ಬಾಗಲಕೋಟೆ: ವಿಜಯಪುರ ದಕ್ಷಿಣ ಲೋಕಸಭಾ (ಈಗಿನ ಬಾಗಲಕೋಟೆ) ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಬದಲಾದರೂ ಗೆಲುವಿನ ಓಟವನ್ನು ಮುಂದವರೆಸಿತು. ಆ ಮೂಲಕ ಮೂರನೇ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿ ಹ್ಯಾಟ್ರಿಕ್ ಗೆಲುವಿನ ದಾಖಲೆ ಬರೆಯಿತು.
ಎರಡು ಬಾರಿ ಸಂಸದರಾಗಿದ್ದ ಆರ್.ಬಿ. ಬಿದರಿ 1962ರಲ್ಲಿ ನಡೆದ ಮೂರನೇ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿಲ್ಲ. ಕಾಂಗ್ರೆಸ್‌ನಿಂದ ನಿಂತರೆ ಗೆಲುವು ಎಂಬುದು ಜನಜನಿತವಾಗಿದ್ದ ಕಾಲದಲ್ಲಿ ಹಲವಾರು ಅಭ್ಯರ್ಥಿಗಳು ಸ್ಪರ್ಧೆಗೆ ಸಿದ್ದರಿದ್ದರು. ಆಗಲೇ ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದು ಸುನಗದ ಸಂಗನಗೌಡ ಬಸನಗೌಡ (ಎಸ್.ಬಿ) ಪಾಟೀಲ.
ಚುರುಕಿನಿಂದ ಓಡಾಡುತ್ತಿದ್ದ, ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ 37 ವರ್ಷದ ಎಸ್.ಬಿ. ಪಾಟೀಲ ಅವರನ್ನು ಕಣಕ್ಕಿಳಿಸಲಾಯಿತು. ಯುವಕನಾದರೂ ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದರು. ಜತೆಗೆ ಮನೆತನದ ಹೆಸರೂ ಇತ್ತು. ಮೊದಲ ಬಾರಿಗೆ ಗೆಲುವಿನ ಜಯಮಾಲೆ ಹಾಕಿಕೊಂಡರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಾಗಿದ್ದ ಕಾಂಗ್ರೆಸ್ ಬಗ್ಗೆ ಜನರಿಗೆ ಸಾಕಷ್ಟು ಒಲವಿತ್ತು. ಜೊತೆಗೆ ಎಸ್.ಬಿ. ಪಾಟೀಲ ಅವರೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಜನರೂ ಅವರ ಕೈಹಿಡಿದು ಮೇಲೆತ್ತಿದರು. ಪರಿಣಾಮ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ ಹಿರಿಮೆ ಪಾಟೀಲರದ್ದಾಗಿದೆ. ಇವರನ್ನು ಹೊರತುಪಡಿಸಿದರೆ ಈಗಿನ ಸಂಸದ ಪಿ.ಸಿ. ಗದ್ದಿಗೌಡರ ಮಾತ್ರ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ.
ವಿಜಯಪುರ ಉತ್ತರ ಕ್ಷೇತ್ರದಿಂದ ರಾಜರಾಮ ದುಬೆ ಎರಡನೇ ಬಾರಿಗೆ ಆಯ್ಕೆಯಾದರೆ, ವಿಜಯಪುರ ದಕ್ಷಿಣದಿಂದ ಎಸ್.ಬಿ. ಪಾಟೀಲರು ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದರು.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಸುನಗದ ಎಸ್.ಬಿ.ಪಾಟೀಲ, ಜನಸಂಘದಿಂದ ಎನ್.ಕೆ. ಧರ್ಸಿ ಸ್ಪರ್ಧಿಸಿದ್ದರು. ಒಟ್ಟು 2,68,395 ಮತಗಳು ಚಲಾವಣೆಯಾಗಿದ್ದವು. ಪಾಟೀಲರು 1,88,849 ಮತಗಳನ್ನು ಪಡೆದರೆ, ಧರ್ಸಿ ಅವರು 67,820 ಮತಗಳನ್ನು ಪಡೆದರು. ಗೆಲುವಿನ ಅಂತರವನ್ನು ಆಗಲೇ ಲಕ್ಷ ದಾಟಿಸಿದ್ದ ಪಾಟೀಲರು 1,21,029 ಮತಗಳ ಅಂತರದಿಂದ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.