ADVERTISEMENT

ಮೇಲ್ಮನೆ ಸದಸ್ಯತ್ವಕ್ಕೆ ಬಿಜೆಪಿಯಲ್ಲಿ ಜೋರು ಲಾಬಿ

​ಪ್ರಜಾವಾಣಿ ವಾರ್ತೆ
Published 26 ಮೇ 2018, 19:30 IST
Last Updated 26 ಮೇ 2018, 19:30 IST
ಮೇಲ್ಮನೆ ಸದಸ್ಯತ್ವಕ್ಕೆ ಬಿಜೆಪಿಯಲ್ಲಿ ಜೋರು ಲಾಬಿ
ಮೇಲ್ಮನೆ ಸದಸ್ಯತ್ವಕ್ಕೆ ಬಿಜೆಪಿಯಲ್ಲಿ ಜೋರು ಲಾಬಿ   

ಬೆಂಗಳೂರು: ವಿಧಾನಪರಿಷತ್ತಿನ ಸದಸ್ಯ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರಿ ಲಾಬಿ ಆರಂಭವಾಗಿದೆ.11 ಸದಸ್ಯರ ಅವಧಿ ಜೂನ್‌ 17ಕ್ಕೆ ಮುಕ್ತಾಯಗೊಳ್ಳಲಿದ್ದು, ಜೂನ್ 11ರಂದು ಚುನಾವಣೆ ನಡೆಯಲಿದೆ. ವಿಧಾನಸಭೆಯ ಸದಸ್ಯರ ಬಲದ ಆಧಾರದ ಮೇಲೆ ಬಿಜೆಪಿಗೆ 5, ಕಾಂಗ್ರೆಸ್‌ಗೆ 4 ಹಾಗೂ ಜೆಡಿಎಸ್‌ಗೆ 2 ಸ್ಥಾನಗಳು ಸಿಗಲಿವೆ.

ಪರಿಷತ್ತಿನಲ್ಲಿ ಬಿಜೆಪಿ ‍ಪ್ರತಿನಿಧಿಸುವ ಬಿ.ಜೆ. ಪುಟ್ಟಸ್ವಾಮಿ, ಡಿ.ಎಸ್‌. ವೀರಯ್ಯ, ರಘುನಾಥ ರಾವ್ ಮಲ್ಕಾಪುರೆ ಪುನರಾಯ್ಕೆ ಬಯಸಿದ್ದಾರೆ.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಲ್ಲಿ ಸಕ್ರಿಯರಾಗಿದ್ದು ಈಗ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ರವಿಕುಮಾರ್‌ ಅವರನ್ನು ಕಣಕ್ಕೆ ಇಳಿಸಲು ಬಹುತೇಕರು ಸಹಮತ ಹೊಂದಿದ್ದಾರೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಸೋಲುಕಂಡಿರುವ ಆನೇಕಲ್‌ನ ನಾರಾಯಣ ಸ್ವಾಮಿ ಪ್ರಬಲ ಲಾಬಿ ನಡೆಸಿದ್ದಾರೆ.

ADVERTISEMENT

ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡ 2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಈ ಬಾರಿಯೂ ಶಿವಮೊಗ್ಗ ಕ್ಷೇತ್ರದಿಂದ ಅವರಿಗೇ ಟಿಕೆಟ್ ನೀಡಬೇಕು ಎಂಬ ಅಪೇಕ್ಷೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರದ್ದಾಗಿತ್ತು. ಆದರೆ, ಪಕ್ಷದ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಈ ಸಂದರ್ಭದಲ್ಲಿ, ರುದ್ರೇಗೌಡರಿಗೆ ಪರಿಷತ್ತಿನ ಸದಸ್ಯತ್ವ ನೀಡುವ ಭರವಸೆ ನೀಡಲಾಗಿತ್ತು. ಹೀಗಾಗಿ, ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

2011ರಲ್ಲಿ ಮುಖ್ಯಮಂತ್ರಿಯಾದ ಡಿ.ವಿ. ಸದಾನಂದಗೌಡ ಅವರು ವಿಧಾನಸಭೆ ಅಥವಾ ಪರಿಷತ್ತಿನ ಸದಸ್ಯರಾಗಿರಲಿಲ್ಲ. ಅವರಿಗೆ ಅವಕಾಶ ಮಾಡಿಕೊಡಲು, ಅಂದು ಸದಸ್ಯರಾಗಿದ್ದ ಶಂಕರಪ್ಪ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅವರಿಗೆ ಈ ಬಾರಿ ಅವಕಾಶ ಕಲ್ಪಿಸುವಂತೆ ಸದಾನಂದಗೌಡರು ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ನಾಮಪತ್ರ ಸಲ್ಲಿಕೆಗೆ ಇದೇ 31ರಂದು ಕೊನೆಯ ದಿನವಾಗಿದ್ದು, 29ರಂದು ಪಕ್ಷದ ಪ್ರಮುಖರ ಸಮಿತಿ ಸಭೆ ನಡೆಯಲಿದೆ. ಯಾರನ್ನು ಕಣಕ್ಕೆ ಇಳಿಸಬೇಕು ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.