈಕಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿಗೆ ನೆಲೆ ಇತ್ತು. ಈಶಾನ್ಯ ಭಾರತದಲ್ಲಿಯೂ ಹೇಳಿಕೊಳ್ಳುವಂತಹ ಪ್ರಭಾವ ಇರಲಿಲ್ಲ.

ಗುಜರಾತ್‌ನ ಎಲ್ಲ 26 ಕ್ಷೇತ್ರಗಳಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಬಿಜೆಪಿಗೆ ಈ ಬಾರಿಯೂ ಅಂತಹ ದೊಡ್ಡ ಸವಾಲುಗಳೇನೂ ಇಲ್ಲ. 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭಾರಿ ಸ್ಪರ್ಧೆ ಒಡ್ಡಿತ್ತು. ಆದರೆ, ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಂದೆರಡಕ್ಕಿಂತ ಹೆಚ್ಚು ಸ್ಥಾನ ಸಿಗುವುದು ಕಷ್ಟ.

ಕೇರಳದತ್ತ ಎಲ್ಲರ ಕಣ್ಣುಗಳೂ ಈ ಬಾರಿ ತಿರುಗಿವೆ. ಇಲ್ಲಿ ಖಾತೆ ತೆರೆಯಲೇಬೇಕು ಎಂದು ಬಿಜೆಪಿ
ಹಟ ತೊಟ್ಟಿದೆ. ಶಬರಿಮಲೆ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶ ವಿಚಾರವನ್ನು ಬಲವಾಗಿ ಹಿಡಿದುಕೊಂಡಿದೆ. ಅದನ್ನು ತನ್ನ
ಪ್ರಣಾಳಿಕೆಯಲ್ಲಿಯೂ ಸೇರಿಸಿದೆ. ಈ ವಿಚಾರಕ್ಕೆ ಕೇರಳದ ಮತದಾರರ ಪ್ರತಿಕ್ರಿಯೆ ಯಾವ ರೀತಿ ಇದೆ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ ಒಂದು ತಿಂಗಳಿನಿಂದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆಯೇ, ಮಾಲೆಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮುಂಬೈ ದಾಳಿಯಲ್ಲಿ ಹುತಾತ್ಮರಾದ ಹೇಮಂತ್‌ ಕರ್ಕರೆ ಮತ್ತು ಬಾಬರಿ ಮಸೀದಿ ಧ್ವಂಸದ ಬಗ್ಗೆ ಸಾಧ್ವಿ ನೀಡಿದ ಹೇಳಿಕೆಗಳು ವಿವಾದ ಸೃಷ್ಟಿಸಿವೆ.

ಚುನಾವಣಾ ಆಯೋಗ ನಿರ್ಬಂಧ ಹೇರಿದ್ದರೂ ಬಾಲಾಕೋಟ್‌ ವಾಯು ದಾಳಿ ಮತ್ತು ಪಾಕಿಸ್ತಾನದ ವಿಚಾರಗಳು ಚುನಾವಣಾ ಪ್ರಚಾರದಲ್ಲಿ ಪದೇ ಪದೇ ಪ್ರಸ್ತಾಪ ಆಗಿವೆ.

ಅಲ್ಪ ಸಂಖ್ಯಾತರ ಪ್ರಮಾಣ ಹೆಚ್ಚಾಗಿರುವ ವಯನಾಡ್‌ನಿಂದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸ್ಪರ್ಧಿಸಿರುವುದು ಕೂಡ ಚರ್ಚೆಯ ವಿಷಯವಾಗಿತ್ತು.

ಮೂರು ಹಂತಗಳ ಮತದಾನ ಪೂರ್ಣ

– ಮೂರು ಹಂತಗಳಲ್ಲಿ 48.57 ಕೋಟಿ ಮಂದಿಗೆ ಮತದಾನದ ಹಕ್ಕು

– ದೇಶದ ಒಟ್ಟು ಮತದಾರರ ಸಂಖ್ಯೆ 89.87 ಕೋಟಿ

– 302 ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯ

– 241 ಕ್ಷೇತ್ರಗಳ ಮತದಾನ ಬಾಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.