ADVERTISEMENT

ಅಭಿವೃದ್ಧಿ ಆಧಾರದಲ್ಲೇ ಪೈಪೋಟಿ

ಪ್ರಭಾವ ಬೀರದ ಪ್ರತ್ಯೇಕ ಧರ್ಮ ಹೋರಾಟ; ಮಹದಾಯಿ ಚಳವಳಿ

ಜೋಮನ್ ವರ್ಗಿಸ್
Published 5 ಮೇ 2018, 19:40 IST
Last Updated 5 ಮೇ 2018, 19:40 IST
ಅಭಿವೃದ್ಧಿ ಆಧಾರದಲ್ಲೇ ಪೈಪೋಟಿ
ಅಭಿವೃದ್ಧಿ ಆಧಾರದಲ್ಲೇ ಪೈಪೋಟಿ   

ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ನಡೆದ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಪ್ರಮುಖ ವೇದಿಕೆಯಾಗಿದ್ದು ಗದಗ ಜಿಲ್ಲೆ. ಇಲ್ಲಿನ ತೋಂಟದಾರ್ಯ ಮಠವು ಲಿಂಗಾಯತ ಚಳವಳಿಯ ಮುಂಚೂಣಿಯಲ್ಲಿತ್ತು. ವೀರಶೈವ– ಲಿಂಗಾಯತ ವಿಭಜನೆ ಬೇಡ ಎಂದು ಪಂಚಾಚಾರ್ಯರು ಬೀದಿಗಿಳಿದು ಹೋರಾಟ ನಡೆಸಿದ್ದೂ ಇದೇ ನೆಲದಲ್ಲಿ. ಇನ್ನೊಂದೆಡೆ, ಸಾವಿರ ದಿನಗಳನ್ನು ಪೂರೈಸಿರುವ ಮಹದಾಯಿ ಹೋರಾಟದ ಶಕ್ತಿಕೇಂದ್ರವೂ ಜಿಲ್ಲೆಯ ನರಗುಂದ ಪಟ್ಟಣ. ತೀರಾ ಇತ್ತೀಚಿನವರೆಗೆ ಇವೆಲ್ಲವೂ ಭಾರಿ ಸಂಚಲನ ಸೃಷ್ಟಿಸಿದ್ದ ವಿಷಯಗಳು. ಆದರೆ, ಈಗ ಇವು ಚುನಾವಣಾ ವಿಷಯಗಳಾಗಿಯೇ ಉಳಿದಿಲ್ಲ! ಧರ್ಮಕಾರಣ ಮತ್ತು ರಾಜಕಾರಣ ಜಿಲ್ಲೆಯಲ್ಲಿ ಪರಸ್ಪರ ಬೆರೆತಿಲ್ಲ. ಮೊದಲಿನಿಂದಲೂ ಅಂತರ ಕಾಯ್ದುಕೊಂಡು ಬಂದಿವೆ. ಬಸವ ತತ್ವವನ್ನು ಒಪ್ಪಿಕೊಂಡವರು ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿದ್ದರೂ, ಪ್ರತ್ಯೇಕ ಧರ್ಮ ಮಾನ್ಯತೆ ವಿಷಯ ಬಂದಾಗ ಸ್ಥಳೀಯ ಮುಖಂಡರು ತಟಸ್ಥವಾಗಿಯೇ ಉಳಿದಿದ್ದರು. ಜಿಲ್ಲೆಯ ಒಂದು ಬದಿಯಲ್ಲಿ ತುಂಗಭದ್ರಾ, ಮತ್ತೊಂದು ಬದಿಯಲ್ಲಿ ಮಲಪ್ರಭಾ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ಪ್ರಮುಖ ನೀರಾವರಿ ಯೋಜನೆಗಳಾದ ಕಳಸಾ ಬಂಡೂರಿ, ಮಹದಾಯಿ ಯೋಜನೆಗಳು ದಶಕಗಳಿಂದ ನನೆಗುದಿಗೆ ಬಿದ್ದಿವೆ. ಕೃಷಿ ಹೊರತುಪಡಿಸಿದರೆ ಬೇರೆ ಉದ್ಯೋಗಾವಕಾಶ ಇಲ್ಲ. ಸತತ ಬರದಿಂದ ಜಿಲ್ಲೆಯ ಜನರು ದುಡಿಯಲು ಗೋವಾ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ
ಗುಳೆ ಹೋಗುವುದು ಸಾಮಾನ್ಯ. ಇವೆಲ್ಲವೂ ಚುನಾವಣೆ ವಿಷಯವಾಗಬೇಕಿತ್ತು. ಆದರೆ, ಇವು ಪಕ್ಷೇತರ ಅಭ್ಯರ್ಥಿಗಳ ಪ್ರಚಾರ ಅಸ್ತ್ರಗಳಾಗಿ ಮಾತ್ರ ಉಳಿದಿವೆ.

