ADVERTISEMENT

ಪಾಕ್‌ ಬಾಂಬ್‌ ಹಾಕಿದರೆ ರಾಹುಲ್‌ ಗಾಂಧಿ ಸಾವು: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 11:20 IST
Last Updated 28 ಮಾರ್ಚ್ 2019, 11:20 IST
   

ಶಿವಮೊಗ್ಗ: ಪಾಕಿಸ್ತಾನ ಒಂದು ವೇಳೆ ಭಾರತದ ಮೇಲೆ ಬಾಂಬ್ ಹಾಕಿದರೆ ರಾಹುಲ್‌ ಗಾಂಧಿ ಹೊರತುಪಡಿಸಿ ಯಾವ ಭಾರತೀಯರೂ ಸಾಯುವುದಿಲ್ಲ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿದರು.

ಇಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆಯ ನಂತರ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ಇಡೀ ವಿಶ್ವದಲ್ಲಿನ ಭಾರತೀಯರು ಹೆಮ್ಮೆಯಿಂದ ನಮ್ಮದು ಭಾರತ ಎಂದು ಹೇಳಿಕೊಳ್ಳುತ್ತಿದ್ದಾರೆ. ಪುಲ್ವಾಮ ಘಟನೆಯ ನಂತರ ಉಗ್ರರ ವಿರುದ್ಧ ತೆಗೆದುಕೊಂಡ ದಿಟ್ಟ ನಿರ್ಧಾರಗಳು ಮೋದಿ ಅವರ ಸಾಮರ್ಥ್ಯ ಸಾಬೀತು ಮಾಡಿವೆ. ಆದರೆ, ಕೆಲವರು ಮಾತ್ರ ಸಾಕ್ಷ್ಯ ಕೇಳುತ್ತಾ ಕುಳಿತಿದ್ದಾರೆಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ADVERTISEMENT

ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಸೈನಿಕರ ರೀತಿ ನಿಂತು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದು ಕೋರಿದರು.

ಸಿಎಂ ರಾಜೀನಾಮೆ ನೀಡಲಿ: ಈಶ್ವರಪ್ಪ

ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಐಟಿ ದಾಳಿಯ ಗೌಪ್ಯತೆ ಕಾಪಾಡದೆ ಮಾಹಿತಿ ಬಹಿರಂಗಪಡಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮರಸ್ವಾಮಿ ಕಳ್ಳರ ರಕ್ಷಣೆಗೆ ನಿಂತಿದ್ದಾರೆ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪ ಗೈರುಹಾಜರಿ!

ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಸುವ ಸಮಯದಲ್ಲಿ ತಂದೆ ಬಿ.ಎಸ್. ಯಡಿಯೂರಪ್ಪ ಗೈರು ಹಾಜರಿ ಎದ್ದುಕಾಣುತ್ತಿತ್ತು.

ಬೆಂಗಳೂರಿನಿಂದ ಅವರು ಹೊರಡಬೇಕಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ ಬರಲು ಸಾಧ್ಯವಾಗಲಿಲ್ಲ ಎಂದು ಪಕ್ಷದ ಮುಖಂಡರು ಮಾಹಿತಿ ನೀಡಿದರು.

ಶಾಸಕರಾದ ಕೆ.ಎಸ್.ಈಶ್ವರಪ್ಪ, ಹಾಲಪ್ಪ ಹರತಾಳು, ಎಸ್‌.ರುದ್ರೇಗೌಡ ಹಾಗೂ ಪತ್ನಿ ತೇಜಸ್ವಿನಿ ಜತೆಗೂಡಿ ಗುರುವಾರ ಮಧ್ಯಾಹ್ನ 1.30ಕ್ಕೆ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.