ADVERTISEMENT

ಮುಖಾಮುಖಿ: ಕಡಪ (ಆಂಧ್ರಪ್ರದೇಶ)

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 19:51 IST
Last Updated 3 ಏಪ್ರಿಲ್ 2024, 19:51 IST
   

ವೈ.ಎಸ್.ಶರ್ಮಿಳಾ (ಕಾಂಗ್ರೆಸ್‌)

ಆಂಧ್ರಪ್ರದೇಶದ ಕಡಪ ಲೋಕಸಭಾ ಕ್ಷೇತ್ರವು ಈ ಬಾರಿ ಮಾಜಿ ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಕುಟುಂಬದ ಸದಸ್ಯರ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ರಾಜಶೇಖರ ರೆಡ್ಡಿ ಅವರ ಪುತ್ರಿ ಹಾಗೂ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರ ಸಹೋದರಿ ವೈ.ಎಸ್‌. ಶರ್ಮಿಳಾ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಆಂಧ್ರ ಪ್ರದೇಶ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆಯೂ ಆಗಿರುವ ಶರ್ಮಿಳಾ ಅವರು, ಚಿಕ್ಕಪ್ಪ ವೈ.ಎಸ್‌. ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣದ ಸಂಚಿನಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ವೈ.ಎಸ್‌.ಅವಿನಾಶ್‌ ರೆಡ್ಡಿ ಅವರನ್ನು ಸೋಲಿಸಲೇಬೇಕೆಂದು ಪಣತೊಟ್ಟು ಅಖಾಡಕ್ಕಿಳಿದಿದ್ದಾರೆ. ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ್ದ ಶರ್ಮಿಳಾ ಅವರು, 2021ರಲ್ಲಿ ವೈಎಸ್‌ಆರ್‌ ತೆಲಂಗಾಣ ಪಕ್ಷವನ್ನು ಸ್ಥಾಪಿಸಿದ್ದರು. ಈಚೆಗೆ ಈ ಪಕ್ಷವನ್ನು ಕಾಂಗ್ರೆಸ್‌ ಜೊತೆಗೆ ವಿಲೀನಗೊಳಿಸಿದ್ದರು.

ವೈ.ಎಸ್‌. ಅವಿನಾಶ್‌ ರೆಡ್ಡಿ (ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ)

ಕಡಪ ಕ್ಷೇತ್ರದಿಂದ ಎರಡು ಬಾರಿ ಸಂಸತ್‌ಗೆ ಆಯ್ಕೆಯಾಗಿರುವ ವೈ.ಎಸ್‌.ಅವಿನಾಶ್‌ ರೆಡ್ಡಿ ಈ ಬಾರಿಯೂ ಸ್ಪರ್ಧೆಗಿಳಿದಿದ್ದಾರೆ. ಕಳೆದ ಬಾರಿ ಎದುರಾಳಿ ಟಿಡಿಪಿ ಅಭ್ಯರ್ಥಿಯನ್ನು ಪರಾಭವಗೊಳಿಸಿದ್ದ ಇವರಿಗೆ ಈ ಬಾರಿ ಸಂಬಂಧಿ ಶರ್ಮಿಳಾ ಅವರು ಕಣಕ್ಕಿಳಿದಿರುವುದರಿಂದ ಭಾರಿ ಸವಾಲು ಎದುರಾಗಿದೆ. 2019 ಮಾರ್ಚ್‌ 15ರಂದು ನಡೆದಿದ್ದ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ಸಂಚಿನಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಇವರಿಗೆ ಮುಖ್ಯಮಂತ್ರಿ ಜಗನ್ ಮೋಹನ್‌ ರೆಡ್ಡಿ ರಕ್ಷಣೆ ನೀಡುತ್ತಿದ್ದಾರೆಂದು ಈ ಹಿಂದೆ ಶರ್ಮಿಳಾ  ಆರೋಪಿಸಿದ್ದರು. ಈ ಬಾರಿ ಶರ್ಮಿಳಾ ಅವರೇ ಸ್ಪರ್ಧೆಗಿಳಿದಿರುವುದರಿಂದ ಕಣವು ತೀವ್ರ ಜಿದ್ದಾಜಿದ್ದಿಗೆ ವೇದಿಕೆಯಾಗಲಿದೆ. ಅವಿನಾಶ್‌ ಅವರು ಕಳೆದ ಚುನಾವಣೆಯಲ್ಲಿ 7,83,499 ಮತಗಳನ್ನು ಪಡೆದು ಜಯ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT