ADVERTISEMENT

‘ಬಿಜೆಪಿ ಆಸೆ; ಜೆಡಿಎಸ್‌ ಕನಸು ಕೇವಲ ಭ್ರಮೆ’

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
'ಮುಖ್ಯಮಂತ್ರಿ ಮಾತು' ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಆ್ಯಪ್‌ ಸಂಬಂಧಿಸಿ ಭಿತ್ತಿಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿದರು  –ಪ್ರಜಾವಾಣಿ ಚಿತ್ರ
'ಮುಖ್ಯಮಂತ್ರಿ ಮಾತು' ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಆ್ಯಪ್‌ ಸಂಬಂಧಿಸಿ ಭಿತ್ತಿಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಚುನಾವಣೆ ಗೆದ್ದು ಅಧಿಕಾರ ಸೂತ್ರ ಹಿಡಿಯಬಹುದೆಂಬ ಬಿಜೆಪಿ ಆಸೆ, ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಸಮ್ಮಿಶ್ರ ಸರ್ಕಾರ ರಚಿಸಿ, ಪ್ರಮುಖ ಪಾತ್ರ ವಹಿಸಬಹುದೆಂಬ ಜೆಡಿಎಸ್‌ ಕನಸು ಕೇವಲ ಭ್ರಮೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಕರ್ನಾಟಕದ ಹೆಮ್ಮೆ ಕಾಂಗ್ರೆಸ್ ಮತ್ತೊಮ್ಮೆ’ ಎಂಬ ಘೋಷ ವಾಕ್ಯದೊಂದಿಗೆ ಚುನಾವಣಾ ಪ್ರಚಾರಕ್ಕಾಗಿ ಕೆಪಿಸಿಸಿ ಸಿದ್ಧಪಡಿಸಿರುವ ‘ಮುಖ್ಯಮಂತ್ರಿ ಮಾತು’ ಆ್ಯಪ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತೆ  ಅಧಿಕಾರಕ್ಕೆ ಬರುವುದು ಶತ ಸಿದ್ಧ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜೆಡಿಎಸ್‌ಗೆ ರಾಜ್ಯದಲ್ಲಿ ಶಕ್ತಿ ಇಲ್ಲ. ಕೆಲವು ಜಿಲ್ಲೆಗಳಿಗಷ್ಟೇ ಅದು ಸೀಮಿತ. ಅತಂತ್ರ ವಿಧಾನಸಭೆ ಆಗಲಿ ಎಂದು ಜೆಡಿಎಸ್ ಕಾಯುತ್ತಿದೆ. ಅದರ ಕನಸು ಎಂದಿಗೂ ನನಸಾಗದು' ಎಂದು ಹೇಳಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿ.ಎಸ್. ಯಡಿಯೂರಪ್ಪ ಸುಳ್ಳು ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಕೇಂದ್ರ ಮತ್ತು ಕರ್ನಾಟಕದಲ್ಲಿ ಆಡಳಿತ ನಡೆಸಿದಾಗ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಬಿಜೆಪಿಗೆ, ಹೇಳಿಕೊಳ್ಳಲು ಏನೂ ಇಲ್ಲ. ಜೈಲಿಗೆ ಹೋಗಿದ್ದೇವೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸುಳ್ಳು ಹೇಳಿಕೊಂಡು ಜನರನ್ನು ಮರಳು ಮಾಡುವ ಪ್ರಯತ್ನ ಫಲಿಸದು’ ಎಂದರು.

‘ಯಾವುದು ಸತ್ಯ ಯಾವುದು ಸುಳ್ಳು ಎಂಬುದನ್ನು ರಾಜ್ಯದ ಮತದಾರರು ತೀರ್ಮಾನ ಮಾಡುತ್ತಾರೆ. ಸುಳ್ಳು ಹೇಳಿ ಜನರನ್ನು ಮರಳು ಮಾಡಿ ದಾರಿ ತಪ್ಪಿಸುವ ಮೂರ್ಖರ ಆಟ ನಡೆಯದು’ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಗತಿ ಮತ್ತು ಆಶಾದಾಯಕ ಆಡಳಿತ ನೀಡಿದ್ದಾರೆ. ಚುನಾವಣಾ ಫಲಿತಾಂಶದಲ್ಲಿ ಅದು ವ್ಯಕ್ತವಾಗಲಿದೆ’ ಎಂದರು.

‘ಇದೇ 27ರಿಂದ ರಾಹುಲ್ ಗಾಂಧಿ ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಅವರ ಜೊತೆ ನಾನೂ ಪ್ರವಾಸ ಮಾಡುತ್ತೇನೆ’ ಎಂದರು.

‘ಸಮೀಕ್ಷೆ ನಂಬುವುದಿಲ್ಲ’

‘ನಾವು ಚುನಾವಣಾ ಸಮೀಕ್ಷೆಗಳನ್ನು ನಂಬುವುದಿಲ್ಲ. ಸಮ್ಮಿಶ್ರ ಸರ್ಕಾರದ ಮಾತೇ ಇಲ್ಲ. 130 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಮತ್ತೊಮ್ಮೆ ವಿಜಯ ಪತಾಕೆ ಹಾರಿಸುತ್ತೇವೆ’ ಎಂದು ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಐದು ವರ್ಷಗಳ ಜನಪರ ಯೋಜನೆಗಳು, ಬಿ.ಎಸ್. ಯಡಿಯೂರಪ್ಪ ಆಡಳಿತ ಅವಧಿಯಲ್ಲಿನ ಯೋಜನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಪಕ್ಷ ಸಿದ್ಧವಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಿದ್ಧರಿದ್ದಾರೆಯೇ’ ಎಂದೂ ಅವರು ಸವಾಲು ಹಾಕಿದರು.

‘ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು. ಸರ್ಕಾರದ ಸಾಧನೆಯ ಮೇಲೆ ಮತ ಚಲಾಯಿಸುತ್ತಾರೆ. ರಾಜ್ಯದ ಜನರ ಬಗ್ಗೆ ವಿಶ್ವಾಸವಿದೆ. ಅನ್ನ, ನೀರು ಕೊಟ್ಟವರನ್ನು ಮತದಾರರು ಕೈ ಬಿಡುವುದಿಲ್ಲ’
– ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.