ADVERTISEMENT

ಪ್ರಚಾರ ರ‍್ಯಾಲಿಗಳಲ್ಲಿ ಮೋದಿ–ಯಡಿಯೂರಪ್ಪ ದೂರದೂರ

ಪ್ರತ್ಯೇಕ ಪ್ರಚಾರ ಪ್ರವಾಸ ಯೋಜನೆ ರೂಪಿಸಿಕೊಳ್ಳಲು ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 7:46 IST
Last Updated 29 ಏಪ್ರಿಲ್ 2018, 7:46 IST
ಅಮಿತ್ ಶಾ, ಯಡಿಯೂರಪ್ಪ, ನರೇಂದ್ರಮೋದಿ
ಅಮಿತ್ ಶಾ, ಯಡಿಯೂರಪ್ಪ, ನರೇಂದ್ರಮೋದಿ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪಾಲ್ಗೊಳ್ಳುತ್ತಿರುವ ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸುವುದು ಅನುಮಾನ.

ಮೇ 1, 3, 5, 7 ಮತ್ತು 8ರಂದು ನರೇಂದ್ರ ಮೋದಿ ಅವರು ರಾಜ್ಯದ ವಿವಿಧೆಡೆ ಬಿರುಸಿನ ಪ್ರವಾಸ ನಡೆಸಲಿದ್ದಾರೆ. ಈ ವೇಳೆ ಪ್ರತ್ಯೇಕ ಪ್ರಚಾರ ಪ್ರವಾಸ ಯೋಜನೆ ಸಿದ್ಧಪಡಿಸಿಕೊಳ್ಳುವಂತೆ ಯಡಿಯೂರಪ್ಪ ಅವರಿಗೆ ವರಿಷ್ಠರು ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ರಾಜ್ಯದ ಚುನಾವಣಾ ಪ್ರಚಾರ ಪ್ರವಾಸವನ್ನು ಪ್ರಧಾನಿ ನರೇಂದ್ರ ಮೋದಿ, ನಾನು ಮತ್ತು ಯಡಿಯೂರಪ್ಪ ಅವರು ಪ್ರತ್ಯೇಕವಾಗಿಯೇ ನಡೆಸಬೇಕು. ಮೋದಿ ಅಥವಾ ನನ್ನೊಡನೆ ಯಡಿಯೂರಪ್ಪ ಪ್ರವಾಸ ಮಾಡಿದರೆ ಹೆಚ್ಚು ಕ್ಷೇತ್ರಗಳನ್ನು ತಲುಪಲು ಸಾಧ್ಯವಾಗುವುದಿಲ್ಲ’ ಎನ್ನುವುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಅಭಿಪ್ರಾಯವಾಗಿದೆ.

ADVERTISEMENT

‘ಶಾ ಸೂಚನೆ ಮೇರೆಗೆ ಮೋದಿ ಅವರ ಪ್ರಚಾರ ಸಭೆಗಳಲ್ಲಿ ಸ್ಥಳೀಯ ನಾಯಕರು ಮಾತ್ರ ಪಾಲ್ಗೊಳ್ಳಲಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಮೋದಿ ಪಾಲ್ಗೊಳ್ಳುವ ಕೆಲವೇ ಸಭೆಗಳಲ್ಲಿ ಯಡಿಯೂರಪ್ಪ ಪಾಲ್ಗೊಳ್ಳುತ್ತಾರೆ. ಬಿಜೆಪಿಯ ಪ್ರಭಾವ ದುರ್ಬಲವಾಗಿರುವ ಕ್ಷೇತ್ರಗಳತ್ತ ಯಡಿಯೂರಪ್ಪ ಹೆಚ್ಚು ಗಮನ ನೀಡಬೇಕು’ ಎನ್ನುವುದು ವರಿಷ್ಠರ ಸೂಚನೆಯಾಗಿದೆ.

ಆದರೆ, ಮೋದಿ ಪಾಲ್ಗೊಳ್ಳುವ ಎಲ್ಲ ಸಭೆಗಳಲ್ಲಿ ಯಡಿಯೂರಪ್ಪ ಪಾಲ್ಗೊಳ್ಳದಿದ್ದರೆ ಮತದಾರರಿಗೆ ತಪ್ಪು ಸಂದೇಶ ಹೋಗಬಹುದು’ ಎಂಬ ಆತಂಕ ಕಾರ್ಯಕರ್ತರಲ್ಲಿ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.