ADVERTISEMENT

ಮತಭಿಕ್ಷೆಗಾಗಿ ರೆಡ್ಡಿ ‘ವಾಕಥಾನ್‌’; ಮತದಾರರಿಂದ ಪುಷ್ಪವೃಷ್ಟಿ!

ಲಕ್ಕಸಂದ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತದಾರರಿಂದ ಪುಷ್ಪವೃಷ್ಟಿ!

ರಾಜೇಶ್ ರೈ ಚಟ್ಲ
Published 7 ಮೇ 2018, 19:58 IST
Last Updated 7 ಮೇ 2018, 19:58 IST
ಲಕ್ಕಸಂದ್ರ ಬಡಾವಣೆ ನಿವಾಸಿಗಳು ರಾಮಲಿಂಗಾ ರೆಡ್ಡಿ ಅವರಿಗೆ ತಿಲಕವಿಟ್ಟು ಆರತಿ ಮಾಡಿದರು -  ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್
ಲಕ್ಕಸಂದ್ರ ಬಡಾವಣೆ ನಿವಾಸಿಗಳು ರಾಮಲಿಂಗಾ ರೆಡ್ಡಿ ಅವರಿಗೆ ತಿಲಕವಿಟ್ಟು ಆರತಿ ಮಾಡಿದರು - ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್   

ಬೆಂಗಳೂರು: ಮತಭಿಕ್ಷೆ ಬೇಡಿ ಮನೆ ಬಾಗಿಲಿಗೆ ಬಂದ ರಾಮಲಿಂಗಾ ರೆಡ್ಡಿಯವರನ್ನು ಲಕ್ಕಸಂದ್ರ ನಿವಾಸಿಗಳು ಹಾರ, ತುರಾಯಿಗಳಿಂದ ಬರಮಾಡಿಕೊಂಡರು!

ಬಡಾವಣೆಯ ಗಲ್ಲಿಗಳು ಹಾಗೂ ಸಂದುಗೊಂದುಗಳಲ್ಲಿ ರೆಡ್ಡಿ ಹೆಜ್ಜೆ ಹಾಕುತ್ತಿದ್ದಂತೆ ಸಾವಿರಕ್ಕೂ ಹೆಚ್ಚು ಬೆಂಬಲಿಗರು ಜೈಕಾರಗಳೊಂದಿಗೆ ಹಿಂಬಾಲಿಸಿದರು. ದಿಢೀರ್‌ ಹೊಸ್ತಿಲಲ್ಲಿ ಬಂದು ನಿಂತ ‘ಅತಿಥಿ’ಗೆ ಹೆಂಗಳೆಯರು ಆರತಿ ಬೆಳಗಿದರು. ವಸತಿ ಸಂಕೀರ್ಣಗಳ ನೆತ್ತಿಯಲ್ಲಿದ್ದ ಜನ ಪುಷ್ಪವೃಷ್ಟಿಗರೆದು, ಖುಷಿಪಟ್ಟರು. ಸ್ಥಳೀಯ ಯುವಕರಂತೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸತತ ಎರಡು ಅವಧಿಯಲ್ಲಿ ಬಿಟಿಎಂ ಲೇಔಟ್‌ ಕ್ಷೇತ್ರವನ್ನು ಪ್ರತಿನಿಧಿಸಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಹಿಂದೆ, ಜಯನಗರ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದ ಅವರು, ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಕಾರ್ಯಕ್ಷೇತ್ರ ಬದಲಿಸಿಕೊಂಡಿದ್ದರು.

ADVERTISEMENT

ಮತದಾನಕ್ಕೆ ಇನ್ನೇನು ನಾಲ್ಕು ದಿನಗಳಷ್ಟೆ ಬಾಕಿ ಇವೆ ಎನ್ನುವಾಗ ರೆಡ್ಡಿ ತಮ್ಮ ಮನೆ–ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಬೆಳಿಗ್ಗೆ ಪ್ರಚಾರ ಕೈಗೊಂಡರು. ಬೆಳಿಗ್ಗೆ 8.30ಕ್ಕೆ ‍ಪ್ರಚಾರಕ್ಕೆ ಹೊರಡಬೇಕೆಂದು ಮನೆ ಪಕ್ಕದ ಕಚೇರಿಗೆ ಅವರು ಬಂದಿದ್ದರು. ಆದರೆ, ಅಷ್ಟರಲ್ಲೇ ಅವರ ಬರುವಿಕೆಗಾಗಿ ನೂರಾರು ಮಂದಿ ಕಾಯುತ್ತಿದ್ದರು.

ಅನೇಕರ ಕೈಯಲ್ಲಿ ಅರ್ಜಿಗಳಿದ್ದವು. ಕಾಲೇಜಿನಲ್ಲಿ ಸೀಟು ಬಯಸಿ ಬಂದಿದ್ದ ವಿದ್ಯಾರ್ಥಿಗಳೂ ಅಲ್ಲಿದ್ದರು. ನೆರವು ಕೇಳಿ ಬಂದವರೂ ಒಂದಿಷ್ಟು ಮಂದಿ ಇದ್ದರು. ಎಲ್ಲರನ್ನೂ ವಿಚಾರಿಸಿದ ರೆಡ್ಡಿ, ಕುಳಿತಲ್ಲೇ ಪರಿಹಾರವನ್ನೂ ಸೂಚಿಸಿದರು. ಅದಾಗಲೇ ಗಡಿಯಾರದ ಮುಳ್ಳು 9.30 ತೋರಿಸುತ್ತಿತ್ತು.

