ADVERTISEMENT

ಗುಜರಾತ್ -ಅಖಾಡದಲ್ಲೊಂದು ಸುತ್ತು| ಮೊರ್ಬಿಯಲ್ಲಿ ಗೆಲುವಿನ ‘ದಡ’ ಮುಟ್ಟಲು ಹರಸಾಹಸ

ಮಂಜುನಾಥ್ ಹೆಬ್ಬಾರ್‌
Published 27 ನವೆಂಬರ್ 2022, 20:02 IST
Last Updated 27 ನವೆಂಬರ್ 2022, 20:02 IST
ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ನವೆಂಬರ್ 1ರಂದು ತೂಗು ಸೇತುವೆ ಕುಸಿದ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಕುಳಿತಿದ್ದ ದೃಶ್ಯ.
ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ನವೆಂಬರ್ 1ರಂದು ತೂಗು ಸೇತುವೆ ಕುಸಿದ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಕುಳಿತಿದ್ದ ದೃಶ್ಯ.    

ಮೊರ್ಬಿ (ಗುಜರಾತ್‌): ಇಲ್ಲಿನ ತೂಗುಸೇತುವೆ ಕುಸಿದು 135 ಜನರನ್ನು ಬಲಿ ಪಡೆದ ಮಚ್ಚೂ ನದಿ ಈಗ ಶಾಂತವಾಗಿದೆ. ಯಾವುದೇ ದುರಂತ ಘಟಿಸಿಯೇ ಇಲ್ಲ ಎಂಬಂತೆ ನೀರು ಪ್ರಶಾಂತವಾಗಿ ಹರಿಯುತ್ತಿದೆ. ಆದರೆ, 135 ಕುಟುಂಬಗಳನ್ನು ಶೋಕದ ಮಡುವಿಗೆ ನೂಕಿರುವ ದುರಂತದ ಬಗ್ಗೆ ಜನರಲ್ಲಿ ಕೋಪ ದಟ್ಟವಾಗಿದೆ. ಇದರಿಂದಾಗಿ, ತನ್ನ ಭದ್ರಕೋಟೆಯಲ್ಲಿ ಮತ್ತೊಮ್ಮೆ ಗೆಲುವಿನ ‘ದಡ’ ಸೇರಲು ಬಿಜೆಪಿ ಹರಸಾಹಸ ಪಡಬೇಕಿದೆ.

ಮಂಜುನಾಥ ಹೆಬ್ಬಾರ್

ಮಚ್ಚೂ ನದಿಯ ಮೇಲೆ ಬ್ರಿಟಿಷರು ನಿರ್ಮಿಸಿದ್ದ ಈ ಸೇತುವೆ 145 ವರ್ಷಗಳಷ್ಟು ಹಳೆಯದು. ಬ್ರಿಟಿಷರ ಕಾಲದ ಎಂಜಿನಿಯರಿಂಗ್‌ ಬೆರಗು ಎಂದು ಗುಜರಾತ್‌ ಸರ್ಕಾರ ಈ ಸೇತುವೆಯನ್ನು ಬಣ್ಣಿಸಿದೆ. ಇದೀಗ, ಈ ತೂಗುಸೇತುವೆಯೇ ಬಿಜೆಪಿಗೆ ಸಂಕಟ ತಂದೊಡ್ಡಿದೆ. ರಾಜ್ಯದ ಬೇರೆ ಕ್ಷೇತ್ರಗಳ ಚುನಾವಣಾ ಬ್ಯಾನರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಮುಂಚೂಣಿಯಲ್ಲಿ ಇದ್ದರೆ, ಮೊರ್ಬಿ ಕ್ಷೇತ್ರದಲ್ಲಿ ಪಕ್ಷದ ಬ್ಯಾನರ್‌ಗಳಲ್ಲಿ ಪ್ರಮುಖ ಸ್ಥಾನ ಸಿಕ್ಕಿರುವುದು ಪಕ್ಷದ ಅಭ್ಯರ್ಥಿಗೆ. ದುರಂತದ ವೇಳೆ ಹಲವು ಜನರನ್ನು ರಕ್ಷಿಸಿದ ಸಾಹಸಿ ನಮ್ಮ ಅಭ್ಯರ್ಥಿ ಎಂದು ಬಿಜೆಪಿ ಬಿಂಬಿಸುತ್ತಿದೆ.

