ADVERTISEMENT

ಸಂದರ್ಶನ: ಆರ್‌.ಆರ್‌ ನಗರ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

​ಪ್ರಜಾವಾಣಿ ವಾರ್ತೆ
Published 5 ಮೇ 2023, 4:49 IST
Last Updated 5 ಮೇ 2023, 4:49 IST
ಮುನಿರತ್ನ, ಡಾ.ನಾರಾಯಣಸ್ವಾಮಿ, ಕುಸುಮಾ ಎಚ್.
ಮುನಿರತ್ನ, ಡಾ.ನಾರಾಯಣಸ್ವಾಮಿ, ಕುಸುಮಾ ಎಚ್.   

ಸೋಲಿಸಲು ಇದು ಕನಕಪುರ ಅಲ್ಲ: ಮುನಿರತ್ನ(ಬಿಜೆಪಿ)

* ನೀವು ಏನು ಮಾಡುತ್ತೀರಿ ಎಂಬ ಕಾರಣಕ್ಕೆ ಜನ ನಿಮಗೆ ಮತ ಹಾಕಬೇಕು?

ಜನ ಅಭಿವೃದ್ಧಿಗೆ ಮತ ನೀಡುತ್ತಿದ್ದಾರೆ. 11 ಶಾಲೆಗಳನ್ನು ಹೈಟೆಕ್‌ ಆಗಿ ನಿರ್ಮಿಸುತ್ತಿದ್ದೇವೆ. ಅವುಗಳನ್ನು ಕೇಂದ್ರೀಯ ವಿದ್ಯಾಲಯ ಅಥವಾ ಸೈನಿಕ ಶಾಲೆಗಳಲ್ಲಿ ವಿಲೀನಗೊಳಿಸಲು ಕೇಂದ್ರ ಸಚಿವರ ಜತೆ ಮಾತನಾಡುತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ 25 ಸಾವಿರ ಮಕ್ಕಳಿಗೆ ಈ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕು ಎಂಬುದು ನನ್ನ ಕನಸು. ಮೇಲ್ಸೇತುವೆ, ಆಸ್ಪತ್ರೆ, ಉದ್ಯಾನ ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿವೆ.

* ನೀವು ಗೆಲ್ಲುತ್ತೀರಿ ಎಂಬುದಕ್ಕೆ ನಿಮಗಿರುವ ಬೆಂಬಲ ಎಂತದ್ದು?‌

ನನಗೆ ಎದುರಾಳಿಯಾಗಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧೆ ಇದೆ. ಡಾ.ನಾರಾಯಣಸ್ವಾಮಿ ಒಳ್ಳೆಯ ವ್ಯಕ್ತಿ ಎಂಬ ಕಾರಣಕ್ಕೆ ಅವರ ಬಗ್ಗೆ ಜನರ ಒಲವು ಹೆಚ್ಚಿದೆ. ಆದ್ದರಿಂದ ಜೆಡಿಎಸ್ ಮತ್ತು ಬಿಜೆಪಿ ನಡುವೆಯೇ ನೇರ ಸ್ಪರ್ಧೆ ಇದೆ. ನನ್ನ ಪರವಾಗಿ ಮತದಾರರು ಇದ್ದಾರೆ, ತೀರ್ಪನ್ನು ಕಾದು ನೋಡೊಣ.

* ಕಾಂಗ್ರೆಸ್‌ ಅಭ್ಯರ್ಥಿ ಜತೆಗೆ ನಿಮ್ಮನ್ನು ಸೋಲಿಸಲು ಸಂಸದ ಡಿ.ಕೆ.ಸುರೇಶ್‌ ನಿಂತಿದ್ದಾರೆ. ಏನಂತಿರಿ?

