ADVERTISEMENT

ಕಾಂಗ್ರೆಸ್ ಗೆಲುವಿನ ಸರಮಾಲೆ ಮುರಿದ ಧನಂಜಯ

ಪ್ರವೀಣ್‌ ಕುಮಾರ್‌ ಪಿ.ವಿ
Published 24 ಮಾರ್ಚ್ 2014, 10:02 IST
Last Updated 24 ಮಾರ್ಚ್ 2014, 10:02 IST

ಮಂಗಳೂರು: ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜರಿ ಅವರು 1977ರಲ್ಲಿ ಗೆದ್ದ ಬಳಿಕ ಕಾಂಗ್ರೆಸ್ ನಾಯಕರಾಗಿ ಏರಿದ ಎತ್ತರ ನಿಬ್ಬೆರಗಾಗಿಸುವಂತಹದ್ದು. ಕ್ಷೇತ್ರದ ಜನತೆ­ಯೂ ಸತತ ನಾಲ್ಕು ಬಾರಿ ಗೆಲ್ಲಿಸುವ ಮೂಲಕ ಅವರ ರಾಜ­ಕೀಯ ಏಳಿಗೆಯ ಏಣಿಗೆ ಮೆಟ್ಟಿಲಾದರು.

ಇಂದಿರಾ ಗಾಂಧಿ ಕಾಲ­ವಾದ ಬಳಿಕ ರಾಜೀವ ಗಾಂಧಿ ಅವರಿಗೂ ಆಪ್ತರೆನಿಸಿದ ಪೂಜಾರಿ ಆಗ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ. ಚುನಾವಣಾ ಸಮಿತಿಯ ಅಧ್ಯಕ್ಷರೂ ಅವರೇ. ಆರು ರಾಜ್ಯಗಳಲ್ಲಿ ಪಕ್ಷದ ಉಸ್ತುವಾರಿಯೂ ಅವರ ಹೆಗಲೇ­ರಿತ್ತು. ಸಂಸದೀಯ ಮಂಡಳಿಯ ಅಧ್ಯಕ್ಷರೂ ಆಗಿ­ದ್ದರು. ಪೂಜಾ­ರಿ ಅವರ ರಾಜಕೀಯ ಜೀವನದ ಉತ್ತುಂಗ ಸ್ಥಿತಿ ಇದು.

1991ರ ಮೇ 23. ಪ್ರಧಾನಿ ರಾಜೀವ ಗಾಂಧಿ ಅವರು ತಮಿಳುನಾಡಿನ ಪೆರಂಬದೂರಿನಲ್ಲಿ ಎಲ್‍ಟಿಟಿಇ (ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ) ಉಗ್ರಗಾಮಿಗಳಿಂದ ಹತ್ಯೆಯಾಗಿ (1991 ಮೇ 21) ಕೇವಲ ಎರಡು ದಿನವಾಗಿ­ತ್ತಷ್ಟೆ. ಅಂದು ಮಂಗಳೂರಿನ ಮಹಾಜನತೆ ಜಿಲ್ಲೆಯ ರಾಜಕೀ­ಯದ ಹೊಸ ಅಧ್ಯಾಯಕ್ಕೆ ಭಾಷ್ಯ ಬರೆದರು.

ಬಿಜೆಪಿಯ ರಾಮಮಂದಿರ ನಿರ್ಮಾಣ ರಥಯಾತ್ರೆಯ ಜನಪ್ರಿಯತೆಯ ನಡುವೆಯೂ, ರಾಜೀವ್ ಗಾಂಧಿ ಹತ್ಯೆಯ ಅನುಕಂಪದ ಅಲೆ, ದೇಶದಾದ್ಯಂತ ಕಾಂಗ್ರೆಸ್‌ನ ಕೈ ಹಿಡಿಯಿತು. ಆದರೆ, ಮಂಗಳೂರಿನ ಪರಿಸ್ಥಿತಿ ಬೇರೆಯೇ ಆಗಿತ್ತು. ಪೂಜಾರಿ ಅವರ ರಾಜಕೀಯ ಪಯಣವನ್ನು ಹಳ್ಳಿಯಿಂದ ದಿಲ್ಲಿಯವರೆಗೆ ತಲುಪಿಸಿದ, ಅವರನ್ನು ಜನತಾ ಜನಾರ್ದನ ಎಂದು ಆರಾಧಿ­ಸಿದ ಜನರೇ ಈ ಚುನಾವಣೆಯಲ್ಲಿ ರಾಜೀವ್ ಗಾಂಧಿ ಅವರ ಪರಮಾಪ್ತ ಜನಾರ್ದನ ಪೂಜಾರಿ ಅವರನ್ನು ಏಕಾಏಕಿ “ಕೈ’ಬಿಟ್ಟರು. ಈ ಸೋಲು ಜನಾರ್ದನ ಪೂಜಾರಿ ಮಾತ್ರ ಅಲ್ಲ ಇಡೀ ಕಾಂಗ್ರೆಸ್ ಪಕ್ಷಕ್ಕೇ ಜೀರ್ಣಿಸಿಕೊಳ್ಳುವುದಕ್ಕೆ ಕಷ್ಟವಾ­ಗಿತ್ತು ಎಂದು ಮೆಲುಕು ಹಾಕುತ್ತಾರೆ ಹಿರಿಯ ಕಾಂಗ್ರೆಸ್ ಮುಖಂಡರು.

