ADVERTISEMENT

‘ಧನಿಕ’ರಾದ ಜನತೆ: ಚಿದಂಬರಂ

​ಪ್ರಜಾವಾಣಿ ವಾರ್ತೆ
Published 8 ಮೇ 2018, 20:01 IST
Last Updated 8 ಮೇ 2018, 20:01 IST
ಪಿ.ಚಿದಂಬರಂ
ಪಿ.ಚಿದಂಬರಂ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಕರ್ನಾಟಕದ ಜನತೆ ‘ಶ್ರೀಮಂತ’ರಾಗಿದ್ದಾರೆ. ಈ ಬೆಳವಣಿಗೆ ಮುಂದುವರಿಯಲು ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಪ್ರತಿಪಾದಿಸಿದರು.

ರಾಜ್ಯದ ಜನತೆ ಧನಿಕರಾಗಲು ಮುಖ್ಯಕಾರಣ ಜನರ ತಲಾ ಆದಾಯ ಏರಿಕೆಯ ಬೆಳವಣಿಗೆ ಪ್ರಮಾಣ ಶೇ 125 ರಷ್ಟಾಗಿದೆ. ರಾಷ್ಟ್ರಮಟ್ಟದಲ್ಲಿ ಈ ಬೆಳವಣಿಗೆ ಶೇ 59 ಇದೆ ಎಂದು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ಆಡಳಿತದಲ್ಲಿ ಇದ್ದಾಗ ಸರಾಸರಿ ತಲಾ ಆದಾಯ ₹ 77,309 ಇತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಆ ಪ್ರಮಾಣ ₹ 1,74,551ಕ್ಕೆ ಏರಿದೆ. ಅಲ್ಲದೆ, ರಾಜ್ಯದ ಒಟ್ಟು ದೇಶಿಯ ಉತ್ಪನ್ನ (ಜಿಎಸ್‌ಡಿಪಿ) 2012–13 ರಲ್ಲಿ ₹ 6,43,292 ಕೋಟಿ ಇದ್ದದ್ದು 2017–18 ರಲ್ಲಿ ₹ 9,49,111 ಕೋಟಿಗೆ ಏರಿಕೆ ಆಗಿದೆ ಎಂದರು.

ADVERTISEMENT

ಇಡಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಕರ್ನಾಟಕದಲ್ಲೇ ಅತಿ ಕಡಿಮೆ. ಏಪ್ರಿಲ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ 2.6 ಇತ್ತು. ದೇಶದಲ್ಲಿ ಆ ಪ್ರಮಾಣ ಶೇ 5.9 ಇದೆ ಎಂದರು.

ಮೋದಿ ಪ್ರಧಾನಿಯಂತೆ ವರ್ತಿಸುತ್ತಿಲ್ಲ, ಆರ್‌ಎಸ್‌ಎಸ್‌ ಪ್ರಚಾರಕನಂತೆ ವರ್ತಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಆದಾಯ ತೆರಿಗೆ ಇಲಾಖೆ ವಿರುದ್ಧ ಕಾಂಗ್ರೆಸ್‌ ಕಿಡಿ

ಕಾಂಗ್ರೆಸ್‌ ಅಭ್ಯರ್ಥಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿಗೆ ಕಾರಣರಾಗಿರುವ ಆದಾಯ ತೆರಿಗೆ ಇಲಾಖೆಯ ಕೆಲವು ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದು ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ  ದಿನೇಶ್‌ಗುಂಡೂರಾವ್‌ ಆಗ್ರಹಿಸಿದರು.

‘ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ. ನಮ್ಮ ಅಭ್ಯರ್ಥಿಗಳನ್ನು ಹೆದರಿಸುವ ಮತ್ತು ಮಾನಸಿಕ ಹಿಂಸೆ ನೀಡುವ ಕೆಲಸ ನಡೆಯುತ್ತಿದೆ. ಆದ್ದರಿಂದ ಚುನಾವಣೆ ಮುಗಿಯುವವರೆಗೆ ಅಧಿಕಾರಿಗಳನ್ನು ಕರ್ನಾಟಕದಿಂದ ಹೊರಗೆ ಹಾಕಬೇಕು’ ಎಂದರು.

ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ, ರಾಜ್ಯ ಸರ್ಕಾರದ ಅಧಿಕಾರಿಗಳನ್ನು ನಿರಂತರವಾಗಿ ವರ್ಗಾವಣೆ ಮಾಡುತ್ತಿದೆ ಎಂದೂ ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.