ADVERTISEMENT

ಮಂಡ್ಯದಿಂದ ಅಂಬರೀಷ್‌ ಹ್ಯಾಟ್ರಿಕ್‌

ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 10:45 IST
Last Updated 2 ಏಪ್ರಿಲ್ 2014, 10:45 IST

ಮಂಡ್ಯ: ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರು ಅಲ್ಲ, ಶತ್ರುಗಳೂ ಅಲ್ಲ ಎನ್ನುವ ಮಾತು ರಾಜಕೀಯ ನಾಯಕರು ಪಕ್ಷ ಬದಲಿಸಿದಾಗ ಕೇಳಿ ಬರುತ್ತದೆ. ಆ ಮಾತಿಗೆ ಇಂಬು ಕೊಡುವಂತೆ ಅಂಬರೀಷ್‌ ಅವರು ಒಂದು ವರ್ಷದ ಅಂತರದಲ್ಲಿ ನಡೆಯುವ ಚುನಾವಣೆಯಲ್ಲಿ ಜೆಡಿ(ಎಸ್‌)ನಿಂದ ಹೊರಬಂದು ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ. ಆ ಮೂಲಕ ಎರಡನೇ ಗೆಲುವು ಸಾಧಿಸುತ್ತಾರೆ.

ಮೂರು ವರ್ಷದ ಹಿಂದೆ ನಡೆದಿದ್ದ (1996)ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗಲಿಲ್ಲ ಎಂದು ಮುನಿಸಿಕೊಂಡು ಮನೆಯಲ್ಲಿ ಕುಳಿತುಕೊಳ್ಳುವ ಮೂಲಕ ಜಿ. ಮಾದೇಗೌಡರ ಸೋಲಿಗೆ ಹಾಗೂ ಕೆ.ಆರ್‌. ಪೇಟೆ ಕೃಷ್ಣ ಅವರ ಗೆಲುವಿಗೆ ಕಾರಣರಾಗಿದ್ದರು.

1998ರಲ್ಲಿ ನಡೆಯುವ ಚುನಾವಣೆಯಲ್ಲಿ ಜಿ. ಮಾದೇಗೌಡರ ವಿರುದ್ಧವೇ ಸ್ಪರ್ಧಿಸಿ ಅವರನ್ನು ಸೋಲಿಸಿದರು. ವರ್ಷದ ಅಂತರದಲ್ಲಿ ಅವರಿರುವ ಪಕ್ಷಕ್ಕೆ ಸೇರಿಕೊಂಡರು. ಮೂರು ವರ್ಷಗಳ ಹಿಂದೆ ಕೆ.ಆರ್‌. ಪೇಟೆ ಕೃಷ್ಣ ಅವರ ಗೆಲುವಿಗೆ ಪರೋಕ್ಷವಾಗಿ ನೆರವಾಗಿದ್ದ ಅಂಬರೀಷ್‌ ಅವರನ್ನು ನೇರವಾಗಿ ಸೋಲಿಸಿದರು.

1999ರ ವೇಳಗೆ ಜತನಾ ದಳ ಒಡೆದು ಜೆಡಿಯು ಹಾಗೂ ಜೆಡಿಎಸ್‌ ಆಗುತ್ತದೆ. ಜಿಲ್ಲೆಯಲ್ಲಿಯೂ ಒಡೆದ ಮನೆಯಾಗಿರುತ್ತದೆ. ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್‌.ಎಂ ಕೃಷ್ಣ ಅವರು ನಡೆಸಿದ ಸಂಧಾನದ ಫಲವಾಗಿ ಜಿ. ಮಾದೇಗೌಡರು ಹಾಗೂ ಅಂಬರೀಷ್‌ ಒಂದಾದರು.

1999ರಲ್ಲಿ ನಡೆಯುವ ಚುನಾವಣೆಯಲ್ಲಿ ಅಂಬರೀಷ್‌ ಅವರು ಸ್ಪರ್ಧಿಸಿ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ.ಆರ್‌. ಪೇಟೆ ಕೃಷ್ಣ ವಿರುದ್ಧ 1,62,280 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

2004ರಲ್ಲಿ ಕಾಂಗ್ರೆಸ್‌ನಿಂದ ಅಂಬರೀಷ್‌ ಸ್ಪರ್ಧಿಸಿದರು. ಜೆಡಿಸ್‌ ನಿಂದ ಕೆ.ಆರ್‌. ಪೇಟೆ ಕೃಷ್ಣ ಅವರು ಸ್ಪರ್ಧಿಸುವುದಿಲ್ಲ. ಆಗ ಬಹುಭಾಷಾ ತಜ್ಞರಾಗಿದ್ದ  ಡಾ.ಎನ್‌. ರಾಮೇಗೌಡ ಅವರನ್ನು ಜೆಡಿಎಸ್‌ನಿಂದ ಕಣಕ್ಕೆ ಇಳಿಸಲಾಯಿತು. ಮತ್ತೊಮ್ಮೆ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್‌ ಬಾರಿಸಿದರು.

ಕೇಂದ್ರದಲ್ಲಿ ಕೆಲಕಾಲ ವಾರ್ತಾ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.