ಹೌದು! ದೇಶದ ರಾಜಕಾರಣದಲ್ಲಿ ಅತ್ಯಂತ ಉತ್ತುಂಗ ಸ್ಥಿತಿಯಲ್ಲಿದ್ದ ಜನಾರ್ದನ ಪೂಜಾರಿ ಅವರಿಗೆ ಸೋಲುಣಿಸಿದ್ದು ಅದೇ, ಧನಂಜಯ ಕುಮಾರ್. 1983ರ ವಿಧಾನಸಭಾ ಚುನಾ­ವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಗೆದ್ದು, 1985ರ ವಿಧಾನಸಭೆಯಲ್ಲಿ ಸೋತು, 1989ರ ಲೋಕಸಭಾ ಚುನಾ­ವಣೆ­ಯಲ್ಲಿ ಪೂಜಾರಿ ಅವರ ವಿರುದ್ಧವೇ ಸೋತು­ಹೋಗಿದ್ದ ಧನಂಜಯ ಕುಮಾರ್ 1991ರಲ್ಲಿ “ಭಾರಿ’ ಗೆಲುವೊಂ­ದನ್ನು ಬಿಜೆಪಿಗೆ ದಕ್ಕಿಸಿಕೊಟ್ಟಿದ್ದರು. ಅದು ಅಂತಿಂಥ ಗೆಲು­ವಲ್ಲ, ಅವರು ಮಣಿಸಿದ್ದು, ಎಐಸಿಸಿಯಲ್ಲಿ ರಾಜೀವ್ ಗಾಂಧಿ ನಂತರದ ಪ್ರಮುಖ ಸ್ಥಾನದಲ್ಲಿದ್ದ ಪೂಜಾರಿ ಅವರನ್ನು.

ಸಾಲಮೇಳದ ಮೂಲಕ ಬಡಜನರ ವಿಶ್ವಾಸಕ್ಕೆ ಪಾತ್ರರಾಗಿದ್ದ ಪೂಜಾರಿ ಅವರನ್ನು! ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ನಂತರ ಒಂದು ಎಳೆಯೂ ತುಂಡಾಗದಂತೆ ಜತನ­ವಾಗಿ ಕಟ್ಟಿದ್ದ ಗೆಲುವಿನ ಸರಮಾಲೆಯನ್ನೇ ಧನಂಜಯ ಕುಮಾರ್ ತುಂಡರಿಸಿದ್ದರು.

ಈ ಚುನಾವಣೆಯಲ್ಲಿ ಸಿಪಿಎಂನಿಂದ ಪಿ.ರಾಮ­ಚಂದ್ರ ರಾವ್, ಜನತಾ ಪಾರ್ಟಿಯಿಂದ ಎಚ್.­ಸುಬ್ಬಯ್ಯ ಶೆಟ್ಟಿ, ಎಂಎಸ್‍ಡಿ ಪಕ್ಷದಿಂದ ಮೆಲ್ವಿಲ್ ಪಿಂಟೊ, ಪಕ್ಷೇತರರಾಗಿ ಸಿ.ಬಿ.ಬೆಳ್ಳಿಯಪ್ಪ, ಬಿ.ಇ.ಶೇಷಾದ್ರಿ, ಎಂ.ಎನ್.­ಗೋವಿಂದ­ರಾಜಲು ಸ್ಪರ್ಧಿಸಿದ್ದರು. 5,59,417 (ಶೇ59.­64) ಮಂದಿ ಮತ ಚಲಾಯಿಸಿದ್ದರು. 2,74,700 ಮತ ಪಡೆದ ಧನಂಜಯ ಕುಮಾರ್ 35,005 ಮತಗಳ ಅಂತರ­ದಿಂದ ಜನಾರ್ದನ ಪೂಜಾರಿ (2,39,695 ಮತ) ಅವರನ್ನು ಸೋಲಿಸಿದರು.