ಚುನಾವಣಾ ಅಧಿಸೂಚನೆ ಪೂರ್ವದಲ್ಲಿ, ಕುಡಿಯುವ ನೀರಿನ ಸಮಸ್ಯೆಯನ್ನೇ ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿ ಪ್ರತಿಪಾದಿಸಿದ್ದ ಬಿಜೆಪಿ, ಸರಣಿ ಪ್ರತಿಭಟನೆಗಳನ್ನು ನಡೆಸಿತ್ತು. ನೀರಿಗೆ ಶಾಶ್ವತ ಪರಿಹಾರದ ಸೂತ್ರದೊಂದಿಗೆ ಮತದಾರರ ಬಳಿಗೆ ಹೋಗುವುದಾಗಿ ಹೇಳಿತ್ತು. ಚುನಾವಣೆ ಹೊತ್ತಿಗೆ ನೀರಿನ ಸಂಕಟ, ಕಂಟಕ ಆಗುತ್ತದೆ ಎಂದರಿತ ಕಾಂಗ್ರೆಸ್ ಇದಕ್ಕೆ ಪ್ರತಿತಂತ್ರ ರೂಪಿಸಿತು. ಜಿಲ್ಲೆಗೆ ಕುಡಿಯುವ ನೀರು ಪೂರೈಸುವ ತುಂಗಭದ್ರಾ ನದಿ ಪಾತ್ರದ ಹಮ್ಮಿಗೆ ಬ್ಯಾರೇಜ್‌ನಲ್ಲಿ, ಚುನಾವಣೆ ಮುಗಿಯುವ ತನಕ ಸರಬರಾಜು ಮಾಡಲು ಸಾಲುವಷ್ಟು ನೀರು ಸಂಗ್ರಹ ಮಾಡಿಕೊಂಡಿತು. ಈಗ ಮೇಲ್ನೋಟಕ್ಕೆ ನೀರಿನ ಸಮಸ್ಯೆ ಬಗೆಹರಿದಿದೆ. ವಾರದಲ್ಲಿ ಎರಡು ಬಾರಿ ನೀರು ಸಿಗುತ್ತಿರುವುದರಿಂದ ಮತದಾರರೂ ಈ ಕುರಿತು ಮಾತನಾಡುತ್ತಿಲ್ಲ. ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ 5ನೇ ವಿಧಾನಸಭೆ ಚುನಾವಣೆ ಇದು. ದಶಕಗಳಿಂದ ಕಾಂಗ್ರೆಸ್‌ ಭದ್ರಕೋಟೆ ಎನಿಸಿದ್ದ ಜಿಲ್ಲೆಯಲ್ಲಿ 2008ರಲ್ಲಿ ಮೊದಲ ಬಾರಿ ಕಮಲ ಅರಳಿತು. ಆದರೆ, 2013ರಲ್ಲಿ ಕೆಜೆಪಿ, ಬಿಜೆಪಿ, ಬಿಎಸ್ಆರ್‌ ಕಾಂಗ್ರೆಸ್‌ ಅಭ್ಯರ್ಥಿಗಳಿಂದ ಮತ ವಿಭಜನೆಗೊಂಡು ಕಾಂಗ್ರೆಸ್ ಮತ್ತೆ ಪ್ರಭುತ್ವ ಮೆರೆಯಿತು. ಈ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳನ್ನು ಮರಳಿ ತೆಕ್ಕೆಗೆ ಪಡೆಯಲು ಬಿಜೆಪಿ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಯಲ್ಲಿ ಪ್ರಚಾರ ಮಾಡಿದ್ದಾರೆ.

ನಾಲ್ಕೂ ಕಡೆ ಕಾಂಗ್ರೆಸ್‌– ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಒಟ್ಟು 42 ಮಂದಿ ಕಣದಲ್ಲಿದ್ದಾರೆ. 2013ರಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎಚ್‌.ಕೆ ಪಾಟೀಲ ಅವರಿಗೆ ಪೈಪೋಟಿ ನೀಡಿದ್ದ ಅನಿಲ್‌ ಮೆಣಸಿನಕಾಯಿ ಅವರಿಗೆ ಈ ಬಾರಿ ಗದಗದಿಂದ ಬಿಜೆಪಿ ಟಿಕೆಟ್‌ ಸಿಕ್ಕಿದೆ. ಇವರಿಬ್ಬರ ನಡುವಿನ ಸ್ಪರ್ಧೆಯಿಂದ ಈ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ.

ADVERTISEMENT

97 ಹಳ್ಳಿಗಳನ್ನು ಒಳಗೊಂಡಿರುವ ರೋಣ, ಜಿಲ್ಲೆಯ ದೊಡ್ಡ ಮತಕ್ಷೇತ್ರ. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಿ.ಎಸ್‌.ಪಾಟೀಲ 7ನೇ ಬಾರಿ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಕಳಕಪ್ಪ ಬಂಡಿ ಪ್ರತಿಸ್ಪರ್ಧಿ. ರೈತ ಬಂಡಾಯದ ಮೂಲಕ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾದ ನರಗುಂದ ಕ್ಷೇತ್ರದಲ್ಲಿ ಬಿಜೆಪಿಯ ಸಿ.ಸಿ ಪಾಟೀಲ ಮತ್ತು ಕಾಂಗ್ರೆಸ್‌ನ ಬಿ.ಆರ್‌.ಯಾವಗಲ್‌ ಕಣದಲ್ಲಿದ್ದಾರೆ. ಯಾವಗಲ್‌ ಅವರಿಗೆ ಇದು 9ನೇ ಚುನಾವಣೆ.

ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಕಳೆದ ಬಾರಿ ಕೇವಲ 315 ಮತಗಳ ಅಂತರದಿಂದ ಬಿಜೆಪಿಯ ರಾಮಣ್ಣ ಲಮಾಣಿ ಅವರ ವಿರುದ್ಧ ಗೆದ್ದಿದ್ದ ಕಾಂಗ್ರೆಸ್‌ನ ರಾಮಕೃಷ್ಣ ದೊಡ್ಡಮನಿ, ಮತ್ತೆ ಅವರ ವಿರುದ್ಧವೇ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

ರಾಷ್ಟ್ರೀಯ ಪಕ್ಷಗಳ ಪ್ರಚಾರದ ಅಬ್ಬರದ ನಡುವೆಯೇ, ‘ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ' ಎಂದು ಕೋರ್ಟ್‌ ಅಫಿಡವಿಟ್‌ ಮಾಡಿಸಿರುವ ರೋಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ ಕುಟುಂಬದ ರವೀಂದ್ರನಾಥ ದೊಡ್ಡಮೇಟಿ ಗಮನ ಸೆಳೆದಿದ್ದಾರೆ. ಇವರ ಸ್ಪರ್ಧೆಯಿಂದ ಈ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್‌ ಅಭ್ಯರ್ಥಿಗಳು ಸರ್ಕಾರದ ಅಭಿವೃದ್ಧಿ ಕೆಲಸಗಳನ್ನೇ ಮುಂದಿಟ್ಟು ಮತ ಯಾಚನೆ ಮಾಡುತ್ತಿದ್ದರೆ, ಹಾಲಿ ಶಾಸಕರ ವಿರುದ್ಧ ಪಕ್ಷದೊಳಗೆ ಸೃಷ್ಟಿಯಾಗಿರುವ ಅಸಮಾಧಾನ ಗೆಲುವಿಗೆ ಪೂರಕವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಇದರ ಜತೆಗೆ ಮೋದಿ ಅಲೆ ಮತ್ತು ಬಿ.ಶ್ರೀರಾಮುಲು ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನು ಪಕ್ಷ ನೆಚ್ಚಿಕೊಂಡಿದೆ. ಎಲ್ಲ ಕ್ಷೇತ್ರಗಳಲ್ಲಿ ಜಾತಿ ಲೆಕ್ಕಾಚಾರ ಮುನ್ನೆಲೆಗೆ ಬಂದಿದೆ. ಇದರ ಆಧಾರದಲ್ಲಿ ಎರಡು ಮತ್ತು ಮೂರನೇ ಹಂತದ ನಾಯಕರ ಪಕ್ಷಾಂತರ ಪರ್ವ ಜೋರಾಗಿದೆ. ಜಿಲ್ಲೆಯಲ್ಲಿ ಲಿಂಗಾಯತರು ಬಹುಸಂಖ್ಯಾತರಾಗಿದ್ದರೂ ಕುರುಬ, ಗಾಣಿಗ, ಮುಸಲ್ಮಾನ ಮತ್ತು ದಲಿತರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯಗಳ ಮುಖಂಡರನ್ನು ಸೆಳೆಯುವ, ಆ ಮತಗಳು ವಿಭಜನೆಯಾಗದಂತೆ ತಡೆಯುವ ಪ್ರಯತ್ನಗಳು ಎರಡೂ ಪಕ್ಷಗಳಲ್ಲಿ ನಡೆಯುತ್ತಿವೆ.

* ಮಾತಿನಲ್ಲಷ್ಟೇ ಅಭಿವೃದ್ಧಿ ಆಗಿದೆ. ನೀರಿನ ಹಾಹಾಕಾರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ರೋಗವನ್ನು ಅಂಟಿಸಿಕೊಂಡೇ ಹುಟ್ಟುವ ಕರ್ಮ ಈ ಜಿಲ್ಲೆಯ ಪ್ರತಿ ಮಗುವಿನದು. ಸಮಸ್ಯೆಗಳೇ ಜಿಲ್ಲೆಯನ್ನು ಆಳುತ್ತಿದ್ದು, ಜನಪ್ರತಿನಿಧಿಗಳು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಎಲ್ಲಿಯವರೆಗೆ ಆಮಿಷದ ರಾಜಕಾರಣ ಇರುತ್ತದೆಯೋ ಅಲ್ಲಿಯವರೆಗೆ ಈ ಪರಿಸ್ಥಿತಿ ಜೀವಂತವಾಗಿರುತ್ತದೆ.

–ಡಾ. ಜಿ.ಕೆ.ಕಾಳೆ, ನರೇಗಲ್‌

ಹೊಸ ಮತದಾರರು –18,340

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.