ಗೆಲ್ಲಿಸಲು, ಸೋಲಿಸಲು ರಾಜರಾಜೇಶ್ವರಿನಗರದಲ್ಲಿ ಜೀತದಾಳುಗಳಿಲ್ಲ. ಮತದಾರ ದೇವರುಗಳು ತೀರ್ಪು ಏನಿದೆಯೋ ಗೊತ್ತಿಲ್ಲ. ಜನ ಜೀತದಾಳುಗಳಾಗಿದ್ದರೆ ಇವರು ಹೇಳಿದಂತೆ ಕೇಳುತ್ತಿದ್ದರು. ಆಗ ನನ್ನನ್ನು ಸೋಲಿಸುತ್ತೇನೆ ಎಂದು ಹೇಳಬಹುದು. ಇದು ಕನಕಪುರ ಅಲ್ಲ, ಬೆಂಗಳೂರು. ಇಲ್ಲಿ ಶಾಂತಿ ನೆಲೆಸಿದೆ, ಇದನ್ನು ಕೆ.ಜೆ.ಹಳ್ಳಿ –ಡಿ.ಜೆ.ಹಳ್ಳಿ ಮಾಡಬಾರದು.

ADVERTISEMENT
ಡಾ.ನಾರಾಯಣಸ್ವಾಮಿ

ಬೇರೆಯವರ ಅಬ್ಬರವಿದ್ದರೂ ಮತ ಜೆಡಿಎಸ್‌ಗೆ: ಡಾ.ನಾರಾಯಣಸ್ವಾಮಿ(ಜೆಡಿಎಸ್‌)

* ನೀವು ಏನು ಮಾಡುತ್ತೀರಿ ಎಂಬ ಕಾರಣಕ್ಕೆ ಜನ ನಿಮಗೆ ಮತ ಹಾಕಬೇಕು?

ಜೆಡಿಎಸ್ ನೀಡಿರುವ ಪಂಚರತ್ನ ಯೋಜನೆಗಳು ನಮ್ಮ ಪಕ್ಷಕ್ಕೆ ಮತ ತರಲಿವೆ. ಈ ಕ್ಷೇತ್ರದಲ್ಲಿ ಆರ್ಥಿಕವಾಗಿ ದುರ್ಬಲವಾದ ಜನ ಇದ್ದಾರೆ. 10 ಸಾವಿರ ಮನೆಗಳನ್ನು ಕೊಟ್ಟಿಕೊಟ್ಟರೆ ನಮ್ಮ ಬದುಕು ಸಾರ್ಥಕ ಎಂದು ಭಾವಿಸಿದ್ದೇನೆ. ಕ್ಷೇತ್ರದಲ್ಲಿ ಕೇಂದ್ರೀಯ ವಿದ್ಯಾಲಯ ಇಲ್ಲ. ಅದನ್ನು ತಂದರೆ ಐದು ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಗುಣಮಟ್ಟದ ಶಿಕ್ಷಣ ಪಡೆಯುತ್ತಾರೆ. 20 ವರ್ಷಗಳಲ್ಲಿ ಅವರ ಜೀವನ ಮಟ್ಟ ಬದಲಾಗಲಿದೆ. ಆ ಮೂಲಕ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಇದೆ.

* ನೀವು ಗೆಲ್ಲುತ್ತೀರಿ ಎಂಬುದಕ್ಕೆ ನಿಮಗಿರುವ ಬೆಂಬಲ ಎಂತದ್ದು?‌

ಕ್ಷೇತ್ರದಲ್ಲಿ ಯಾವುದೇ ಮೂಲೆಗೂ ಹೋದರೂ ಜನ ಬೆಂಬಲ ದೊರಕುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಅವರ ಪರವಾದ ಅಲೆ ಕೂಡ ಇದೆ. ಮೈಸೂರು ಮಂಡ್ಯ ಹಾಸನ ಚಿಕ್ಕಬಳ್ಳಾಪುರ ಸೇರಿ ಜೆಡಿಎಸ್ ಪ್ರಬಲವಾಗಿರುವ ಜಿಲ್ಲೆಗಳ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದಲ್ಲಿದ್ದಾರೆ. ಎದುರಾಳಿಗಳು ಎಷ್ಟೇ ಅಬ್ಬರದ ಪ್ರಚಾರ ನಡೆಸಿದರೂ ಮತಗಳು ಜೆಡಿಎಸ್‌ಗೆ ಬರಲಿವೆ. ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ನೀಡಲು ಜನ ಸಂಕಲ್ಪ ಮಾಡಿದ್ದಾರೆ.

* ನಿಮ್ಮ ನಿಜವಾದ ಎದುರಾಳಿ ಯಾರು?

ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳೂ ಎದುರಾಳಿಗಳು

ಕುಸುಮಾ ಎಚ್.

ಜನ ಬದಲಾವಣೆ ಬಯಸುತ್ತಿದ್ದಾರೆ: - ಕುಸುಮಾ ಎಚ್‌.(ಕಾಂಗ್ರೆಸ್‌)

* ನೀವು ಏನು ಮಾಡುತ್ತೀರಿ ಎಂಬ ಕಾರಣಕ್ಕೆ ಜನ ನಿಮಗೆ ಮತ ಹಾಕಬೇಕು?

ನಾನೊಬ್ಬ ಶಿಕ್ಷಕಿಯಾಗಿ ಶಿಕ್ಷಣಕ್ಕೆ ಆದ್ಯತೆ ನೀಡುತ್ತೇನೆ. ನಮ್ಮ ಕ್ಷೇತ್ರದಲ್ಲಿ ಸರ್ಕಾರಿ ಪ್ರೌಢಶಾಲೆಗಳೇ ಇಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ಗ್ರಂಥಾಲಯಗಳಿಲ್ಲ. ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ಇವುಗಳ ನಿರ್ಮಾಣಕ್ಕೆ ಮೊದಲ ಆದ್ಯತೆ. ಕೈಗೆಟಕುವ ದರದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಮತದಾರರ ಗುರುತಿನ ಚೀಟಿ ರೇಷನ್ ಕಾರ್ಡ್‌ ಪಡೆಯಲು 10 ರಿಂದ 15 ಬಾರಿ ಕಚೇರಿ ಅಲೆದಾಡುವ ಸ್ಥಿತಿ ಇದೆ. ಇವುಗಳನ್ನು ತಪ್ಪಿಸಿ ಎಲ್ಲಾ ಸೌಲಭ್ಯ ಒಂದೇ ಕಡೆ ದೊರೆಯುವಂತೆ ಬ್ಲಾಕ್ ಮಟ್ಟದಲ್ಲಿ ಕೇಂದ್ರಗಳನ್ನು ತೆರೆಯುವ ಉದ್ದೇಶ ಇದೆ. ಪರಿಸರ ಮತ್ತು ಕೆರೆ ಸಂರಕ್ಷಣೆಗಳ ಬಗ್ಗೆಯೂ ಆದ್ಯತೆ ನೀಡಲಾಗುವುದು.

* ನೀವು ಗೆಲ್ಲುತ್ತೀರಿ ಎಂಬುದಕ್ಕೆ ನಿಮಗಿರುವ ಬೆಂಬಲ ಎಂತದ್ದು?‌

ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಜನ ಪ್ರೀತಿ ಮತ್ತು ಗೌರವದಿಂದ ಕಾಣುತ್ತಿದ್ದಾರೆ. ಉಪಚುನಾವಣೆಯಲ್ಲಿ ಪ್ರಚಾರಕ್ಕೆ 15 ದಿನ ಮಾತ್ರ ಅವಕಾಶ ಸಿಕ್ಕಿತ್ತು. ದೊಡ್ಡ ಕ್ಷೇತ್ರವಾಗಿದ್ದರಿಂದ ಎಲ್ಲರನ್ನು ತಲುಪಲು ಸಾಧ್ಯವಾಗಿರಲಿಲ್ಲ. ಈಗ ಎರಡೂವರೆ ವರ್ಷಗಳಿಂದ ಜನರೊಟ್ಟಿಗೆ ಇದ್ದು ವಿಶ್ವಾಸ ಗಳಿಸಿದ್ದೇನೆ. 40 ಸಾವಿರಕ್ಕೂ ಹೆಚ್ಚು ಮನೆಗೆ ಭೇಟಿ ನೀಡಿದ್ದೇನೆ. ಜನ ಬದಲಾವಣೆ ಬಯಸುತ್ತಿದ್ದಾರೆ. ನಾನು ಗೆಲುವುದು ಗ್ಯಾರಂಟಿ.

* ನಿಮ್ಮ ನಿಜವಾದ ಎದುರಾಳಿ ಯಾರು?

ಪ್ರಮುಖವಾಗಿ ಬಿಜೆಪಿ ಅಭ್ಯರ್ಥಿಯೇ ನನ್ನ ಎದುರಾಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.