2016ರಲ್ಲಿ ಕೋಲ್ಕತ್ತದಲ್ಲಿ ಸೇತುವೆಯೊಂದು ಕುಸಿದು 20 ಮಂದಿ ಮೃತಪಟ್ಟಿದ್ದರು. ಬಳಿಕ, ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ಚುನಾವಣೆಯ ಸಂದರ್ಭದಲ್ಲಿ ನಡೆದಿರುವ ಈ ದುರಂತವು ಮಮತಾ ಬ್ಯಾನರ್ಜಿಯ ದುರಾಡಳಿತಕ್ಕೆ ಸಾಕ್ಷಿ. ಮತದಾರರಿಗೆ ದೇವರು ಸಂದೇಶ ನೀಡಿದ್ದಾನೆ’ ಎಂದು ಪ್ರಧಾನಿ ವ್ಯಾಖ್ಯಾನಿಸಿದ್ದರು. ಈ ಮಾತನ್ನು ಆಮ್ ಆದ್ಮಿ ಪಕ್ಷದ ನಾಯಕರು ಪ್ರಚಾರದ ವೇಳೆ ಪ್ರಸ್ತಾಪಿಸಿ, ‘ಗುಜರಾತ್‌ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ದೇವರು ಈಗ ಕನ್ನಡಿ ಹಿಡಿದಿದ್ದಾನೆ’ ಎಂದು ವ್ಯಂಗ್ಯವಾಗಿ ಬಾಣ
ಎಸೆಯುತ್ತಿದ್ದಾರೆ.

ADVERTISEMENT

‘ಪ್ರಜಾವಾಣಿ’ ಪ್ರತಿನಿಧಿಗೆ ಮೊರ್ಬಿ ಪಟ್ಟಣದಲ್ಲಿ ಮಾತಿಗೆ ಸಿಕ್ಕ ಖಾಸಗಿ ಕಂಪನಿ ಉದ್ಯೋಗಿ ಜಿತೇಂದ್ರ ಈ ಮಾತನ್ನು ನೆನಪಿಸಿಕೊಂಡರು. ‘ಗುಜರಾತ್‌ ಮಾದರಿ ಅಭಿವೃದ್ಧಿಯನ್ನು ಇಡೀ ದೇಶಕ್ಕೆ ಮಾದರಿ ಎಂಬಂತೆ ದಶಕಗಳಿಂದ ಬಿಂಬಿಸಿ ಜನರ ಮನಸ್ಸಲ್ಲಿ ಅಚ್ಚೊತ್ತುವಂತೆ ಮಾಡಲಾಗಿದೆ.ಅದೊಂದು ಭ್ರಮೆ ಎಂಬುದಕ್ಕೆ ಈ ದುರಂತವೇಪ್ರತ್ಯಕ್ಷ ಸಾಕ್ಷಿ. ಪ್ರಧಾನಿಯವರ ತವರು ರಾಜ್ಯದಲ್ಲೇಭ್ರಷ್ಟಾಚಾರ ದೊಡ್ಡ ಪ್ರಮಾಣದಲ್ಲಿ ತಾಂಡವವಾಡುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ. ಈ ಭ್ರಮೆ ಕಳಚುವ ಕೆಲಸವನ್ನು ವಿರೋಧ ಪಕ್ಷದವರು ಮಾಡುತ್ತಿಲ್ಲ. ವಿರೋಧ ಪಕ್ಷದವರ ಇಂತಹ ಧೋರಣೆಯಿಂದಾಗಿಯೇ ಬಿಜೆಪಿ ಸಲೀಸಾಗಿ ಚುನಾವಣೆ ಗೆಲ್ಲುತ್ತಾ ಬಂದಿದೆ’ ಎಂದು ಅವರು ವಿಶ್ಲೇಷಿಸಿದರು.

‘ಈ ತೂಗುಸೇತುವೆಯೇ ಭ್ರಷ್ಟಾಚಾರದ ಪ್ರತಿಬಿಂಬ. ಈ ಸೇತುವೆಯನ್ನು ನವೀಕರಣಕ್ಕಾಗಿ ಆರು ತಿಂಗಳು ಮುಚ್ಚಿದರು. ತೆರೆದ ಏಳೇ ದಿನಗಳಲ್ಲಿ ದುರಂತ ಸಂಭವಿಸಿತು. ಗುತ್ತಿಗೆಯ ಬಹುಪಾಲು ಮೊತ್ತವನ್ನು ಲೂಟಿ ಹೊಡೆದಿದ್ದೇ ಇದಕ್ಕೆ ಕಾರಣ. ಇದರ ಬಗ್ಗೆ ಸರ್ಕಾರಕ್ಕೆ ವಿಷಾದ ಇದ್ದಂತಿಲ್ಲ. ಸಣ್ಣ ಮೀನುಗಳನ್ನಷ್ಟೇ ಜೈಲಿಗೆ ಅಟ್ಟಿದ್ದಾರೆ’ ಎಂದು ಖಾಸಗಿ ಕಂಪನಿ ಉದ್ಯೋಗಿ ಕರಣ್‌ ‍ಪಟೇಲ್‌ ಬೇಸರ ವ್ಯಕ್ತಪಡಿಸಿದರು.

