ADVERTISEMENT

ಚುನಾವಣಾ ರಾಜಕೀಯಕ್ಕೆ ‘ರೆಬೆಲ್‌’ ವಿದಾಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 18:17 IST
Last Updated 24 ಏಪ್ರಿಲ್ 2018, 18:17 IST
ಚುನಾವಣಾ ರಾಜಕೀಯಕ್ಕೆ ‘ರೆಬೆಲ್‌’ ವಿದಾಯ
ಚುನಾವಣಾ ರಾಜಕೀಯಕ್ಕೆ ‘ರೆಬೆಲ್‌’ ವಿದಾಯ   

ಬೆಂಗಳೂರು: ಮಂಡ್ಯ ಶಾಸಕ ಅಂಬರೀಷ್‌ ನಾಮಪತ್ರ ಸಲ್ಲಿಸಲು ಕೊನೇ ದಿನವಾದ ಮಂಗಳವಾರ, ಕಾಂಗ್ರೆಸ್‌ ನೀಡಿದ್ದ ಟಿಕೆಟ್‌ ನಿರಾಕರಿಸುವುದರ ಜೊತೆಗೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.

ಈ ವಿಷಯ ಸ್ಪಷ್ಟವಾಗುತ್ತಿದ್ದಂತೆ, ಗಣಿಗ ರವಿಕುಮಾರ್‌ ಗೌಡ ಅವರಿಗೆ ಕಾಂಗ್ರೆಸ್‌ ಬಿ ಫಾರಂ ನೀಡಿದೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ‘ರೆಬೆಲ್‌ ಸ್ಟಾರ್‌’, ‘ನನಗೆ 66 ವರ್ಷವಾಗಿದೆ. ಆರೋಗ್ಯ ಸಮಸ್ಯೆಯೂ ಇದೆ. ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಈ ಬಾರಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಯಾರ ಮೇಲೂ ನನಗೆ ಬೇಸರವಿಲ್ಲ. ನಾನು ಎಂದೆಂದಿಗೂ ಸ್ಟಾರ್‌ ಆಗಿಯೇ ಇರುತ್ತೇನೆ’ ಎಂದು ಹೇಳಿದರು.

ADVERTISEMENT

‘ನನ್ನನ್ನು ಸಚಿವ ಸ್ಥಾನದಿಂದ ಮುಖ್ಯಮಂತ್ರಿ ತೆಗೆದು ಹಾಕಿದಾಗಲೇ ನನ್ನ ಯೋಗ್ಯತೆ ಗೊತ್ತಾಯಿತು. ಹಾಗೆಂದು, ಪಕ್ಷದ ನಾಯಕರ ವಿರುದ್ಧ ಬೇಸರವಿಲ್ಲ. ನಮ್ಮ ಮನೆಗೆ ಬಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಂಡ್ಯದಲ್ಲಿ ಒಳ್ಳೆಯ ವಾತಾವರಣ ಇಲ್ಲ. ನೀವು ಸೋಲುತ್ತೀರಿ ಎಂದಿದ್ದರು. ಅದರಿಂದ ನನಗೆ ನೋವಾಯಿತು. ಹಾಗಾದರೆ, ರಾಜ್ಯದ 224 ಕ್ಷೇತ್ರಗಳಲ್ಲಿ ಯಾವುದರಲ್ಲೂ ಕಾಂಗ್ರೆಸ್‌ ಸೋಲುವುದೇ ಇಲ್ಲವೇ’ ಎಂದು ಸಿಟ್ಟಿನಿಂದ ಪ್ರಶ್ನಿಸಿದರು.

