ADVERTISEMENT

ದೇಶದ ತುಂಬೆಲ್ಲಾ ಮೋದಿ ಅಲೆ: ಕವಟಗಿಮಠ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 9:02 IST
Last Updated 7 ಏಪ್ರಿಲ್ 2019, 9:02 IST
ಉಗಾರದಲ್ಲಿ ಶನಿವಾರ ನಡೆದ ಬಿಜೆಪಿ ಪ್ರಚಾರ ಸಭೆಯನ್ನು ವಿಧಾನಪರಿಷತ್‌ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಉದ್ಘಾಟಿಸಿದರು
ಉಗಾರದಲ್ಲಿ ಶನಿವಾರ ನಡೆದ ಬಿಜೆಪಿ ಪ್ರಚಾರ ಸಭೆಯನ್ನು ವಿಧಾನಪರಿಷತ್‌ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಉದ್ಘಾಟಿಸಿದರು   

ಮೋಳೆ: ‘ದೇಶದ ತುಂಬೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಜೋರಾಗಿದೆ. ಹೀಗಾಗಿ, ಈ ಬಾರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಲಿದ್ದಾರೆ’ ಎಂದು ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ವಿಶ್ವಾಸ ವ್ಯಕ್ತಪಡಿಸಿದರು.

ಉಗಾರದಲ್ಲಿ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ 65 ವರ್ಷಗಳಲ್ಲಾಗದ ಅಭಿವೃದ್ಧಿ ಕೆಲಸಗಳು ಕೇವಲ 5 ವರ್ಷಗಳಲ್ಲಿ ಆಗಿವೆ. ಹಲವು ಜನಪರ ಯೋಜನೆಗಳನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಪರಿಣಾಮ, ಎಲ್ಲೆಡೆ ಅವರ ಟ್ರೆಂಡ್ ವ್ಯಾಪಿಸಿದೆ’ ಎಂದರು.

ADVERTISEMENT

‘ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಆದರೆ, ಬಿಜೆಪಿ ಸರ್ಕಾರವು ಮೋದಿ ನೇತೃತ್ವದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಟ್ಟಿದೆ. ಕೇಂದ್ರದಿಂದ ₹ 100 ಬಿಡುಗಡೆಯಾದರೆ ಬಡವರಿಗೆ ತಲುಪುವುದು ಕೇವಲ ₹ 15 ಎಂದು ಹಿಂದಿನ ಪ್ರಧಾನಿ ರಾಜೀವ ಗಾಂಧಿ ಹೇಳಿದ್ದರು. ಆದರೆ, ಈಗ ಬಿಡುಗಡೆಯಾದ ಎಲ್ಲ ಹಣವೂ ಜನರನ್ನು ತಲುಪುತ್ತಿದೆ. ಇದಕ್ಕೆ ಪಾರದರ್ಶಕ ಆಡಳಿತ ಕಾರಣವಾಗಿದೆ’ ಎಂದು ಹೇಳಿದರು.

‘ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 2 ಟಿಎಂಸಿ ನೀರು ಬಿಡುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಹೇಳಿಸಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಕೃಷ್ಣಾ ನದಿಗೆ ನೀರುಬರಲಿದೆ’ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ‘ದೇಶದ ಭದ್ರತೆಯ ದೃಷ್ಟಿಯಿಂದ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕಾಗಿದೆ. ಇದಕ್ಕಾಗಿ ನನಗೆ ಆಶೀರ್ವಾದ ಮಾಡಬೇಕು’ ಎಂದು ಕೋರಿದರು.

ಶಾಸಕರಾದ ಶಶಿಕಲಾ ಜೊಲ್ಲೆ, ಡಿ.ಎಂ. ಐಹೊಳೆ, ಪಿ. ರಾಜೀವ, ಮುಖಂಡರಾದ ಅಮರಸಿಂಹ ಪಾಟೀಲ, ರಾಜು ಕಾಗೆ, ಲಕ್ಷ್ಮಣ ಸವದಿ, ಸಂಜಯ ಪಾಟೀಲ, ಬಾಳಾಸಾಬ ವಡ್ಡರ, ಅಭಯಕುಮಾರ ಅಕಿವಾಟೆ ಮಾತನಾಡಿದರು. ಮುಖಂಡರಾದ ಅನಿಲ ಕಡೋಲಿ, ಜ್ಯೋತಗೌಡ ಪಾಟೀಲ, ಶೀತಲಗೌಡ ಪಾಟೀಲ, ವಿನಾಯಕ ಬಾಗಡಿ, ನಿಂಗಪ್ಪ ಖೋಕಲೆ, ಅಜೀತ ಚೌಗುಲಾ, ರವೀಂದ್ರ ಪೂಜಾರಿ, ಗಜಾನನ ಯರಂಡೋಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.