ADVERTISEMENT

ಮೋದಿಗೆ ಹಿಂದೂಗಳು ಮಾತ್ರ ಕಣ್ಣಿಗೆ ಕಾಣೋದು: ಎಚ್. ಆಂಜನೇಯ

'ಕಾಂಗ್ರೆಸ್‌ ಸರ್ವಧರ್ಮೀಯರ ಪಕ್ಷ'

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 15:09 IST
Last Updated 2 ಏಪ್ರಿಲ್ 2019, 15:09 IST
ಹಿರಿಯೂರಿನ ಜಯನಗರ ಬಡಾವಣೆಯಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರಿಗೆ ಮತ ನೀಡುವಂತೆ ಮಾಜಿ ಸಚಿವ ಎಚ್. ಆಂಜನೇಯ, ಶಾಸಕ ರಘುಮೂರ್ತಿ, ಮಾಜಿ ಶಾಸಕ ಡಿ. ಸುಧಾಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ. ಯಶೋಧರ, ಬಿ.ಎಚ್. ಮಂಜುನಾಥ್, ಎ. ಪಾಂಡುರಂಗ ಅವರು ಮತ ಯಾಚಿಸಿದರು
ಹಿರಿಯೂರಿನ ಜಯನಗರ ಬಡಾವಣೆಯಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರಿಗೆ ಮತ ನೀಡುವಂತೆ ಮಾಜಿ ಸಚಿವ ಎಚ್. ಆಂಜನೇಯ, ಶಾಸಕ ರಘುಮೂರ್ತಿ, ಮಾಜಿ ಶಾಸಕ ಡಿ. ಸುಧಾಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ. ಯಶೋಧರ, ಬಿ.ಎಚ್. ಮಂಜುನಾಥ್, ಎ. ಪಾಂಡುರಂಗ ಅವರು ಮತ ಯಾಚಿಸಿದರು   

ಹಿರಿಯೂರು: ‘ಪ್ರಧಾನಿ ಮೋದಿಗೆ ಹಿಂದೂಗಳು ಮಾತ್ರ ಕಣ್ಣಿಗೆ ಬಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಸರ್ವಧರ್ಮೀಯರು ಕಾಣುತ್ತಾರೆ. ಎಲ್ಲ ಜನಾಂಗದವರ ಹಿತ ಕಾಯುವ ಏಕೈಕ ಪಕ್ಷ ನಮ್ಮದು’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಪರವಾಗಿರೋಡ್ ಷೋ ನಡೆಸಲು ಬಂದಿದ್ದ ಅವರು ನಗರದ ಕಾಂಗ್ರೆಸ್ ಮುಖಂಡ ಬಿ.ಎನ್. ನಾಗರಾಜ್ ಮನೆಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದರು.

‘ನಾನೂ ಹಿಂದೂ. ಹಾಗೆಂದು ಬೇರೆ ಪಕ್ಷಗಳಲ್ಲಿ ಗುರುತಿಸಿಕೊಳ್ಳಬಾರದೆ? ರಾಹುಲ್ ಗಾಂಧಿ ಅವರಿಗೆ ರಾಜ್ಯದಿಂದ ಸ್ಪರ್ಧಿಸುವಂತೆ ನಾವೆಲ್ಲ ಒತ್ತಡ ಹಾಕಿದ್ದೆವು. ಆದರೆ ಅವರು ಕೇರಳದಿಂದ ಸ್ಪರ್ಧಿಸುವ ತೀರ್ಮಾನ ಕೈಗೊಂಡರು. ಮೋದಿ ಗುಜರಾತ್ ಬಿಟ್ಟು ವಾರಾಣಸಿಯಲ್ಲಿ ಸ್ಪರ್ಧಿಸುವುದಿಲ್ಲವೆ? ತಮ್ಮ ಆಡಳಿತದ ವೈಫಲ್ಯದಿಂದ ಸೋಲಿನ ಭೀತಿ ಕಾಡುತ್ತಿರುವ ಕಾರಣ ಧರ್ಮದ ಮೂಲಕ ಜನರನ್ನು ಒಡೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ. ಯಶೋಧರ, ‘ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿಯೇ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ತೀರ್ಮಾನವನ್ನು ವರಿಷ್ಠರು ಕೈಗೊಂಡಿದ್ದರು. ಮೈತ್ರಿ ಧರ್ಮ ಪಾಲನೆ ಮಾಡಿ ಮಿತ್ರ ಪಕ್ಷದ ಅಭ್ಯರ್ಥಿ ಗೆಲುವಿಗೆ ಭಾವನಾತ್ಮಕ ಸಂಬಂಧದೊಂದಿಗೆ ಪ್ರಯತ್ನ ಮಾಡುತ್ತೇವೆ. ಹೊಸ ರಾಜಕೀಯ ಪರಿಭಾಷೆಗೆ ಮುನ್ನಡಿ ಬರೆಯುತ್ತೇವೆ. ದೇಶಕ್ಕೆ ದೊಡ್ಡ ಅಪಾಯವಾಗಿರುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುತ್ತೇವೆ’ ಎಂದು ಘೋಷಿಸಿದರು.

ಅಭ್ಯರ್ಥಿ ಚಂದ್ರಪ್ಪ, ‘ದೇಶದಾದ್ಯಂತ ಕಳೆದ ಬಾರಿ ಇದ್ದಮೋದಿ ಅಲೆ ಈಗ ಇಲ್ಲ. ಈ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿದ್ದು, ಇನ್ನೂ ಹೆಚ್ಚಿನ ಅಂತರದ ಗೆಲುವು ಬರುವ ನಿರೀಕ್ಷೆ ಇದೆ. ನನ್ನ ಅಧಿಕಾರದ ಅವಧಿಯಲ್ಲಿ ಮತದಾರರ ಋಣ ತೀರಿಸಿರುವ ವಿಶ್ವಾಸವಿದೆ’ ಎಂದರು.

ಮಾಜಿ ಸಚಿವ ಡಿ. ಸುಧಾಕರ್, ‘ಹಿರಿಯೂರು ಕ್ಷೇತ್ರದಲ್ಲಿ ಚಂದ್ರಪ್ಪ 50–60 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಹತ್ತು ವರ್ಷ ಕಾಲ ನಾನು ಸಚಿವ, ಶಾಸಕನಾಗಿ ಮಾಡಿರುವ ಕೆಲಸಗಳನ್ನು ಜನ ಸ್ಮರಿಸುತ್ತಿದ್ದಾರೆ’ ಎಂದು ಹೇಳಿದರು.

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಬಿ.ಎಚ್. ಮಂಜುನಾಥ್, ಎ. ಪಾಂಡುರಂಗ, ಖಾದಿ ರಮೇಶ್, ಸಾದತ್ ಉಲ್ಲಾ, ಚಂದ್ರಾನಾಯ್ಕ್, ಇ.ಮಂಜುನಾಥ್, ರವಿಚಂದ್ರ, ಅಜ್ಜಣ್ಣ, ಬಿ.ಎನ್ . ಪ್ರಕಾಶ್, ನಾಗಲಕ್ಷ್ಮಿ ಬಾಬು, ಗೌರಿಶಂಕರ್, ಅಜೀಜ್, ಪುಷ್ಪಲತ, ಜಿ. ದಾದಾಪೀರ್, ಸಿಗಬತ್ ಉಲ್ಲಾ ಅವರೂ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.