ADVERTISEMENT

‘ರಫೇಲ್’ನಿಂದಲೇ ಮೋದಿ ಮತ್ತೆ ಪ್ರಧಾನಿ: ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ

ಚಿಂತಕರ ಚಾವಡಿ ವೇದಿಕೆ ಆಯೋಜಿಸಿದ್ಧ ಅನೌಪಚಾರಿಕ ಸಂವಾದ 

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 15:08 IST
Last Updated 14 ಏಪ್ರಿಲ್ 2019, 15:08 IST
   

ತುಮಕೂರು: ‘ಬೋಫೋರ್ಸ್ ಪ್ರಕರಣ ಕಾಂಗ್ರೆಸ್‌ ಕಳಂಕಿತವಾಗಿ ಅಧಿಕಾರ ಕಳೆದುಕೊಂಡರೆ ’ರಫೇಲ್ ’ ಯುದ್ಧ ವಿಮಾನ ಖರೀದಿ ತೀರ್ಮಾನದಿಂದ ನರೇಂದ್ರ ಮೋದಿ ಮತ್ತೆ ಈ ದೇಶದ ಪ್ರಧಾನಿಯಾಗುತ್ತಾರೆ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ನಗರದ ಎಸ್‌.ಐ.ಟಿ. ಬಿರ್ಲಾ ಸಭಾಂಗಣದಲ್ಲಿ ಚಿಂತಕರ ಚಾವಡಿ ವೇದಿಕೆಯು ಆಯೋಜಿಸಿದ್ಧ ‘ಅನೌಪಚಾರಿಕ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೋಟು ಅಮಾನ್ಯೀಕರಣ ನಿರ್ಧಾರ, ರಫೇಲ್ ಯುದ್ಧ ವಿಮಾನ ಖರೀದಿ, ಪುಲ್ವಾಮಾ ದಾಳಿ, ಕಾಂಗ್ರೆಸ್ ಪ್ರಣಾಳಿಕೆ , ಉದ್ಯೋಗ ಸೃಷ್ಟಿ ಹೀಗೆ ಹಲವು ವಿಷಯಕ್ಕೆ ಸಂಬಂಧಪಟ್ಟಂತೆ 600ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸಭಿಕರು ನೋಂದಣಿ ಮಾಡಿಸಿದ್ದರು. ಸಂಘಟಕರು ಕ್ರೋಢೀಕರಿಸಿದ 12 ಪ್ರಶ್ನೆಗಳಿಗೆ ಸಚಿವೆ ಉತ್ತರಿಸಿದರು.

ADVERTISEMENT

ರಫೇಲ್ ಯುದ್ಧ ವಿಮಾನ ಖರೀದಿಯು ಈ ದೇಶದ ರಕ್ಷಣೆ ಹಿತ ದೃಷ್ಟಿಯಿಂದ ಕೈಗೊಂಡ ಮಹತ್ವದ ತೀರ್ಮಾನವಾಗಿದೆ. ಇದರಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಹಗರಣ ಇನ್ನೆಲ್ಲಿ ಬಂತು ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಪಕ್ಷ ಸೇರಿದಂತೆ ಕೆಲವು ಪಕ್ಷ, ಮುಖಂಡರ ಟೀಕೆ ಅರ್ಥವಿಲ್ಲದ್ದು ಎಂದು ಪ್ರತಿಕ್ರಿಯಿಸಿದರು.

ಸುಸೈಡ್ ಬಾಂಬರ್ ಗೂ ಮುಖ್ಯಮಂತ್ರಿಗೂ ವ್ಯತ್ಯಾಸವಿಲ್ಲ

ಪುಲ್ವಾಮಾ ದಾಳಿ ಬಗ್ಗೆ ಎರಡು ವರ್ಷಗಳ ಹಿಂದೆಯೇ ತಮಗೆ ವಿಷಯ ಗೊತ್ತಿತ್ತು ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ರಕ್ಷಣಾ ಇಲಾಖೆಗೆ ಈ ಸಂಗತಿ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆಗೆ ಸಚಿವೆ ಒಂದು ಕ್ಷಣ ಬೆರಗಾದರು.

