ADVERTISEMENT

‘ಮೇ ಬೀ ಚೌಕಿದಾರ’ ಮಾರ್ಚ್ 31ಕ್ಕೆ; ಮೋದಿಯೊಂದಿಗೆ ವೀಡಿಯೊ ಸಂವಾದ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 11:56 IST
Last Updated 29 ಮಾರ್ಚ್ 2019, 11:56 IST
   

ಧಾರವಾಡ: ‘‘ಮೇ ಬೀ ಚೌಕಿದಾರ’ ಕಾರ್ಯಕ್ರಮದ ಅಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ವೀಡಿಯೊಸಂದರ್ಶನ ಕಾರ್ಯಕ್ರಮವನ್ನು ಮಾರ್ಚ್ 31ರಂದು ಸಂಜೆ 5ಕ್ಕೆ ನಗರದ ಆದಿತ್ಯ ಮಯೂರ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿದೆ’ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.

‘ಈ ಕಾರ್ಯಕ್ರಮ ದೇಶದಾದ್ಯಂತ 300 ಕೇಂದ್ರಗಳಲ್ಲಿ ಏಕಕಾಲಕ್ಕೆ ನಡೆಯುತ್ತಿದೆ. ಅದರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರವೂ ಒಂದು. ನಾನೂ ಒಬ್ಬ ಚೌಕಿದಾರ ಎಂದು ಹೇಳುವ ಮೂಲಕ ದೇಶದ ಪ್ರತಿಯೊಬ್ಬರೂ ಚೌಕಿದಾರರಾಗಿ ಕೆಲಸ ಮಾಡಲು ನರೇಂದ್ರ ಮೋದಿ ಪ್ರೇರಣೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಈ ಬಾರಿ ಬಿಜೆಪಿ ಯಾವುದೇ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತಿಲ್ಲ. ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಮತ ಕೇಳಲಾಗುವುದು. ಈಗಾಗಲೇ ಮೋದಿ ಅವರಿಗೆ ದೇಶವ್ಯಾಪಿ ಬೆಂಬಲ ವ್ಯಕ್ತವಾಗುತ್ತಿದೆ. ಅದೇ ರೀತಿ ಧಾರವಾಡದಲ್ಲೂ ಅವರ ಪ್ರಭಾವ ಇದೆ. ಜತೆಗೆ ಸಂಸದ ಪ್ರಹ್ಲಾದ ಜೋಶಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳಿವೆ. ಹೀಗಾಗಿ ಯಾರೇ ಅಭ್ಯರ್ಥಿಯಾಗಿ ನಿಂತರೂ ಕಳೆದಬಾರಿಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಜೋಶಿ ಗೆಲ್ಲಲಿದ್ದಾರೆ’ ಎಂದು ಬೆಲ್ಲದ ಅವರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಬಿಆರ್‌ಟಿಎಸ್‌ ಒಳಗೆ ಹುಳುಕು, ಹೊರಗೆ ಮೇಕಪ್‌:ಇದೇ ಸಂದರ್ಭದಲ್ಲಿ ತ್ವರಿತ ಬಸ್‌ ಸಂಚಾರ ವ್ಯವಸ್ಥೆ (ಬಿಆರ್‌ಟಿಎಸ್‌) ಕುರಿತು ಮಾತನಾಡಿದ ಅವರ, ಈ ಯೋಜನೆಯ ಕನ್ಸಲ್ಟಂಟ್‌ ಮತ್ತು ಯೋಜನೆಯನ್ನು ಅನುಷ್ಠಾನಗೊಳಿಸಿದವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಅರವಿಂದ ಬೆಲ್ಲದ ಒತ್ತಾಯಿಸಿದರು.

‘ಅವೈಜ್ಞಾನಿಕವಾಗಿರುವ ಬಿಆರ್‌ಟಿಎಸ್‌ ವ್ಯವಸ್ಥೆ ಅತ್ಯಂತ ಕೆಟ್ಟ ಯೋಜನೆಗೆ ಉದಾಹರಣೆ. ಟೋಲ್‌ನಾಕಾ, ಮಾಡರ್ನ್‌ ಟಾಕೀಸ್‌, ಜೆಎಸ್‌ಎಸ್ ಕಾಲೇಜು, ನವಲೂರು ಸೇತುವೆ ಸೇರಿದಂತೆ ಇನ್ನೂ ಹಲವು ಕಡೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲ. ಸಾರ್ವಜನಿಕರು ಆರಾಮವಾಗಿ ರಸ್ತೆ ದಾಟಲು ಸಮರ್ಪಕ ವ್ಯವಸ್ಥೆ ಇಲ್ಲ. ಜನರಿಗೆ ಯಾವುದೇ ಉಪಯೋಗವಾಗದ ಈ ಯೋಜನೆಗೆ ನೂರಾರು ಕೋಟಿ ರೂಪಾಯಿ ಸುರಿಯಲಾಗುತ್ತಿದೆ. ಹೀಗಿದ್ದರೂ ಸುಗಮ ಮತ್ತು ಸುರಕ್ಷಿತ ಸಂಚಾರ ಸಾಧ್ಯವಾಗುತ್ತಿಲ್ಲ’ ಎಂದರು.

ಆದಾಯ ತೆರಿಗೆ ದಾಳಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೆಲ್ಲದ, ‘ಚುನಾವಣೆ ಸಂದರ್ಭದಲ್ಲಿ ಭ್ರಷ್ಟರ ಹಣದ ವ್ಯವಹಾರ ಹೆಚ್ಚಾಗಲಿದೆ. ಹೀಗಾಗಿ ಅಂಥವರ ಮೇಲೆ ದಾಳಿ ನಡೆದಿದೆ. ಈ ಹಿಂದೆ ನಮ್ಮ ಪಕ್ಷದವರ ಮೇಲೂ ದಾಳಿ ನಡೆದಿದೆ. ಇದಕ್ಕೆ ರಾಜಕೀಯ ಬಣ್ಣ ಬೇಡ’ ಎಂದರು.

ಪಕ್ಷದ ಮುಖಂಡರಾದ ಶಿವು ಹಿರೇಮಠ, ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಬಸವರಾಜ ಮುತ್ತಳ್ಳಿ, ಪ್ರಕಾಶ ಗೋಡಬೊಲೆ, ಮೋಹನ ರಾಮದುರ್ಗ, ದೇವರಾಜ ಶಹಾಪೂರಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.