‘ನಾನು ಕೇವಲ ಮಂಡ್ಯಕ್ಕೆ ಸೀಮಿತಗೊಂಡಿಲ್ಲ. ಇಡೀ ರಾಜ್ಯದಿಂದ ಮತ ತರುವ ಶಕ್ತಿ ನನಗಿದೆ. ಮಂಡ್ಯದಿಂದ ಮತ್ತೆ ಕಣಕ್ಕಿಳಿಯುವಂತೆ ರಾಜ್ಯ ನಾಯಕರು ನನ್ನ ಮನವೊಲಿಸುವ ಪ್ರಯತ್ನ ಮಾಡಿದರು. ಕಾರ್ಯಕರ್ತರೂ ಬಂದು ಒತ್ತಾಯ ಮಾಡಿದರು. ಏಳೆಂಟು ತಿಂಗಳುಗಳಿಂದ ಕ್ಷೇತ್ರದ ಕಡೆ ಹೋಗಿಲ್ಲ. ಆದ್ದರಿಂದ ಚುನಾವಣೆಗೆ ನಿಲ್ಲುವುದು ಬೇಡವೆಂದು ನಿರ್ಧರಿಸಿದ್ದೇನೆ’ ಎಂದರು.

‘ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ನನಗೆ ಅನೇಕ ಸ್ನೇಹಿತರಿದ್ದಾರೆ. 3–4 ತಿಂಗಳಿನಿಂದ ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ. ಆದರೆ, ನನಗೀಗ ರಾಜಕೀಯ ಮಾಡುವ ಶಕ್ತಿ ಇಲ್ಲ. ಬೆಂಗಳೂರಿನಿಂದ ಸ್ಪರ್ಧಿಸುವಂತೆ ಬಿಜೆಪಿ ನಾಯಕರು ಮನವಿ ಮಾಡಿದ್ದರು. ಮನೆಯಲ್ಲೇ ಕುಳಿತಿದ್ದರೂ ಗೆಲ್ಲಿಸಿಕೊಂಡು ಬರುವ ಜವಾಬ್ದಾಾರಿ ನಮ್ಮದು ಎಂದೂ ಹೇಳಿದ್ದರು’ ಎಂದ ಅಂಬರೀಷ್‌, ಕಾಂಗ್ರೆಸ್‌ ಬಿಡುವ ಪ್ರಶ್ನೆಯೇ ಇಲ್ಲ ಎಂದೂ ಸ್ಪಷ್ಟಪಡಿಸಿದರು.

ವೇಣುಗೋಪಾಲ್ ಭೇಟಿ: ಅಂಬರೀಷ್‌ ಅವರನ್ನು ಮಂಗಳವಾರ ಬೆಳಿಗ್ಗೆ ಭೇಟಿ ಮಾಡಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ನಾಮಪತ್ರ ಸಲ್ಲಿಸುವಂತೆ ಮನವಿ ಮಾಡಿದರು. ಆದರೆ, ಅಂಬರೀಷ್‌ ನಿರಾಕರಿಸಿದರು ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

‘ಎರಡು ಕ್ಷೇತ್ರಗಳಿಂದ ಸ್ಪರ್ಧೆ ಸರಿಯಲ್ಲ’

‘ಮೊದಲಿನಿಂದಲೂ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಏಕಾಏಕಿ ಬಾದಾಮಿಯಿಂದಲೂ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡದ್ದು ವೈಯಕ್ತಿಕವಾಗಿ ನನಗೆ ಸರಿ ಕಾಣುತ್ತಿಲ್ಲ’ ಎಂದು ಅಂಬರೀಷ್‌ ಹೇಳಿದರು.

‘ಚಾಮುಂಡೇಶ್ವರಿಯಿಂದ ಈ ಹಿಂದೆ ಅವರು ಸ್ಪರ್ಧಿಸಿದಾಗ ನಾನು ಪ್ರಚಾರಕ್ಕೆ ಹೋಗಿದ್ದೆ. ಆದರೆ, ಈ ಬಾರಿ ಅವರೇ ಮುಖ್ಯಮಂತ್ರಿ. ಅವರಿಗೆ ಉತ್ತಮ ಹೆಸರಿದೆ. ಸೋಲು ಗೆಲುವಿನ ಲೆಕ್ಕಾಚಾರ ಬಿಟ್ಟು ಚಾಮುಂಡೇಶ್ವರಿಗೆ ಅವರು ಸೀಮಿತಗೊಳ್ಳಬೇಕಿತ್ತು’ ಎಂದೂ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.