ADVERTISEMENT

ಮೋದಿ, ಸಿ.ಎಂ ಮನೆಗೆ ಕಳಿಸಿ: ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ

​ಪ್ರಜಾವಾಣಿ ವಾರ್ತೆ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ಅಸಾದುದ್ದೀನ್‌ ಒವೈಸಿ, ಎಐಎಂಐಎಂ ಪಕ್ಷದ ಅಧ್ಯಕ್ಷ
ಅಸಾದುದ್ದೀನ್‌ ಒವೈಸಿ, ಎಐಎಂಐಎಂ ಪಕ್ಷದ ಅಧ್ಯಕ್ಷ   

ದಾವಣಗೆರೆ: ಕರ್ನಾಟಕವನ್ನು ಸಿದ್ದರಾಮಯ್ಯ ಅವರಿಂದ, ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ರಕ್ಷಿಸಬೇಕಾದ ಅನಿವಾರ್ಯ ಎದುರಾಗಿದೆ. ಅದಕ್ಕಾಗಿ ಎಲ್ಲೆಡೆ ಪ್ರಾದೇಶಿಕ ಪಕ್ಷಗಳು ಅಧಿಕಾರ ಹಿಡಿಯಬೇಕಿದೆ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಹೇಳಿದರು.

ಇಲ್ಲಿನ ಬೂದಾಳ್‌ ರಸ್ತೆಯ ಬಿ.ಎನ್‌. ಬಡಾವಣೆಯಲ್ಲಿ ಬುಧವಾರ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಅಮಾನುಲ್ಲಾ ಖಾನ್‌ ಅವರ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ನನ್ನನ್ನು ಕೋಮುವಾದಿ, ಪ್ರಚೋದನಕಾರಿ ಭಾಷಣಕಾರ ಎಂದು ಕಾಂಗ್ರೆಸ್‌ ಜರಿಯುತ್ತದೆ. ಆದರೆ, ಈಚೆಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಸಲ್ಮಾನ್‌ ಖುರ್ಷಿದ್‌, ಕಾಂಗ್ರೆಸ್‌ನ ಕೈಗಳಿಗೆ ಮುಸ್ಲಿಮರ ರಕ್ತದ ಕಲೆಗಳು ಅಂಟಿವೆ ಎಂದು ಹೇಳಿದ್ದಾರೆ. ಹಾಗಾದರೆ ಜಾತ್ಯತೀತವಾದಿಗಳು ಯಾರು’ ಎಂದು ಪ್ರಶ್ನಿಸಿದರು.

ADVERTISEMENT

‘ಈಚೆಗೆ ಜಮ್ಮುವಿನ ಕಠುವಾದಲ್ಲಿ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಯಿತು. ಈ ಪ್ರಕರಣದ ಆರೋಪಿಗಳಲ್ಲೊಬ್ಬ ಗುಲಾಂ ನಬಿ ಆಜಾದ್‌ ಬೆಂಬಲಿಗ. ಇದು ಕಾಂಗ್ರೆಸ್‌ನ ಅಸಲಿ ಜಾತ್ಯತೀತ ಮುಖ’ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಮುಖಂಡರ ಮೇಲೆ ಕೇಸುಗಳಿಲ್ಲವೇ ?

‘ನನ್ನ ಮೇಲೆ 22 ಪ್ರಕರಣಗಳಿವೆ ಎಂಬ ಕಾರಣ ನೀಡಿ, ರಾಜ್ಯ ಪ್ರವೇಶಕ್ಕೆ ಅನುಮತಿ ನಿರಾಕರಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯತ್ನಿಸುತ್ತಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಎಲ್ಲ ಪ್ರಕರಣಗಳ ಮಾಹಿತಿಯಿದ್ದು, ಹಲವು ಪ್ರಕರಣಗಳಲ್ಲಿ ಖುಲಾಸೆಯಾಗಿದೆ. ಕಾಂಗ್ರೆಸ್ ಮುಖಂಡರ ಮೇಲೆ ಯಾವ ಕ್ರಿಮಿನಲ್‌ ಕೇಸ್‌ಗಳೂ ಇಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.