ಯಾರು ಮುಖ್ಯಮಂತ್ರಿ ಹಾಗೆ ಹೇಳಿದ್ದಾರೆಯೆ? ಮುಖ್ಯಮಂತ್ರಿ ಹಾಗೆ ಹೇಳಿದ್ದಾರೆ ಎಂದರೆ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಮುಖ್ಯಮಂತ್ರಿಗೆ ಎರಡು ವರ್ಷಗಳ ಹಿಂದೆಯೇ ದಾಳಿ ಬಗ್ಗೆ ಗೊತ್ತಿದ್ದರೆ ದೇಶದ ರಕ್ಷಣೆ ದೃಷ್ಟಿಯಿಂದ ಗಮನಕ್ಕೆ ತರಬಹುದಿತ್ತು. ಎರಡು ವರ್ಷ ಸುಮ್ಮನೆ ಇದ್ದರು ಎಂದರೆ ಸುಸೈಡ್ ಬಾಂಬರ್‌ ಗೂ ಇಲ್ಲಿನ ಮುಖ್ಯಮಂತ್ರಿಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ‘ನ್ಯಾಯ’ ಯೋಜನೆ ಮೂಲಕ ದೇಶದ ಬಡತನ ನಿರ್ಮೂಲನೆ ಮಾಡುವುದಾಗಿ ಪ್ರತಿಪಾದಿಸಿದೆ. ಇಂದಿರಾಗಾಂದಿ ಇದ್ದಾಗ ಗರೀಬಿ ಹಠಾವೊ ಎಂದರು. ರಾಜೀವ್ ಗಾಂಧಿ ಇದ್ದಾಗ ಬಡತನ ನಿರ್ಮೂಲನೆ ಎಂದು ಯೋಜನೆ ರೂಪಿಸಿದ್ದರು. ಆದಾಗ್ಯೂ ದೇಶದಲ್ಲಿನ ಬಡತನ ನಿರ್ಮೂಲನೆ ಆಗಿಲ್ಲ. ಅಂದರೆ ಅರ್ಥ ಬಡತನ ನಿರ್ಮೂಲನೆ ಮಾಡುವುದು ಕಾಂಗ್ರೆಸ್‌ ನಿಂದ ಆಗಿಲ್ಲ. ಆಗುವುದೂ ಇಲ್ಲ ಎಂದೇ ಅರ್ಥ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಗುರು ಎಂದೇ ಕರೆಯಲ್ಪಡುವ ಸ್ಯಾಮ್ ಪಿಥ್ರೋಡಾ ಅವರು ನ್ಯಾಯ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನ್ಯಾಯ ಯೋಜನೆಯಿಂದ ಬಡತನ ಹೋಗಲಾಡಿಸಬಹುದು. ಆದರೆ, ಮಧ್ಯಮ ವರ್ಗದ ಮೇಲೆ ತೆರಿಗೆ ಹೆಚ್ಚಳ ಅವಶ್ಯಕವಾಗಿ ಮಾಡಬೇಕು ಎಂದು ಹೇಳಿದ್ದಾರೆ. ಅಂದರೆ ಏನರ್ಥ. ಮಧ್ಯಮ ವರ್ಗದ ಮೇಲೆ ತೆರಿಗೆ ಹೆಚ್ಚಳ ಮಾಡಿ ನೀವು ಬಡತನ ನಿರ್ಮೂಲನೆ ಮಾಡುತ್ತಿರೋ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿದ ಮುದ್ರಾ ಯೋಜನೆ, ಸ್ವಯಂ ಉದ್ಯೋಗ ಪ್ರೋತ್ಸಾಹ ಯೋಜನೆ ಸೇರಿದಂತೆ ಹಲವು ಯೋಜನೆಗಳು ವಾಸ್ತವಿಕವಾಗಿ ದೇಶದ ಬಡತನ ನಿರ್ಮೂಲನೆಗೆ ಸಹಕಾರಿಯಾಗಿವೆ ಎಂದು ಹೇಳಿದರು.

ಜಗತ್ತಿಗೆ ಭಾರತದ ಶಕ್ತಿ ದರ್ಶನ

ಉರಿ, ಪುಲ್ವಾಮಾ ದಾಳಿಗೆ ಭಾರತ ನಡೆಸಿದ ಪ್ರತೀಕಾರದ ದಾಳಿಗೆ, ರಕ್ಷಣೆಗೆ ಕೈಗೊಂಡ ಕ್ರಮಗಳು ಜಗತ್ತಿನ ರಾಷ್ಟ್ರಗಳಿಗೆ ಭಾರತದ ಶಕ್ತಿ ಏನು ಎಂಬುದು ಅರ್ಥವಾಗಿದೆ. ೆರಡೂ ಪ್ರತೀಕಾರದ ದಾಳಿಯಲ್ಲಿ ನಾಗರಿಕರ ಜೀವಕ್ಕೆ ಅಪಾಯ ಆಗಿಲ್ಲ. ಉಗ್ರರ ನೆಲೆಗಳನ್ನು ನಮ್ಮ ಸೇನೆ ಬಗ್ಗು ಬಡಿದಿವೆ. ಜಗತ್ತಿನ ಒಂದೇ ಒಂದು ರಾಷ್ಟ್ರ ಭಾರತ ನಡೆಸಿದ ಪ್ರತೀಕಾರದ ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ. ಆದರೆ, ನಮ್ಮ ಕಾಂಗ್ರೆಸ್ ಪಕ್ಷದವರು ಪ್ರಶ್ನಿಸುತ್ತಿದ್ದಾರೆ. ದೇಶದ ರಕ್ಷಣೆ ವಿಚಾರದಲ್ಲಿ ಇವರದೆಂಥ ಬದ್ಧತೆ ಎಂಬುದು ಇದರಲ್ಲಿ ಅರ್ಥವಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಸಂಘಟಕರಾದ ವಿನಯ್ ಸ್ವಾಗತಿಸಿದರು. ಡಾ.ಪರಮೇಶ್ ನಿರೂಪಿಸಿದರು. ಗೋವಿಂದರಾವ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.