ಸಿಪಿಎಂನ ಪಿ.ರಾಮಚಂದ್ರ ರಾವ್ ಅವರು 28,010 ಮತ ಗಳಿಸಿದ್ದರು. ರಾವ್ ಸೇರಿದಂತೆ ಉಳಿದ ಎಂಟೂ ಅಭ್ಯರ್ಥಿಗಳೂ ಠೇವಣಿ ಕಳೆದುಕೊಂಡಿದ್ದರು.

ಈ ಸೋಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅದೆಂತಹ ಪೆಟ್ಟು ಕೊಟ್ಟಿತೆಂದರೆ, ಆ ಬಳಿಕ ಒಂದು ಲೋಕ­ಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಇಲ್ಲಿ ಗೆದ್ದೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಬಳಿಕ 1989­ರವರೆಗೆ ನಡೆದ ಸತತ ಒಂಬತ್ತು ಬಾರಿ ಗೆದ್ದಿದ್ದ ಕಾಂಗ್ರೆಸ್, ಬಳಿಕ ನಡೆದ ಆರು ಚುನಾವಣೆಗಳಲ್ಲಿ ಮುಗ್ಗರಿಸಿದೆ. 

ಬಿಜೆಪಿ ಮುಖಂಡರು ಈ ಗೆಲುವಿನ ಶ್ರೇಯವನ್ನು ಧನಂಜಯ ಕುಮಾರ್ ಅವರಿಗೆ ಬಿಟ್ಟುಕೊಡಲು ಸಿದ್ಧರಿಲ್ಲ. “ಧನಂಜಯ್ ಕುಮಾರ್ ಗೆದ್ದಿದ್ದು ಪಕ್ಷದ ಕಾರ್ಯಕರ್ತರ ಸಂಘಟಿತ ಪ್ರಯತ್ನದಿಂದ. ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ನೇತೃತ್ವದಲ್ಲಿ ನಡೆಯುತ್ತಿದ್ದ ರಥಯಾತ್ರೆಗೆ ಆಗ ಕರಾವಳಿ­ಯುದ್ದಕ್ಕೂ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಜಿಲ್ಲೆಯಲ್ಲೂ ಸಾವಿರಾರು ಕರಸೇವಕರು ಮಂದಿರ ನಿರ್ಮಾಣಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧವಾಗಿದ್ದರು.

ರಥಯಾತ್ರೆಯ ಉದ್ದೇಶವನ್ನು ಸಾಕಾರಗೊಳಿ­ಸುವುದ­ಕ್ಕಾಗಿಯೇ ಜಿಲ್ಲೆಯ ಜನತೆ ಬಿಜೆಪಿ­ಯನ್ನು ಬೆಂಬಲಿಸಿದ್ದರು. ಧನಂಜಯ ಕುಮಾರ್ ಕೂಡಾ ಸಮರ್ಥ ಅಭ್ಯರ್ಥಿ. ಹಾಗಾಗಿ ಗೆಲುವು ಸಾಧ್ಯವಾಗಿತ್ತು’ ಎನ್ನು­ತ್ತಾರೆ ಬಿಜೆಪಿಯ ಹಿರಿಯ ಮುಖಂಡ ಪದ್ಮನಾಭ ಕೊಟ್ಟಾರಿ.

ರಾಮ ಮಂದಿರ ರಥಯಾತ್ರೆ ಪಕ್ಷಕ್ಕೆ ಮುಳುವಾ­ಗಿದ್ದನ್ನು ಕಾಂಗ್ರೆಸ್ ಮುಖಂಡರೂ ಒಪ್ಪಿಕೊಳ್ಳುತ್ತಾರೆ. “ಈ ಚುನಾವಣೆ­ಯಲ್ಲಿ ಬಿಜೆಪಿಯವರು ಧಾರ್ಮಿಕ ಭಾವನೆ ಮುಂದಿಟ್ಟು­ಕೊಂಡು ಸಮಾಜವನ್ನು ಒಡೆದರು. ಅವರ ತಂತ್ರಕ್ಕೆ ಕಾಂಗ್ರೆಸ್ ಬಲಿಪಶುವಾಯಿತು’ ಎನ್ನುತ್ತಾರೆ ಕಾಂಗ್ರೆಸ್‌ ಹಿರಿಯ ಮುಖಂಡ ಹರಿಕೃಷ್ಣ ಬಂಟ್ವಾಳ್.

ಆ ಚುನಾವಣೆಗೆ ಕೆಲವೇ ತಿಂಗಳು ಹಿಂದೆ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪೂರ್ಣಗೊಂಡಿತ್ತು. ಪ್ರಧಾನಿ ರಾಜೀವ ಗಾಂಧಿ ಅವರೇ ಜೀರ್ಣೋದ್ಧಾರಗೊಂಡ ದೇವಳ­ವನ್ನು ಉದ್ಘಾಟಿಸಿದ್ದರು.

