ADVERTISEMENT

ಬಿಜೆಪಿ ಪ್ರಣಾಳಿಕೆ: ದೇಶದ ಅಭಿವೃದ್ಧಿಗೆ 2047ರ ಗುರಿ

ಭರವಸೆ ಈಡೇರಿಸಲು ಮತ್ತೆ ಐದು ವರ್ಷ ಕೇಳಿದ ಪ್ರಧಾನಿ ನರೇಂದ್ರ ಮೋದಿ

ಸಾಗರ್ ಕುಲಕರ್ಣಿ
Published 7 ಆಗಸ್ಟ್ 2019, 4:48 IST
Last Updated 7 ಆಗಸ್ಟ್ 2019, 4:48 IST
ಪ್ರಣಾಳಿಕೆ ಬಿಡುಗಡೆ ನಂತರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದರು. ಹಣಕಾಸು ಸಚಿವ ಅರುಣ್ ಜೇಟ್ಲಿ ಇದ್ದರು –ಪಿಟಿಐ ಚಿತ್ರ
ಪ್ರಣಾಳಿಕೆ ಬಿಡುಗಡೆ ನಂತರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದರು. ಹಣಕಾಸು ಸಚಿವ ಅರುಣ್ ಜೇಟ್ಲಿ ಇದ್ದರು –ಪಿಟಿಐ ಚಿತ್ರ   

ನವದೆಹಲಿ: ‘2047ಕ್ಕೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ಇದಕ್ಕಾಗಿ ಬಿಜೆಪಿ ದುಡಿಯಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದರು.

‘ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂದು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬಯಸಿದ್ದರು. ಆದರೆ ಈವರೆಗೆ ಅದು ಸಾಧ್ಯವಾಗಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದು 2047ಕ್ಕೆ ನೂರು ವರ್ಷಗಳಾಗಲಿವೆ. ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿರಬೇಕು. ಈ ಗುರಿ ಸಾಧನೆಗಾಗಿ ಮುಂದಿನ ಐದು ವರ್ಷಗಳಲ್ಲಿ ನಮ್ಮ ಸರ್ಕಾರ ಭದ್ರ ಬುನಾದಿ ಹಾಕಲಿದೆ’ ಎಂದು ಮೋದಿ ಘೋಷಿಸಿದರು.

‘ನಮ್ಮ ಕಾರ್ಯವೈಖರಿ ಮತ್ತು ಸಾಧನೆಗಳ ಬಗ್ಗೆ ಮತದಾರರು ನಮ್ಮನ್ನು ಪ್ರಶ್ನಿಸಲು ಅವಕಾಶವಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 2022ಕ್ಕೆ 75 ವರ್ಷವಾಗಲಿದೆ. ಆ ಸಂದರ್ಭಕ್ಕಾಗಿ ನಾವು 75 ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಅಷ್ಟೂ ಕಾರ್ಯಕ್ರಮಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಿದ್ದೇವೆ. 2022ಕ್ಕೆ ಜನರ ಮುಂದೆ ನಮ್ಮ ಸರ್ಕಾರದ ಸಾಧನೆಗಳ ಲೆಕ್ಕಪತ್ರಗಳನ್ನು ಇಡುತ್ತೇವೆ’ ಎಂದು ಮೋದಿ ಹೇಳಿದರು.

ADVERTISEMENT

‘ಜನರ ಅಗತ್ಯಗಳನ್ನು ಪೂರೈಸಲು ಹಿಂದಿನ ಐದು ವರ್ಷ ನಮ್ಮ ಸರ್ಕಾರ ಪೂರ್ಣಪ್ರಮಾಣದಲ್ಲಿ ಶ್ರಮಿಸಿದೆ. ಜನರ ಒತ್ತಾಸೆಗಳನ್ನು ಹಾಗೂ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಲು ಇನ್ನೂ ಐದು ವರ್ಷ ಬೇಕಾಗುತ್ತದೆ’ ಎಂದು ಅವರು ಹೇಳಿದರು.

‘ಐದು ವರ್ಷಗಳಲ್ಲಿ ಮೋದಿ ಅವರು ದೃಢ ಸರ್ಕಾರವನ್ನು ನೀಡಿದ್ದಾರೆ. ಭಯೋತ್ಪಾದನೆಯ ಬೇರುಗಳನ್ನು ಕಿತ್ತೊಗೆಯುವ ಸಲುವಾಗಿ ನಿರ್ದಿಷ್ಟ ದಾಳಿ ಮತ್ತು ವಾಯುದಾಳಿಗಳನ್ನು ನಡೆಸುವಂತೆ ಆದೇಶ ನೀಡುವ ಧೈರ್ಯ ತೋರಿದ್ದಾರೆ. ಭಾರತವನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಎಂಬ ಸಂದೇಶವನ್ನುಈ ದಾಳಿಗಳ ಮೂಲಕ ಮೋದಿ ರವಾನಿಸಿದ್ದಾರೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರು.

*
2014ರ ಪ್ರಣಾಳಿಕೆಯನ್ನೇ 2019ರಲ್ಲಿ ಬಿಜೆಪಿ ಪುನರಾವರ್ತಿಸಿದೆ. ಗುರಿ ಸಾಧನೆ ಕಾಲಮಿತಿಯನ್ನು 2019ರಿಂದ 2022, 2032, 2047, 2097ಕ್ಕೆ ಮುಂದೂಡಿದೆ.
-ಅಹ್ಮದ್ ಪಟೇಲ್, ಕಾಂಗ್ರೆಸ್ ನಾಯಕ

*
ಇಂತಹದ್ದೇ ಸುಳ್ಳು ಭರವಸೆಗಳ ‘ಸಂಕಲ್ಪ ಪತ್ರ’ವನ್ನು ಬಿಜೆಪಿ 2014ರಲ್ಲೂ ನೀಡಿತ್ತು. ಅಂದಹಾಗೆ ರೈತರ ಆತ್ಮಹತ್ಯೆ ತಡೆಗೆ ಏನು ಮಾಡುತ್ತೀರಿ?
-ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

*
ಇನ್ನಷ್ಟು ಸುಳ್ಳುಗಳನ್ನು ಹೇಳದಂತೆ ಮೋದಿ ಅವರ ಬಾಯಿಗೆ ಜನರು ಪ್ಲಾಸ್ಟರ್ ಹಾಕಲಿದ್ದಾರೆ. ದೇಶದ ಹಿತಾಸಕ್ತಿಗಾಗಿ ಮೋದಿಯನ್ನು ರಾಜಕೀಯದಿಂದಲೇ ಹೊರಗಿಡಬೇಕು.
-ಮಮತಾ ಬ್ಯಾನರ್ಜಿ, ಪ.ಬಂಗಾಳ ಸಿ.ಎಂ.

*
ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡುತ್ತೇವೆ. ಅದೊಂದೇ ಈಗ ನಮ್ಮ ಮುಂದಿರುವ ಗುರಿ. ಇದಕ್ಕಾಗಿ ನಾವು ‘ಒಂದು ಯೋಜನೆ, ಒಂದು ದಿಕ್ಕಿ’ನಲ್ಲಿ ದುಡಿಯುತ್ತೇವೆ.
-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.