ADVERTISEMENT

ಲೋಕಸಭಾ ಧಾರವಾಡ ಕ್ಷೇತ್ರ: 23 ಮಂದಿ ಉಮೇದುವಾರಿಕೆ ಸಿಂಧು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 11:44 IST
Last Updated 5 ಏಪ್ರಿಲ್ 2019, 11:44 IST

ಧಾರವಾಡ:ಲೋಕಸಭಾ ಚನಾವಣೆಯ ಧಾರವಾಡ ಕ್ಷೇತ್ರದ 26 ಅಭ್ಯರ್ಥಿಗಳ ನಾಮಪತ್ರಗಳನ್ನು ಇಲ್ಲಿ ಶುಕ್ರವಾರ ಪರಿಶೀಲನೆ ಮಾಡಿದ ಚುನಾವಣಾಧಿಕಾರಿಗಳು 23 ಮಂದಿಯ ಉಮೇದುವಾರಿಕೆ ಸಿಂಧುಗೊಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ವೀಕ್ಷಕರು, ಅಭ್ಯರ್ಥಿಗಳ ಹಾಗೂ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಬೆಳಿಗ್ಗೆ 11ಕ್ಕೆ ಆರಂಭವಾದ ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ಮಧ್ಯಾಹ್ನದವರೆಗೂ ನಡೆಯಿತು.

ಅಭ್ಯರ್ಥಿಗಳು ನಾಮಪತ್ರದ ಜತೆ ಸಲ್ಲಿಸಿದ್ದ ಪೂರಕ ದಾಖಲೆಪತ್ರಗಳು, ಆಸ್ತಿಗೆ ಸಂಬಂಧಪಟ್ಟ ಘೋಷಣಾ ಪತ್ರ ಹಾಗೂ ಮಾಹಿತಿಯನ್ನು ಸಮಗ್ರವಾಗಿ ಪರಿಶೀಲಿಸಿದರು. ಇಡೀ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವೀಡಿಯೋ ಚಿತ್ರೀಕರಿಸಲಾಯಿತು. ಕ್ಷೇತ್ರದಲ್ಲಿ ಒಟ್ಟಾರೆ 35 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಕೆಲ ಅಭ್ಯರ್ಥಿಗಳು ರಾಜಕೀಯ ಪಕ್ಷಗಳಿಂದ ಹಾಗೂ ಪಕ್ಷೇತರರಾಗಿ, ಮತ್ತೆ ಕೆಲವರು ಒಂದಕ್ಕಿಂತ ಹೆಚ್ಚಿನ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಮೂವರು ಅಭ್ಯರ್ಥಿಗಳ ಉಮೇದುವಾರಿಕೆ ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿದೆ.

ADVERTISEMENT

ಶಿವಸೇನಾ ಅಭ್ಯರ್ಥಿಯಾಗಿ ವಿಠಲ ನಾರಾಯಣಸಾ ಪವಾರ, ನ್ಯಾಷನಲ್ ಮಹಿಳಾ ಪಕ್ಷದಿಂದ(ಎನ್‌ಡಬ್ಲೂಪಿ) ಇರ್ಷಾದ್ ಬೇಗಂ ಅದೋನಿ ಮತ್ತು ಪಕ್ಷೇತರ ಅಭ್ಯರ್ಥಿ ಮಾರುತಿ ಹಣಸಿ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.

ಇರ್ಷಾದ್ ಬೇಗಂ ಅದೋನಿ ಅವರಿಗೆ ಪರಿಷ್ಕೃತ ಅಫಿಡವಿಟ್ ನೀಡುವಂತೆ ನೋಟಿಸ್ ನೀಡಲಾಗಿತ್ತು. ಆದರೂ ಅವರೂ ಅದನ್ನು ನೀಡದ ಕಾರಣ ಅವರ ನಾಮಪತ್ರ ತಿರಸ್ಕೃತಗೊಂಡಿದೆ.

ವಿಠಲ ಪವಾರ್‌ ಅವರ ಅಫಿಡವಿಟ್‌ನಲ್ಲಿ ಅಗತ್ಯ ಮಾಹಿತಿ ನೀಡಿರಲಿಲ್ಲ. ಸೂಚಕರ ಹೆಸರನ್ನು ಸೂಚಿಸಿರಲಿಲ್ಲ. ಮಾರುತಿ ಹಣಸಿ ಅವರ ಅಫಿಡವಿಟ್ ಅಪೂರ್ಣವಾಗಿತ್ತು. ಈ ಕಾರಣಕ್ಕಾಗಿ ಈ ಮೂವರ ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.