1995ರ ಬಳಿಕ ಮೊದಲ ಬಾರಿಗೆ 2017ರಲ್ಲಿ ಬಿಜೆಪಿ ಕೋಟೆಯನ್ನು ಭೇದಿಸಿದ್ದ ಕಾಂಗ್ರೆಸ್‌ ಮೊರ್ಬಿ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿತ್ತು. ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಬ್ರಿಜೇಶ್‌ ಮೆಜ್ರಾ ಅವರು 2020ರ ರಾಜ್ಯಸಭಾ ಚುನಾವಣೆಗೆ ಮುನ್ನಕಮಲ ಪಡೆಗೆ ಜಿಗಿದಿದ್ದರು. ಉಪ ಚುನಾವಣೆಯಲ್ಲಿ 3 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಬಳಿಕ ಕಾರ್ಮಿಕ ಸಚಿವರೂ ಆಗಿದ್ದರು. ಬಿಜೆಪಿ ಅವರಿಗೆ ಈ ಸಲ ಟಿಕೆಟ್‌ ನಿರಾಕರಿಸಿದೆ.

‘ಮೊರ್ಬಿ ದುರಂತದ ವೇಳೆ ಜನರನ್ನು ರಕ್ಷಿಸಿದ ಸಾಹಸಿ’ ಎಂದು ಬಿಂಬಿಸಿಕೊಂಡ ಮಾಜಿ ಶಾಸಕ ಕಾಂತಿಲಾಲ್‌ ಅಮ್ರತಿಯಾ ಅವರಿಗೆ ಕೇಸರಿ ಪಡೆ ಮಣೆ ಹಾಕಿದೆ. ಐದು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದ ಅವರು 2017ರ ಚುನಾವಣೆಯಲ್ಲಿ ಮೆಜ್ರಾ ವಿರುದ್ಧ ಸೋತಿದ್ದರು. ಅಕ್ಟೋಬರ್‌ 30ರಂದು ತೂಗುಸೇತುವೆ ಕುಸಿದ ವೇಳೆ ಕಾಂತಿಲಾಲ್‌ ಅವರು ಮಚ್ಚೂ ನದಿಗೆ ಹಾರಿ ಜನರನ್ನು ರಕ್ಷಿಸಿದ ವಿಡಿಯೊಗಳು ಹಾಗೂ ಫೋಟೋಗಳನ್ನು ದೊಡ್ಡ ಪ್ರಮಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಹಿರೀಕ ರಾಜಕಾರಣಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಬೆಂಬಲಿಗರ ಪಡೆಯನ್ನು ಹೊಂದಿದ್ದಾರೆ. 2017ರ ಸೋಲಿನ ಅನುಕಂಪ ‘ಕೈ’ ಹಿಡಿಯಲಿದೆ ಎಂಬ ವಿಶ್ವಾಸದಲ್ಲಿ ಆಡಳಿತ ಪಕ್ಷ ಇದೆ.

ಹಿರಿಯ ಮುಖಂಡ ಜಯಂತಿಲಾಲ್‌ ಜೆರಾಜ್‌ಬಾಯಿ ಪಟೇಲ್‌ ಅವರನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಿದೆ. ಕಾಂಗ್ರೆಸ್‌ ಮೊರ್ಬಿ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಅವರು, ಐದು ಬಾರಿ (1990ರಿಂದ 2007ರ ಅವಧಿಯಲ್ಲಿ)ಸೋಲು ಅನುಭವಿಸಿದ್ದರು. ನಾಲ್ಕು ಸಲ ಕಾಂತಿಲಾಲ್ ಅವರ ವಿರುದ್ಧವೇ ಪರಾಭವ ಅನುಭವಿಸಿದ್ದರು. ಪಕ್ಷ ಅವರಿಗೆ ಮತ್ತೆ ಟಿಕೆಟ್‌ ನೀಡಿದ್ದು 2020ರ ಉಪಚುನಾವಣೆ
ಯಲ್ಲಿ. ಅವರು ಆಗ ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ತಮ್ಮ ಸೋಲುಗಳು ಹಾಗೂ ಅದರ ಕಾರಣಗಳ ಬಗ್ಗೆ ಹೆಚ್ಚು ಮಾತನಾಡಲು ಇಷ್ಟ ಪಡಲಿಲ್ಲ. ‘ಹಿಂದಿನ ಚುನಾವಣೆಗಳಲ್ಲಿ ನಾನು ಸೋತಿದ್ದು ಕೆಲವೇ ಸಾವಿರ ಮತಗಳ ಅಂತರದಿಂದ. ಈ ಬಾರಿ ಅನುಕಂಪದ ಅಲೆ ನನ್ನ ಕೈ ಹಿಡಿಯಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಆಮ್ ಆದ್ಮಿ ಪಕ್ಷವು ಯುವ ಮುಂದಾಳು ಪಂಕಜ್‌ ರಣಸೂರಿಯಾ ಅವರನ್ನು ಕಣಕ್ಕೆ ಇಳಿಸಿದೆ.⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.