‘ಮನೆ ಬಾಗಿಲು ತಟ್ಟಿ ಚುನಾಯಿತನಾದ ಬಳಿಕ ಜನಸೇವೆಯೇ ಕರ್ತವ್ಯ. ಚುನಾವಣಾ ಪ್ರಚಾರಕ್ಕೆ ಹೋಗಬೇಕೆಂಬ ಕಾರಣಕ್ಕೆ ಬಂದವರನ್ನು ಮಾತನಾಡಿಸದಿರಲು ಆಗುತ್ತದೆಯೇ’ ಎಂದು ನಗುತ್ತಲೇ ಪ್ರತಿಕ್ರಿಯಿಸಿದ ರೆಡ್ಡಿ, ಪ್ರಚಾರಕ್ಕೆ ಹೊರಟೇಬಿಟ್ಟರು. ಪಕ್ಕದ ರಸ್ತೆಯ ಗಣಪತಿ ದೇವಸ್ಥಾನಕ್ಕೆ ತೆರಳಿದ ರೆಡ್ಡಿ, ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ವಾರ್ಡ್‌ನ ಅಡ್ಡರಸ್ತೆಗಳಲ್ಲಿ ಪಾದಯಾತ್ರೆ ಕೈಗೊಂಡರು.

ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಕೈ ಬೀಸಿ, ಮತ್ತೊಮ್ಮೆ ಕರ ಮುಗಿದು, ಮಗದೊಮ್ಮೆ ಶಿರಬಾಗಿ ಮತ ಯಾಚಿಸಿದರು. ಮುಖದಲ್ಲಿ ಜಿನುಗುತ್ತಿದ್ದ ಬೆವರ ಹನಿಗಳನ್ನು ಒರೆಸುತ್ತ, ಕಾರ್ಯಕರ್ತರು ತೋರುತ್ತಿದ್ದ ಪ್ರೀತಿಗೆ ನಗೆಯಲ್ಲೇ ಉತ್ತರಿಸುತ್ತಿದ್ದರು. ಹೆಗಲಿಗೇ ಕೈಹಾಕಿ ಕುಶಲೋಪರಿ ವಿಚಾರಿಸಿದರು. ಎಸ್‌.ಆರ್‌.ನಗರ, ಚಂದ್ರಪ್ಪ ನಗರ, ಲಾಲಾಜಿನಗರದಲ್ಲಿ ‘ವಾಕಥಾನ್‌’ ನಡೆಸಿದ ರೆಡ್ಡಿ, ಬಳಿಕ ಆಡುಗೋಡಿಗೆ ತೆರಳಿದರು. ಪೋತ್ಲಪ್ಪ ಗಾರ್ಡನ್‌ ಮತ್ತು ಅಯ್ಯಪ್ಪ ಗಾರ್ಡನ್‌ ನಿವಾಸಿಗಳನ್ನು ಭೇಟಿ ಮಾಡಿ ಮತ ಕೇಳಿದರು.

ಬನ್ನೇರುಘಟ್ಟ ರಸ್ತೆಯ ಅಂಚಿನಲ್ಲಿರುವ ದವತೆ ಇಸ್ಲಾಮಿ ಮಸೀದಿಗೂ ಭೇಟಿ ನೀಡಿದರು. ಚಂದ್ರಪ್ಪ ನಗರದ ಮಾತಾಶ್ರೀ ದೊಡ್ಡಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರೆಡ್ಡಿಯವರನ್ನು ಸ್ಥಳೀಯರು ಪೇಟಾ ತೊಡಿಸಿ, ಶಾಲು ಹೊದಿಸಿ ಅಭಿನಂದಿಸಿದರು. ಲಾಲಾಜಿ ನಗರದ ಎಚ್‌ಕೆಪಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳನ್ನು ಉದ್ದೇಶಿಸಿ 10 ನಿಮಿಷ ಮಾತನಾಡಿದ ಅವರು, ಸರ್ಕಾರದ ಸಾಧನೆ, ತಾನು ಪರಿಹರಿಸಿದ ಸ್ಥಳೀಯ ಸಮಸ್ಯೆಗಳು, ಈಡೇರಿಸಿದ ಭರವಸೆಗಳನ್ನು ಪಟ್ಟಿಯನ್ನು ಮುಂದಿಟ್ಟರು. ಮತ್ತೆ ಅವಕಾಶ ಕೊಟ್ಟರೆ ಇನ್ನಷ್ಟು ಜನಸೇವೆ ಮಾಡುವ ವಚನ ಕೊಟ್ಟರು.

‘ಶಾಸಕ, ಸಚಿವನೆಂಬ ಭಾವನೆ ಇಲ್ಲದೆ, ಎಲ್ಲರಲ್ಲೊಂದಾಗಿ ಬೆರೆಯುವ ರೆಡ್ಡಿಯವರ ಸರಳ, ಸಜ್ಜನಿಕೆಯೇ ಅವರನ್ನು ಕ್ಷೇತ್ರದಲ್ಲಿ ಜನಾನುರಾಗಿಯಾಗಿ ಮಾಡಿದೆ. ಅವರ ಪರ ಪ್ರಚಾರ ನಡೆಸಲು ಜನ ಅಭಿಮಾನದಿಂದ ಬರುತ್ತಾರೆ. ಅಷ್ಟೇ ಅಲ್ಲ, ಹಾರ, ಶಾಲು, ತುರಾಯಿಗಳಿಂದ ಸ್ವಾಗತಿಸುತ್ತಾರೆ’ ಎಂದು ಹೇಳಿದರು ರೆಡ್ಡಿಯವರ 30 ವರ್ಷಗಳ ಒಡನಾಡಿ ಸುರೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.