ADVERTISEMENT

ಮಿಷನ್‌ 22 ಅಲ್ಲ; ಗರಿಷ್ಠ 18– ಬಿಜೆಪಿ ಲೆಕ್ಕ

16 ದಾಟುವ ಭರವಸೆಯಲ್ಲಿ ಮಿತ್ರಪಕ್ಷಗಳ ನಾಯಕರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:45 IST
Last Updated 25 ಏಪ್ರಿಲ್ 2019, 20:45 IST
ಬಿ.ಎಸ್‌.ಯಡಿಯೂರಪ್ಪ,
ಬಿ.ಎಸ್‌.ಯಡಿಯೂರಪ್ಪ,   

ಬೆಂಗಳೂರು: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 16ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವಿನ ತರ್ಕವನ್ನು ಜೆಡಿಎಸ್–ಕಾಂಗ್ರೆಸ್ ಮೈತ್ರಿ ಕೂಟದ ನಾಯಕರು ಮಾಡುತ್ತಿದ್ದರೆ, ‘ಮಿಷನ್ 22’ರ ಗುರಿ ಇಟ್ಟುಕೊಂಡಿದ್ದ ಬಿಜೆಪಿ ನಾಯಕರು ಮತದಾನದ ಮುಗಿದ ಬಳಿಕ ತಮ್ಮ ವಿಜಯದ ಬಲ 17ರಿಂದ 18ಕ್ಕೆ ಸೀಮಿತವಾಗಬಹುದು ಎಂಬ ಅಂದಾಜಿನಲ್ಲಿದ್ದಾರೆ.

ಆರು ತಿಂಗಳ ಮುನ್ನವೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ‘ಮಿಷನ್‌–22’ ಗುರಿಯನ್ನು ರಾಜ್ಯ ನಾಯಕರಿಗೆ ಕೊಟ್ಟಿದ್ದರು. ‘ಸದ್ಯದ ನಮ್ಮ ಲೆಕ್ಕ 18 ದಾಟುವುದಿಲ್ಲ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಗರಿಷ್ಠ ಮಟ್ಟದಲ್ಲಿರುವುದು ಕರ್ನಾಟಕದಲ್ಲೇ. ಈ ಅಂಶ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿದರೆ ಪಕ್ಷ ಗಳಿಸುವ ಸ್ಥಾನಗಳ ಸಂಖ್ಯೆ 20ಕ್ಕೆ ತಲುಪಬಹುದು’ ಎಂದು ಹಿರಿಯ ನಾಯಕರೊಬ್ಬರು ವಿಶ್ಲೇಷಿಸಿದರು.

‘ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಬಗ್ಗೆ ಪಕ್ಷ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿಲ್ಲ. ಬೆಂಗಳೂರಿನ ಎರಡು ಕ್ಷೇತ್ರಗಳು (ದಕ್ಷಿಣ ಹಾಗೂ ಉತ್ತರ) ಕೈತಪ್ಪುವ ಆತಂಕ ಎದುರಾಗಿದೆ. ಜೆಡಿಎಸ್‌–ಕಾಂಗ್ರೆಸ್‌ ನಾಯಕರು ಒಗ್ಗೂಡಿದ್ದರಿಂದ ಮೈಸೂರಿನಲ್ಲೂ ಸ್ಥಿತಿ ಬದಲಾವಣೆ ಆಗಿದೆ. ಚಾಮರಾಜನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಿಕ್ಕೋಡಿ, ರಾಯಚೂರು, ಗುಲ್ಬರ್ಗಾ ಹಾಗೂ ಬೀದರ್‌ನಲ್ಲಿ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಇಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ ಶೇ 50ರಷ್ಟಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ಗೆ ಬೆಂಬಲ ನೀಡಲಾಗಿದೆ. ಅಲ್ಲಿನ ಚುನಾವಣೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದಾಗಿ ಅಲ್ಲೂ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ಉಳಿದಿಲ್ಲ’ ಎಂದು ನಾಯಕರೊಬ್ಬರು ವಿಶ್ಲೇಷಿಸಿದರು.

ADVERTISEMENT

16 ಖಚಿತ: ಬಿಜೆಪಿ ನಡೆಸಿದ ಚುನಾವಣಾ ತಯಾರಿ ನಡೆಸಿದ್ದರೆ 20 ಕ್ಷೇತ್ರಕ್ಕೆ ಕಡಿಮೆ ಇಲ್ಲದಂತೆ ಗೆಲ್ಲಲು ಸಾಧ್ಯವಿತ್ತು. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನಾಯಕರು ಹಿಂದೇಟು ಹಾಕಿದ್ದು, ಅಭ್ಯರ್ಥಿ ಆಯ್ಕೆಯಲ್ಲಿ ವಿಳಂಬ ಧೋರಣೆ ತಳೆದಿದ್ದು ಮುಳುವಾಯಿತು. ಹಾಗಿದ್ದರೂ 16 ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಜೆಡಿಎಸ್ ನಾಯಕರೊಬ್ಬರು ಹೇಳಿದರು.

*
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ 22 ಅಲ್ಲ, 23 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.