‘ಆಗ ಪೂಜಾರಿ ಅವರು ಪಂಕ್ತಿಭೇದ ಪೋಷಿಸುವ ದೇವಳ­ಗಳನ್ನು ಕಟುವಾಗಿ ಟೀಕಿಸುತ್ತಿದ್ದರು. ಜೈನ ಕುಟುಂಬದ ನೇತೃತ್ವದಲ್ಲಿ ನಡೆಯುತ್ತಿದ್ದ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ­ವಾದ ಧರ್ಮಸ್ಥಳದಲ್ಲೂ ಪಂಕ್ತಿಭೇದ ಚಾಲ್ತಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಆ ಧರ್ಮದ ಮುಖಂಡರೊಬ್ಬರ “ಅವಕೃಪೆ’­ಗೂ ಪೂಜಾರಿ ಗುರಿಯಾಗಬೇಕಾಯಿತು’ ಎಂದು ಮೆಲುಕು ಹಾಕುತ್ತಾರೆ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು.

ಸತತ ನಾಲ್ಕು ಗೆಲುವು- ನಾಲ್ಕು ಸೋಲುಗಳನ್ನು ಕಂಡಿರುವ ಜನಾರ್ದನ ಪೂಜಾರಿ ಈ ಬಾರಿ ಮತ್ತೆ ಕಣಕ್ಕಿಳಿದಿದ್ದಾರೆ. 1991ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆಲ್ಲಾ ಪಕ್ಷದ ಟಿಕೆಟ್ ಹಂಚಿದ್ದ ಪೂಜಾರಿ ಈ ಬಾರಿ ಟಿಕೆಟ್ ಪಡೆಯಲು ಪಕ್ಷ­ದೊ­ಳಗೇ ಯಾವ ಮಟ್ಟಿನ ಹೋರಾಟ ನಡೆಸಿದರು ಎಂಬುದು ಆ ಪಕ್ಷದ ಕಾರ್ಯಕರ್ತರಿಗೆ ತಿಳಿದಿದೆ.  ಕರಾವಳಿಯಲ್ಲಿ ಲೋಕ­ಸಭೆ ಚುನಾವಣೆಯಲ್ಲೂ ಬಿಜೆಪಿ ಗೆಲ್ಲಬಹುದು ಎಂದು ತೋರಿಸಿಕೊಟ್ಟ ಧನಂಜಯ ಕುಮಾರ್ ಅವರೂ ಸತತ ನಾಲ್ಕು ಬಾರಿ ಗೆದ್ದರು.

ಕೇಂದ್ರದಲ್ಲಿ, ಜವಳಿ, ವಿಮಾನಯಾನ ಮೊದಲಾದ ಪ್ರಮುಖ ಖಾತೆಗಳ ಸಚಿವರಾಗಿಯೂ ಕಾರ್ಯ­ನಿರ್ವಹಿಸಿದರು. ಇಲ್ಲಿ ಬಿಜೆಪಿಗೆ ಗೆಲುವಿನ ರುಚಿ ತೋರಿಸಿದ ಅವರೇ ಈಗ ಆ ಪಕ್ಷದಲ್ಲಿ ಉಳಿದಿಲ್ಲ. ಕಟ್ಟರ್ ಆರ್‍ಎಸ್‍ಎಸ್ ಕಾರ್ಯಕರ್ತರಾಗಿ “ರಾಮ ಮಂದಿರ’ ಜಪ ಮಾಡುತ್ತಿದ್ದ ಅವರೀಗ “ಜಾತ್ಯತೀತ’ ಜನತಾ ದಳದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ. ಕರಾವಳಿಯ ಈ ಇಬ್ಬರೂ ಧೀಮಂತ ನಾಯಕರಿಗೆ ಈ ಬಾರಿಯ ಚುನಾವಣೆ ಮತ್ತೆ ರಾಜಕೀಯ ಜೀವನದ ಚಿಮ್ಮುಹಲಗೆ­ಯಾಗುತ್ತದೊ ಕಾದು ನೋಡಬೇಕಿದೆ.

1991: ಮತದಾರರು 9,37,957; ಚಲಾಯಿತ ಮತ: 5,59,417 (59.64)

1) ಧನಂಜಯ ಕುಮಾರ್‌            (ಬಿಜೆಪಿ)                2,74,700     (ಶೇ 49.81)
2) ಜನಾರ್ದನ ಪೂಜಾರಿ             (ಕಾಂಗ್ರೆಸ್‌)            2,39,695     (ಶೇ 43.46)
3) ಪಿ. ರಾಮಚಂದ್ರ ರಾವ್‌           (ಸಿಪಿಎಂ)              28,010        (ಶೇ 5.08)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.