ADVERTISEMENT

‘ಕೈ’ ಹೈಕಮಾಂಡ್‌ ಜತೆ ಗೌಡರ ನೇರ ಸಂಪರ್ಕ

ರಾಜ್ಯದ ಕಾಂಗ್ರೆಸ್‌ ಮುಖಂಡರಲ್ಲಿ ತಳಮಳ; ನುಂಗಲಾರದ ತುತ್ತಾಗಿರುವ ವರಿಷ್ಠರ ನಡೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:40 IST
Last Updated 22 ಮೇ 2018, 19:40 IST
‘ಕೈ’ ಹೈಕಮಾಂಡ್‌ ಜತೆ ಗೌಡರ ನೇರ ಸಂಪರ್ಕ
‘ಕೈ’ ಹೈಕಮಾಂಡ್‌ ಜತೆ ಗೌಡರ ನೇರ ಸಂಪರ್ಕ   

ಬೆಂಗಳೂರು: ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತು ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್‌ ನಾಯಕರನ್ನು ಬದಿಗೊತ್ತಿ, ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರ ಜತೆ ನೇರ ಸಂಪರ್ಕ ಸಾಧಿಸಿರುವುದು ಕಾಂಗ್ರೆಸ್ಸಿಗರಲ್ಲಿ ತಳಮಳ ಮೂಡಿಸಿದೆ.

ತಮ್ಮ ಯಾವುದೇ ಬೇಡಿಕೆಗಳಿಗೆ ಸ್ಪಂದಿಸದೇ, ಪಕ್ಷದ ಹೈಕಮಾಂಡ್‌ ದೇವೇಗೌಡರ ಜೊತೆ ನೇರ ಸಂಪರ್ಕದಲ್ಲಿರುವುದು ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ನುಂಗಲಾರದ ತುತ್ತಾಗಿದೆ.

ಸಮ್ಮಿಶ್ರ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಕುರಿತು ಜೆಡಿಎಸ್‌ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಜಾಹೀರಾತುಗಳಲ್ಲಿ, ರಾಜ್ಯ ಕಾಂಗ್ರೆಸ್‌ನ ಯಾವುದೇ ನಾಯಕರ ಚಿತ್ರಗಳನ್ನೂ ಹಾಕಿಲ್ಲ. ದೇವೇಗೌಡ, ಕುಮಾರಸ್ವಾಮಿ, ಸೋನಿಯಾ, ಮಾಯಾವತಿ ಮತ್ತು ರಾಹುಲ್‌ ಗಾಂಧಿಯವರ ಚಿತ್ರಗಳು ಮಾತ್ರ ರಾರಾಜಿಸುತ್ತಿರುವುದು ಮುಜುಗರ ತಂದಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

ADVERTISEMENT

‘ತಮ್ಮ ವ್ಯವಹಾರ ಏನೇ ಇದ್ದರೂ ರಾಷ್ಟ್ರ ಮಟ್ಟದ ನಾಯಕರ ಜೊತೆಗೇ ಹೊರತು ರಾಜ್ಯ ನಾಯಕರ ಜತೆ ಅಲ್ಲ ಎಂಬ ಸಂದೇಶವೂ ಈ ಜಾಹೀರಾತುಗಳಿಂದ ರವಾನೆಯಾಗುತ್ತದೆ. ಹಾಗಿದ್ದರೆ, ಮೈತ್ರಿ ಸರ್ಕಾರದ ರಚನೆಯಲ್ಲಿ ನಮ್ಮ ಪಾತ್ರವಿಲ್ಲವೇ’ ಎಂಬುದು ಕಾಂಗ್ರೆಸ್ ನಾಯಕರೊಬ್ಬರ ಪ್ರಶ್ನೆ.

ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆ ಪಕ್ಷದ ನಾಯಕ ರಾಹುಲ್ ಗಾಂಧಿ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ನಿಕಟ ಬಾಂಧವ್ಯ ಹೊಂದಿದ್ದರು. ಏನೇ ಸಮಸ್ಯೆ ಎದುರಾದರೂ ತಮಗೆ ದೂರವಾಣಿ ಕರೆ ಮಾಡುವಷ್ಟರ ಮಟ್ಟಿಗೆ ಅವರಿಗೆ ಸ್ವಾತಂತ್ರ್ಯ ನೀಡಿದ್ದರು. ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ಎದುರಿಸಲಾಗುವುದು ಎಂದೂ ಅವರು ಹೇಳಿದ್ದರು. ಮುಂದಿನ ಮುಖ್ಯಮಂತ್ರಿ ಯಾರು ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಸಿದ್ದರಾಮಯ್ಯನವರ ಕಡೆಗೆ ರಾಹುಲ್‌ ಬೆರಳು ತೋರಿಸಿದ್ದರು. ಆದರೆ, ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಸಿದ್ದರಾಮಯ್ಯ ಮೂಲೆಗುಂಪಾಗುತ್ತಿದ್ದಾರೆ ಎಂಬ ಭಾವನೆ ಅವರ ಬೆಂಬಲಿಗರಲ್ಲಿ ಮೂಡಿದೆ. ಈ ಹಂತದಲ್ಲಿ ಸಿದ್ದರಾಮಯ್ಯ ಅವರಿಗೆ ಮಣೆ ಹಾಕಿದರೆ ಮೈತ್ರಿ ಮುನ್ನಡೆಯುವುದು ಕಷ್ಟ ಎಂಬ ಚಿಂತನೆ ಹೈಕಮಾಂಡ್‌ನದ್ದಾಗಿದೆ.

ಪಕ್ಷದ ಉಳಿದ ನಾಯಕರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಹಿರಿಯ ನಾಯಕ ಡಿ.ಕೆ. ಶಿವಕುಮಾರ್‌, ಎಂ.ಬಿ. ಪಾಟೀಲ ಮುಂತಾದವರು ಈ ಹಂತದಲ್ಲಿ ವರಿಷ್ಠರನ್ನು ಭೇಟಿ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ವಿಶ್ವಾಸ ಮತ ಸಾಬೀತುಪಡಿಸುವವರೆಗೆ ದೆಹಲಿಯ ಕಡೆ ತಲೆ ಹಾಕಬೇಡಿ ಎಂಬ ಸಂದೇಶವನ್ನು ಹೈಕಮಾಂಡ್‌ ನೀಡಿದೆ.

ಇದರಿಂದಾಗಿ ಸಚಿವ ಸ್ಥಾನಗಳ ಆಕಾಂಕ್ಷಿಗಳು ದೆಹಲಿಗೆ ಹೋಗಲಾಗದೇ ಸಿದ್ದರಾಮಯ್ಯ, ಪರಮೇಶ್ವರ ಅವರ ಬಳಿ ತಮ್ಮ ಬೇಡಿಕೆಗಳನ್ನು ಮಂಡಿಸುತ್ತಿದ್ದಾರೆ. ಯಾವುದೇ ಭರವಸೆ ಕೊಡುವ ಸ್ಥಿತಿಯಲ್ಲೂ ಈ ನಾಯಕರು ಇಲ್ಲ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

‘ಆಡಳಿತದಲ್ಲಿ ಮೂಗು ತೂರಿಸುವುದಿಲ್ಲ’

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ರಚನೆ ಮತ್ತು ಆಡಳಿತದಲ್ಲಿ ಮೂಗು ತೂರಿಸುವುದಿಲ್ಲ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದ ರಚನೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಊಹಾಪೋಹದ ವರದಿಗಳು ಹರಿದಾಡುತ್ತಿವೆ. ಇವು ಸತ್ಯಕ್ಕೆ ದೂರವಾದವು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕಾಂಗ್ರೆಸ್‌ ನಾಯಕರುಗಳಾದ ಡಿ.ಕೆ.ಶಿವಕುಮಾರ್‌ ಮತ್ತು ಎಂ.ಬಿ.ಪಾಟೀಲ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ನನ್ನ ವಿರೋಧವಿದೆ ಎಂಬ ಅರ್ಥದಲ್ಲಿ ಪ್ರಕಟವಾಗಿರುವ ವರದಿಗಳಲ್ಲಿ ಹುರುಳಿಲ್ಲ’ ಎಂದೂ ಅವರು ಹೇಳಿದ್ದಾರೆ.

‘ಸಮ್ಮಿಶ್ರ ಸರ್ಕಾರದ ಪ್ರಮುಖ ನಿರ್ಧಾರಗಳು, ಮಂತ್ರಿ ಮಂಡಲ, ಸಮನ್ವಯ ಸಮಿತಿ ರಚನೆ ಮತ್ತು ಆಡಳಿತದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ’ ಎಂದೂ ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.