ADVERTISEMENT

ಜಿದ್ದಾಜಿದ್ದಿನಲ್ಲಿ ಗೆದ್ದ ಕಾಂಗ್ರೆಸ್‌

ಲೋಕಸಭಾ ಚುನಾವಣೆ- 2009

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2014, 6:57 IST
Last Updated 8 ಏಪ್ರಿಲ್ 2014, 6:57 IST

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ 2009ರಲ್ಲಿ ನಡೆದ ಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಹಿನ್ನೆಲೆಯಲ್ಲಿ ಆ ಪಕ್ಷದ ವರಿಷ್ಠರು ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಕಮಲ ಅರಳಿಸುವ ಸಾಹಸಕ್ಕೆ ಪಣತೊಟ್ಟಿದ್ದರು.

ಇನ್ನೊಂದೆಡೆ ಭದ್ರಕೋಟೆ ಉಳಿಸಿಕೊಳ್ಳಲು ಕಾಂಗ್ರೆಸ್‌ ವರಿಷ್ಠರು ಕೂಡ ರಣತಂತ್ರ ರೂಪಿಸಿದ್ದರು. ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರಿದ್ದರು. ಇದು ಕೈ ಪಾಳಯದ ಪಾಲಿಗೆ ಹೆಚ್ಚಿನ ಬಲ ತಂದಿತ್ತು.

ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್‌. ಧ್ರುವನಾರಾಯಣ ಅವರ ವಿರುದ್ಧವೇ ಸೋಲು ಕಂಡಿದ್ದ ಎ.ಆರ್‌. ಕೃಷ್ಣಮೂರ್ತಿ ಬಿಜೆಪಿಯಿಂದ ಲೋಕಸಭಾ ಅಖಾಡಕ್ಕೆ ಇಳಿದಿದ್ದರು. ಈ ಇಬ್ಬರು ಸಾಂಪ್ರದಾಯಿಕ ಎದುರಾಳಿಗಳು ಎನ್ನುವುದು ವಿಶೇಷ.

ಆಡಳಿತರೂಢ ಬಿಜೆಪಿ ರಾಜ್ಯ ಸರ್ಕಾರವೇ ಕೃಷ್ಣಮೂರ್ತಿ ಗೆಲುವಿಗೆ ಟೊಂಕಕಟ್ಟಿ ನಿಂತಿತ್ತು. ಇದು ಕಾಂಗ್ರೆಸ್‌ ವರಿಷ್ಠರಿಗೆ ದೊಡ್ಡ ಸವಾಲನ್ನು ತಂದೊಡ್ಡಿತ್ತು.

ಆ ವೇಳೆ ಕ್ಷೇತ್ರದಲ್ಲಿ 14,33,825 ಮತದಾರರು ಇದ್ದರು. ಇವರಲ್ಲಿ 9,73,593 ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಶೇ 67.91ರಷ್ಟು ಮತದಾನವಾಗಿತ್ತು.

ಕಣದಲ್ಲಿ ಒಟ್ಟು 14 ಮಂದಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಧ್ರುವನಾರಾಯಣ ಅವರು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸಿದ್ದರು. ಚಲಾವಣೆಗೊಂಡಿದ್ದ ಮತಗಳಲ್ಲಿ ಅವರು 3,69,970 ಮತ ಪಡೆದು ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದರು.

ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಕೃಷ್ಣಮೂರ್ತಿ 3,65,968 ಮತ ಪಡೆದು ಕೇವಲ 4,002 ಮತಗಳ ಕಡಿಮೆ ಅಂತರದಿಂದ ಸೋಲು ಕಂಡರು. ಪ್ರಸಕ್ತ ಚುನಾವಣೆಯಲ್ಲಿ ಇವರೇ ಅಖಾಡದಲ್ಲಿದ್ದಾರೆ.

ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೋಟೆ ಎಂ. ಶಿವಣ್ಣ 1,06,876 ಮತ ಪಡೆದರು. ಬಹುಜನ ಸಮಾಜ ಪಕ್ಷದ ಎನ್‌. ಮಹೇಶ್‌– 68,447, ಸುಬ್ಬಯ್ಯ (ಪಕ್ಷೇತರ)– 19,984, ಡಾ.ಎಂ.ಸಿ. ರಾಜಣ್ಣ (ಪಕ್ಷೇತರ)– 8,333, ಎಂ. ರಮೇಶ್‌ (ಪಕ್ಷೇತರ)– 6,077, ಪಿ.ಬಿ. ಯೋಗೇಂದ್ರ (ಪಕ್ಷೇತರ)– 4,761, ಆರ್‌. ಜಗದೀಶನಾಯ್ಕ (ಬಿಎಸ್‌ಸಿ)– 4,758, ಆರ್‌. ಪುರುಷೋತ್ತಮ್‌ (ಪಕ್ಷೇತರ)– 4,243,
ಎಂ.ಕೆ. ಕೆಂಪಸಿದ್ದಯ್ಯ (ಎಸ್‌ಪಿ)– 4,176, ಭೀಮಯ್ಯ (ಪಕ್ಷೇತರ)– 3,595, ಚೌಡಹಳ್ಳಿ ಜವರಯ್ಯ (ಸಿಪಿಐ ಎಂಎಲ್‌– ಎಲ್‌)– 3,342, ಕೆ.ಸಿ. ಶಿವಾನಂದ (ಜೆಡಿಯು)– 3,163 ಮತ ಪಡೆದರು.

ಅಭ್ಯರ್ಥಿಗಳು ಪಡೆದ ಮತಗಳ ವಿವರ 
ಅಭ್ಯರ್ಥಿ ಹೆಸರು                ಪಕ್ಷ           ಪಡೆದ ಮತಗಳು

ಧ್ರುವನಾರಾಯಣ            ಕಾಂಗ್ರೆಸ್‌            3,69,970
ಎ.ಆರ್‌. ಕೃಷ್ಣಮೂರ್ತಿ      ಬಿಜೆಪಿ                 3,65,968
ಕೋಟೆ ಎಂ. ಶಿವಣ್ಣ         ಜೆಡಿಎಸ್‌              1,06,876
ಎನ್‌. ಮಹೇಶ್‌             ಬಿಎಸ್‌ಪಿ                 68,447

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT