ADVERTISEMENT

ಅಶಾಂತಿ ಸೃಷ್ಟಿಸುವ ರಾಜಕಾರಣ ಬಾಳದು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 19:30 IST
Last Updated 11 ಏಪ್ರಿಲ್ 2018, 19:30 IST
ಮಹಿಮಾ ಪಟೇಲ್‌ ಅವರು ನಿತೀಶ್‌ ಕುಮಾರ್‌ ಜೊತೆ ಚರ್ಚಿಸಿದರು – ಪ್ರಜಾವಾಣಿ ಚಿತ್ರ
ಮಹಿಮಾ ಪಟೇಲ್‌ ಅವರು ನಿತೀಶ್‌ ಕುಮಾರ್‌ ಜೊತೆ ಚರ್ಚಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದ ಅನೇಕ ಕಡೆ ಅಶಾಂತಿ ಸೃಷ್ಟಿಸಲಾಗುತ್ತಿದೆ. ಸಮಾಜದ ಸಾಮರಸ್ಯ ಕದಡುವ ಮೂಲಕ ಮಾಡುವ ರಾಜಕೀಯ ಹೆಚ್ಚು ದಿನ ನಡೆಯದು’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದರು.

ಜನತಾದಳವು (ಸಂಯುಕ್ತ) ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಜಕಾರಣಿಗಳು ಸಿಕ್ಕ ಅವಕಾಶ
ವನ್ನು ಸಂಪತ್ತು ಗಳಿಕೆಗೆ ಬಳಸುವುದನ್ನು ನೋಡುತ್ತಿದ್ದೇವೆ’ ಎಂದರು.

‘ಸೈದ್ಧಾಂತಿಕ ರಾಜಕಾರಣಕ್ಕೆ ಈಗಲೂ ಭವಿಷ್ಯವಿದೆ. ನಾವು ಪ್ರೀತಿಯಿಂದ ನಡೆಸುವ ಜನಸೇವೆ ಶಾಶ್ವತವಾಗಿ ಉಳಿಯುತ್ತದೆ. ಬಿಹಾರದಲ್ಲಿ ಭ್ರಷ್ಟಾ
ಚಾರದ ವಿಚಾರದಲ್ಲಿ ನಾವು ಎಂದೂ ರಾಜಿ ಮಾಡಿಕೊಂಡಿಲ್ಲ. ರಾಜ್ಯದ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಸೌಹಾರ್ದ ಕಾಪಾಡುವ ವಿಚಾರದಲ್ಲೂ ನಮ್ಮ ನಿಲುವು ಸ್ಪಷ್ಟ ಇದೆ’ ಎಂದರು.

ADVERTISEMENT

‘ಜನತಾದಳ ಹುಟ್ಟಿದ್ದೇ ಈ ನೆಲದಲ್ಲಿ. ಮೌಲ್ಯಾಧಾರಿತ ರಾಜಕಾರಣಕ್ಕೆ ಇಲ್ಲಿ ಈಗಲೂ ನೆಲೆ ಇದೆ’ ಎಂದರು. ರಾಜ್ಯದ ಶಾಂತವೇರಿ ಗೋಪಾಲಗೌಡ, ಎಸ್‌.ವೆಂಕಟರಾವ್‌, ‌ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಮುಂತಾದವರು ಸಮಾಜವಾದಿ ಚಳವಳಿಗೆ ನೀಡಿರುವ ಕೊಡುಗೆಯನ್ನು ನಿತೀಶ್‌ ಸ್ಮರಿಸಿದರು. ಜೆ.ಎಚ್‌.ಪಟೇಲ್‌ ಮೊದಲ ಬಾರಿ ಸಂಸದರಾದಾಗ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದನ್ನು ನೆನೆಪಿಸಿಕೊಂಡರು.

‘2006ರಲ್ಲಿ  ಬಿಹಾರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಿಂಗಳಲ್ಲಿ 39 ಮಂದಿ ಮಾತ್ರ ಬಳಸುತ್ತಿದ್ದರು. ವೈದ್ಯರು, ಸಿಬ್ಬಂದಿ ಕೊರತೆ ನೀಗಿಸಿ, ಔಷಧವನ್ನು ಪೂರೈಸಿದ ಬಳಿಕ ಈ ಸಂಖ್ಯೆ 1,500ಕ್ಕೆ ಏರಿಕೆಯಾಯಿತು. ಈಗ ಪ್ರತಿ ತಿಂಗಳು 10 ಸಾವಿರಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿ
ದ್ದಾರೆ. ರಾಜ್ಯದಲ್ಲಿ ರೋಗಿಗಳು ಹೆಚ್ಚಾಗಿದ್ದಾರೆ ಎಂಬುದು ಇದರ ಅರ್ಥವಲ್ಲ. ಉತ್ತಮ ಸೌಕರ್ಯ ಒದಗಿಸಿದರೆ, ಸರ್ಕಾರದ ಸೇವೆಯ ಮೇಲೆ ಜನರಲ್ಲಿ ವಿಶ್ವಾಸ ಬೆಳೆಯುತ್ತದೆ’ ಎಂದರು.

‘15ರಂದು ಮೊದಲ ಪಟ್ಟಿ’

'ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇದೇ 15ರಂದು ಬಿಡುಗಡೆ ಮಾಡುತ್ತೇವೆ. ಗೆಲ್ಲುವ ಸಾಮರ್ಥ್ಯ ಇರುವವರನ್ನು ಗುರುತಿಸಿ ಕಣಕ್ಕಿಳಿಸುತ್ತೇವೆ' ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದರು.

‘ಹಸಿರು ಕರ್ನಾಟಕ, ಸಾವಯವ ಕರ್ನಾಟಕ ರೂಪಿಸುವುದು ಹಾಗೂ ಸಾವಯವ ರಾಜಕಾರಣ ನಡೆಸುವುದು ನಮ್ಮ ಧ್ಯೇಯ. ನಮ್ಮ ಸಹಕಾರ ಇಲ್ಲದೆ ಸರ್ಕಾರ ನಡೆಸಲು ಸಾಧ್ಯವಿಲ್ಲದ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಲಿದೆ’ ಎಂದು ಅವರು ಭವಿಷ್ಯ ನುಡಿದರು.

‘ಸಾರಾಯಿ ನಿಷೇಧದಿಂದ ಪ್ರವಾಸಿಗರ ಹೆಚ್ಚಳ’

‘ಬಿಹಾರದಲ್ಲಿ ಸಾರಾಯಿ ನಿಷೇಧ ಮಾಡಿದರೆ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಲಿದೆ ಎಂದು ಕೆಲವರು ಹುಯಿಲೆಬ್ಬಿಸಿದ್ದರು. ಮದ್ಯಸೇವನೆಗಾಗಿ ಪ್ರವಾಸಿಗರು ನಮ್ಮ ರಾಜ್ಯಕ್ಕೆ ಬರುವುದು ಬೇಡ ಎಂದು ನಾನು ಸ್ಪಷ್ಟಪಡಿಸಿದ್ದೆ. ಅಚ್ಚರಿ ಎಂದರೆ, ನಿಷೇಧದ ಬಳಿಕ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ’ ಎಂದು ನಿತೀಶ್‌ ಕುಮಾರ್‌ ತಿಳಿಸಿದರು.

‘ಮದ್ಯ ಮಾರಾಟ ತೆರಿಗೆಯಿಂದ ರಾಜ್ಯದ ಬೊಕ್ಕಸಕ್ಕೆ ₹ 5,000 ಕೋಟಿ ವರಮಾನ ಬರುತ್ತಿತ್ತು. ಅದೀಗ ಕೈತಪ್ಪಿದೆ. ಆದರೆ, ಜನ ಔಷಧಕ್ಕಾಗಿ ಖರ್ಚು ಮಾಡುತ್ತಿದ್ದ ₹ 10 ಸಾವಿರ ಕೋಟಿಗೂ ಹೆಚ್ಚು ಹಣ ಉಳಿತಾಯವಾಗುತ್ತಿದೆ. ಮನೆ ಮನೆಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಅಶಾಂತಿ ಕಡಿಮೆ ಆಗಿದೆ’ ಎಂದರು.

**

ಈ ಚುನಾವಣೆ ಯುದ್ಧವಲ್ಲ, ಒಂದು ಆಟ ಎಂದು ಭಾವಿಸಬೇಕು. ಅನ್ಯರ ಬಗ್ಗೆ ಮಾತನಾಡುವುದಕ್ಕಿಂತ ನಾವೇನು ಮಾಡುತ್ತೇವೆ ಎಂದು ಹೇಳಬೇಕು. ಮಹಿಮಾ ಪಟೇಲ್‌‌ -ಜೆಡಿಯು ರಾಜ್ಯ ಘಟಕದ ಅಧ್ಯಕ್ಷ

**

ರಾಜ್ಯದ ರಾಜಕಾರಣಕ್ಕೆ ಹೊಸ ದಿಕ್ಕು ತೋರಿಸಲು ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕು. ಇಲ್ಲಿ ಪಕ್ಷದ ಪುನಶ್ಚೇತನಕ್ಕೂ ಈ ಚುನಾವಣೆ ನಾಂದಿಯಾಗಲಿ.

-ನಿತೀಶ್‌ ಕುಮಾರ್‌ ,ಬಿಹಾರದ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.