ಅಹಮದಾಬಾದ್ (ಗುಜರಾತ್):ದೇಶದ ಜನರ ಹೃದಯದಲ್ಲಿ ‘ಗುಜರಾತ್ ಮಾದರಿ’ ಎಂಬ ಕನಸನ್ನು ಬಿತ್ತಿ ಸತತ ಗೆಲುವಿನ ಕೊಯಿಲನ್ನು ಪಡೆದಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಈ ಸಲ ‘ದಾಖಲೆಯ ಗೆಲುವು’ ಸಾಧಿಸಲು ನಾನಾ ತಂತ್ರ ಹಾಗೂ ಪ್ರಯೋಗಗಳನ್ನು ಮಾಡುತ್ತಿದೆ.
ಗುಜರಾತ್ ಚುನಾವಣಾ ಫಲಿತಾಂಶವು ಮುಂದಿನ ವರ್ಷ ನಡೆಯಲಿರುವ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ ವಿಧಾನ ಸಭೆಗಳ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಅರಿತಿರುವ ಮೋದಿ– ಗೃಹ ಸಚಿವ ಅಮಿತ್ ಶಾ ಜೋಡಿ ತವರು ರಾಜ್ಯದಲ್ಲಿ ಬೆವರು ಹರಿಸುತ್ತಿದೆ.
ಗುಜರಾತ್ ರಾಜಕಾರಣವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದ ಪಟೇಲರ ಪ್ರಾಬಲ್ಯವನ್ನು ಮೊದಲ ಬಾರಿಗೆ ಮುರಿದವರು ಕಾಂಗ್ರೆಸ್‌ನ ಮಾಧವ ಸಿನ್ಹ ಸೋಲಂಕಿ. 1985ರ ಚುನಾವಣೆಯಲ್ಲಿ ‘ಕ್ಷತ್ರೀಯ–ಹರಿಜನ–ಆದಿವಾಸಿ–ಮುಸ್ಲಿಂ’ ಸಮುದಾಯ ಗಳನ್ನು ಒಳಗೊಂಡ ‘ಖಾಮ್ ಕೂಟ ಕಟ್ಟಿ ಕಾಂಗ್ರೆಸ್ ಅನ್ನು ಅಧಿಕಾರದ ಗದ್ದುಗೆಗೆ ಏರಿಸಿದರು. ಈ ಜಾತಿ ಸಮೀಕರಣದ ರಾಜಕೀಯ ಲಾಭ ಪಡೆದ ಕಾಂಗ್ರೆಸ್ ಆ ಚುನಾವಣೆಯಲ್ಲಿ 149 ಸ್ಥಾನಗಳನ್ನು (ಶೇ 55 ಮತ) ಪಡೆಯಿತು.
ಕಳೆದೆರಡು ದಶಕಗಳಲ್ಲಿ ಗುಜರಾತ್‌ನ ಜನರನ್ನು ಮೋಡಿ ಮಾಡಿದ ನರೇಂದ್ರ ಮೋದಿ ಅವರಿಗೂ ಈ ದಾಖಲೆಯ ಹತ್ತಿರ ಸುಳಿಯಲು ಸಾಧ್ಯವಾಗಿಲ್ಲ. ‘ಈ ಚುನಾವಣೆಯ ಲೆಕ್ಕಾಚಾರವೇ ಬೇರೆ. ಈ ಚುನಾವಣೆಯಲ್ಲಿ ಸೋಳಂಕಿ ಅವಧಿಯ ದಾಖಲೆಯನ್ನು ಪುಡಿಗಟ್ಟಿ ಪಕ್ಷವು ಅಧಿ ಕಾರದ ಚುಕ್ಕಾಣಿ ಹಿಡಿಯಲಿದೆ’ ಎಂಬುದು ಬಿಜೆಪಿ ಕಾರ್ಯಕರ್ತರ ವಿಶ್ವಾಸದ ನುಡಿ.
‘ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ಯಾತ್ರೆ’ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿರುವ ಹೊತ್ತಿನಲ್ಲಿ ‘ಹಿಂದುತ್ವದ ಪ್ರಯೋಗಶಾಲೆ’ಯಲ್ಲಿ ಸ್ವಲ್ಪ ಏರುಪೇರಾದರೂ ಇಡೀ ದೇಶಕ್ಕೆ ಬೇರೆ ರೀತಿಯ ಸಂದೇಶ ಹೋಗಲಿದೆ’ ಎಂದು ಗಾಂಧಿನಗರದ ಬಿಜೆಪಿ ಮುಖಂಡ ಹಿತೇಂದ್ರ ಠಾಕೂರ್ ವಿಶ್ಲೇಷಿಸುತ್ತಾರೆ.
ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ನೇತೃತ್ವದ ಎಡರಂಗಗಳ ಸರ್ಕಾರ ಸತತ ಏಳು ಬಾರಿ ಅಧಿಕಾರಕ್ಕೆ ಏರಿತ್ತು. ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ 1995ರಿಂದ (6 ಬಾರಿ) ಸತತವಾಗಿ ಅಧಿಕಾರದಲ್ಲಿದೆ. ಒಂದು ವೇಳೆ, ಈ ಬಾರಿಯೂ ಅಧಿಕಾರ ಹಿಡಿದರೆ, ಸಿಪಿಎಂ ದಾಖಲೆಯನ್ನು ಸರಿಗಟ್ಟಿದಂತಾಗುತ್ತದೆ. ಬಿಜೆಪಿಯು ನರೇಂದ್ರ ಮೋದಿ ನೇತೃತ್ವದಲ್ಲಿ ನಾಲ್ಕು ಚುನಾವಣೆಗಳನ್ನು (2002, 2007, 2012 ಹಾಗೂ 2017) ಎದುರಿಸಿದೆ. 2002ರಲ್ಲಿ ಕೋಮು ದಂಗೆಯ ಬೆನ್ನಲ್ಲೇ ನಡೆದ ಚುನಾವಣೆಯಲ್ಲಿ ಬಿಜೆಪಿ 127 ಸ್ಥಾನಗಳನ್ನು ಗಳಿಸಿತು. 2007ರಲ್ಲಿ 117 ಹಾಗೂ 2012ರಲ್ಲಿ 115 ಸ್ಥಾನಗಳನ್ನು ಪಡೆಯಿತು. 2017ರಲ್ಲಿ ಬಿಜೆಪಿ ತಿಣುಕಾಡಿ ಗೆದ್ದಿದ್ದು 99 ಸ್ಥಾನಗಳನ್ನು.
ಬಳಿಕ ಚುರುಕಾದ ಕೇಸರಿ ಪಡೆ 2020ರಲ್ಲಿ ಕಾಂಗ್ರೆಸ್‌ನ 16 ಶಾಸಕರನ್ನು ಸೆಳೆದುಕೊಂಡಿತು. ಕಳೆದೊಂದು ತಿಂಗಳಲ್ಲೇ ಕಾಂಗ್ರೆಸ್‌ನ ಹಲವು ಮುಖಂಡರು ಬಿಜೆಪಿ ಪಾಳಯ ಸೇರಿಕೊಂಡಿದ್ದಾರೆ. 2017ರ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭೀತಿ ಹುಟ್ಟಿಸಿದ್ದ ಯುವ ಮುಖಂಡರಾದ ಹಾರ್ದಿಕ್ ಪಟೇಲ್ ಹಾಗೂ ಅಲ್ಪೆಶ್ ಠಾಕೂರ್ ಅವರು ಈಗ ಮೋದಿ ನೆರಳಲ್ಲೇ ಆಶ್ರಯ ಪಡೆದಿದ್ದಾರೆ. ಕಮಲದ ಪಾಳಯದಲ್ಲೇ ಭವಿಷ್ಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಪಕ್ಷವು ‘ಅಭಿನವ ಪ್ರಯೋಗ’ದ ಹೆಸರಿನಲ್ಲಿ ಕಳೆದ ವರ್ಷ ಮುಖ್ಯಮಂತ್ರಿ ಹಾಗೂ ಇಡೀ ಸಚಿವ ಸಂಪುಟವನ್ನು ಬದಲಿಸಿತು. ಈ ಚುನಾವಣೆಯಲ್ಲಿ 42 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಇದು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ ಚಾಣಾಕ್ಷ ನಡೆಗೆ ಸಾಕ್ಷಿ. ಇದರಿಂದ ಭರಪೂರ ಚುನಾವಣಾ ಫಸಲು ಸಿಗಲಿದೆ ಎಂದೂ ಬಿಜೆಪಿ ಕಾರ್ಯಕರ್ತರು ಹೇಳುತ್ತಾರೆ.
ಉತ್ತರ ಪ‍್ರದೇಶದ ಚುನಾವಣೆ ಮುಗಿದ ಬಳಿಕ ಉಳಿದ ಪಕ್ಷಗಳ ಮುಖಂಡರು ವಿಶ್ರಾಂತಿಯ ಮೊರೆ ಹೋದರು. ಫಲಿತಾಂಶದ ಮರುದಿನವೇ ನರೇಂದ್ರ ಮೋದಿ ಅವರು ಗುಜರಾತ್‌ಗೆ ಧಾವಿಸಿ ಬಂದು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು. ಕಳೆದ ನಾಲ್ಕೈದು ತಿಂಗಳ ಅವಧಿಯಲ್ಲೇ ಪ್ರಧಾನಿ ಅವರು ₹1.10 ಲಕ್ಷ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ (ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸೇರಿ) ಕಣವನ್ನು ಹದಗೊಳಿಸಿದ್ದಾರೆ. ಕಳೆದ ಎರಡು ವಾರಗಳಲ್ಲೇ ಕನಿಷ್ಠ 35 ರ‍್ಯಾಲಿಗಳಲ್ಲಿ ಪಾಲ್ಗೊಂಡು ಎಲ್ಲ ವರ್ಗದ ಜನರ ವಿಶ್ವಾಸವನ್ನು ಗಳಿಸುವ ಯತ್ನ ಮಾಡಿದ್ದಾರೆ. ಬಹುತೇಕ ರ‍್ಯಾಲಿಗಳು ನಡೆದಿರುವುದು ಕಳೆದ ಚುನಾವಣೆಯಲ್ಲಿ ಪಕ್ಷ ಕಳಪೆ ಸಾಧನೆ ಮಾಡಿದ ಕ್ಷೇತ್ರಗಳಲ್ಲೇ ಎಂದು ಬಿಜೆಪಿ ಕಾರ್ಯಕರ್ತರುವಿಶ್ಲೇಷಿಸುತ್ತಾರೆ.
ಅಹಮದಾಬಾದ್‌ನ ಬಿಜೆಪಿ ಕಚೇರಿ ಬಳಿಯಲ್ಲಿ ಸಿಕ್ಕ ಬಿಜೆಪಿ ಕಾರ್ಯಕರ್ತ ರಘುಬೀರ್,‘ಅಭಿವೃದ್ಧಿ ಮಾದರಿ ಹಾಗೂ ಜಾತಿ ಸಮೀಕರಣವನ್ನು ಬದಲಿಸುವ ಮೂಲಕಇಡೀ ರಾಜ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಯಾಜಾಲದಲ್ಲಿ ಕೆಡವಿದ್ದಾರೆ. ರಾಜ್ಯದಲ್ಲಿ ಪ್ರಮುಖ ನಾಯಕರ ವಲಸೆಯಿಂದಾಗಿ ಕಾಂಗ್ರೆಸ್ ಅಸ್ಥಿಪಂಜರದಂತಾಗಿದೆ. ಅಬ್ಬರದ ಪ್ರಚಾರ ಮಾಡುತ್ತಿರುವ ಎಎಪಿ ತಳಮಟ್ಟದಲ್ಲಿ ಇಲ್ಲವೇ ಇಲ್ಲ’ ಎಂದು ವಿಶ್ಲೇಷಿಸುತ್ತಾ ಹೋದರು. ಅದಕ್ಕೆ ಧ್ವನಿಗೂಡಿಸಿದ ಮತ್ತೊಬ್ಬ ಕಾರ್ಯಕರ್ತ ಮಹೇಂದ್ರ ಪಟೇಲ್, ‘ಈ ಸಲದ ಚುನಾವಣಾ ಫಲಿತಾಂಶ ಯಾವ ಸಮೀಕ್ಷೆಗೂ ನಿಲುಕುವುದಿಲ್ಲ. ಶೇ 52ಕ್ಕಿಂತ ಹೆಚ್ಚು ಮತ ಪಡೆಯಲಿದ್ದೇವೆ. ನೀವು ಇದನ್ನು ಬರೆದಿಟ್ಟುಕೊಳ್ಳಿ’ ಎಂದು ವಿಶ್ವಾಸದಿಂದಲೇ ಹೇಳಿದರು. ‘ರಾಷ್ಟ್ರೀಯತೆ, ಹಿಂದುತ್ವ ಹಾಗೂ ಗುಜರಾತ್ ಅಸ್ಮಿತೆಯೇ ಜನರಿಗೆ ಪ್ರಮುಖವಾಗಲಿದೆ’ ಎಂಬುದು ಅವರ ಸ್ಪಷ್ಟ ನುಡಿ.
‘ಹಾಗಿದ್ದರೆ ಗುಜರಾತ್‌ನಲ್ಲಿ ಸಮಸ್ಯೆಗಳೇ ಇಲ್ಲವೇ’ ಎಂದು ಪ್ರಶ್ನಿಸಿದರೆ ಉತ್ತರಿಸಲು ಬಿಜೆಪಿ ಕಾರ್ಯಕರ್ತರು ತಡಬಡಾಯಿಸುತ್ತಾರೆ. ‘ಯಾವುದೇ ವ್ಯವಸ್ಥೆ ಶೇ 100ರಷ್ಟು ಪರಿಪೂರ್ಣವಾಗಿರಲು ಸಾಧ್ಯವೇ’ ಎಂದು ಮರು ಪ್ರಶ್ನೆ ಹಾಕುತ್ತಾರೆ. ‘ನಿರುದ್ಯೋಗ, ಬಡತನ, ಬೆಲೆ ಏರಿಕೆ ಸಮಸ್ಯೆ ಇದೆ. ರಾಜ್ಯದಲ್ಲಿ ಭ್ರಷ್ಟಾಚಾರವೂ ಇದೆ’ ಎಂದು ಒಪ್ಪಿಕೊಳ್ಳುತ್ತಾರೆ. ‘ಆದರೆ ನಿಮ್ಮ ರಾಜ್ಯದಷ್ಟು (ಕರ್ನಾಟಕ) ಇಲ್ಲ’ ಎಂದೂಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.