ADVERTISEMENT

ಪಕ್ಷೇತರ ಅಭ್ಯರ್ಥಿ ಪ್ರಚಾರಕ್ಕೆ ಅಡ್ಡಿ; ಹಲ್ಲೆ

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:40 IST
Last Updated 6 ಮೇ 2018, 19:40 IST

ಬೆಂಗಳೂರು: ಮಹದೇವಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಲ್ಲೂರಹಳ್ಳಿ ನಾಗೇಶ್‌ ಪ್ರಚಾರಕ್ಕೆ ಅಡ್ಡಿಪಡಿಸಿದ್ದ ದುಷ್ಕರ್ಮಿಗಳು, ಅವರ ಬೆಂಬಲಿಗರ ಮೇಲೆ ಹಲ್ಲೆ ಮಾಡಿದ್ದಾರೆ.

ಘಟನೆ ಬಗ್ಗೆ ನಲ್ಲೂರಹಳ್ಳಿ ನಾಗೇಶ್‌ ದೂರು ನೀಡಿದ್ದಾರೆ. ಚಿಕ್ಕಭೈರತಿ ಗ್ರಾಮಸ್ಥರನ್ನೇ ಆರೋಪಿಗಳನ್ನಾಗಿ ಮಾಡಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ ಎಂದು ಕೊತ್ತನೂರು ಠಾಣೆ ಪೊಲೀಸರು ತಿಳಿಸಿದರು.

‘ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ನಾಗೇಶ್, ತಮ್ಮ ಬೆಂಬಲಿಗರ ಜತೆಯಲ್ಲಿ ಶನಿವಾರ ಸಂಜೆ ಚಿಕ್ಕಭೈರತಿಗೆ ಹೋಗಿದ್ದರು. ಅಲ್ಲಿಯೇ ಎರಡು ಗುಂಪಿನ ನಡುವೆ ಜಗಳ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದರು.  ಅದೇ ವೇಳೆ ಎದುರಾಳಿ ಗುಂಪಿಯ ವ್ಯಕ್ತಿಗಳು, ನಾಗೇಶ್ ಬೆಂಬಲಿಗರ ಮೇಲೆ ಹಲ್ಲೆ ಮಾಡಿದ್ದರು.’

ADVERTISEMENT

‘ಘಟನೆಯಲ್ಲಿ ಮಾರುತೇಶ್ ಉರ್ಫ್‌ ರಾಜು ಅವರಿಗೆ ಪೆಟ್ಟಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರ ಹೇಳಿಕೆಯನ್ನೂ ಪಡೆದುಕೊಂಡಿದ್ದೇವೆ’ ಎಂದರು.

ಠಾಣೆ ಎದುರು ಪ್ರತಿಭಟನೆ

‘ಕಾಂಗ್ರೆಸ್‌ ಅಭ್ಯರ್ಥಿ ಎ.ಸಿ.ಶ್ರೀನಾಸ್‌,ಸ ತಮ್ಮ ಬೆಂಬಲಿಗರ ಮೂಲಕ ಹಲ್ಲೆ ಮಾಡಿಸಿದ್ದಾರೆ’ ಎಂದು ನಲ್ಲೂರಹಳ್ಳಿ ನಾಗೇಶ್‌ ಬೆಂಬಲಿಗರು ಕೊತ್ತನೂರು ಠಾಣೆ ಎದುರು ಪ್ರತಿಭಟನೆ ನಡೆಸಿದರು.

‘ಸೋಲುವ ಭೀತಿಯಲ್ಲಿರುವ ಶ್ರೀನಿವಾಸ್‌, ಗೂಂಡಾಗಳನ್ನು ಬಿಟ್ಟು ಬೆದರಿಕೆ ಹಾಕುತ್ತಿದ್ದಾರೆ. ಅವರನ್ನು ಬಂಧಿಸಬೇಕು. ನಮಗೆ ರಕ್ಷಣೆ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.