ADVERTISEMENT

ಯಡಿಯೂರಪ್ಪ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ

ಹತ್ತೇ ನಿಮಿಷಗಳಲ್ಲಿ ಮುಕ್ತಾಯಗೊಂಡ ಸಭೆ

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:30 IST
Last Updated 16 ಮೇ 2018, 19:30 IST
ಯಡಿಯೂರಪ್ಪ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ
ಯಡಿಯೂರಪ್ಪ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ   

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬಿ.ಎಸ್.ಯಡಿಯೂರಪ್ಪ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ ನಡೆದ ಸಭೆಯಲ್ಲಿ ಈ ಪ್ರಕ್ರಿಯೆ ನಡೆಯಿತು. ಹತ್ತೇ ನಿಮಿಷಗಳಲ್ಲಿ ಸಭೆ ಮುಕ್ತಾಯಗೊಂಡಿತು. ಯಡಿಯೂ
ರಪ್ಪ ಅವರನ್ನು ಕೇಂದ್ರ ಸಚಿವರಾದ ಅನಂತ ಕುಮಾರ್, ಪ್ರಕಾಶ್‌ ಜಾವಡೇಕರ್, ಜೆ.ಪಿ.ನಡ್ಡಾ, ಶಾಸಕ ಜಗದೀಶ ಶೆಟ್ಟರ್ ಅಭಿನಂದಿಸಿದರು.

ಇದಕ್ಕೂ ಮುನ್ನ, ಡಾಲರ್ಸ್‌ ಕಾಲೊನಿಯ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಶಾಸಕ ಕೆ.ಎಸ್‌.ಈಶ್ವರಪ್ಪ ಭೇಟಿ ಮಾಡಿದರು.

ADVERTISEMENT

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಈಶ್ವರಪ್ಪ, ‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಯಿಂದ ಉಭಯ ಪಕ್ಷಗಳ ಹಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಬಿಜೆಪಿಗೆ ಬೆಂಬಲ ನೀಡುವುದಾಗಿ ಆ ಶಾಸಕರು ಭರವಸೆ ನೀಡಿದ್ದಾರೆ. ನಾವೇ ಸರ್ಕಾರ ರಚಿಸುತ್ತೇವೆ’ ಎಂದರು.

ಇದೇ ವೇಳೆ, ಪಕ್ಷದ ನೂತನ ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶುಭ ಕೋರಿದರು. ಬಿಜೆ‍ಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಶಾಸಕರಾದ ಬಸವರಾಜ ಬೊಮ್ಮಾಯಿ, ಸಿ.ಎಂ. ಉದಾಸಿ ಜತೆಗೆ ಸಮಾಲೋಚನೆ ನಡೆಸಿದರು. ‘ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ
ವಚನ ಸ್ವೀಕರಿಸುವುದು ಖಚಿತ’ ಎಂದು ಯಡಿಯೂರಪ್ಪ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಕೇಂದ್ರ ಸಚಿವ ಅನಂತ ಕುಮಾರ್‌, ‘ಕಾಂಗ್ರೆಸ್‌ ಅನ್ನು ರಾಜ್ಯದ ಜನ ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ ಬೇಡ, ಬಿಜೆಪಿ ಬೇಕು ಎಂದಿದ್ದಾರೆ. ಆದರೆ, ಹಿಂಬಾಗಿಲಿನಿಂದ ಅಧಿಕಾರ ಪಡೆಯಲು ಕಾಂಗ್ರೆಸ್‌ ಮುಂದಾಗಿದೆ’ ಎಂದು ಕಿಡಿಕಾರಿದರು.

‘ಕಾಂಗ್ರೆಸ್‌ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರನ್ನು ಭೇಟಿಯಾದ ಬಳಿಕ ಪಕ್ಷದ ಕಚೇರಿಗೆ ಮರಳಿದ ಯಡಿಯೂರಪ್ಪ, ನೂತನ ಶಾಸಕರನ್ನು ಉದ್ದೇಶಿಸಿ ಮಾತನಾಡಿದರು. ‘ಚಿಂತೆ ಮಾಡ
ಬೇಡಿ. ಕಾಂಗ್ರೆಸ್‌ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ. ನಮ್ಮ ನೇತೃತ್ವದ ಸರ್ಕಾರವೇ ರಚನೆಯಾಗಲಿದೆ’ ಎಂದರು.

ಬಳಿಕ ಡಾಲರ್ಸ್‌ ಕಾಲೊನಿಯ ನಿವಾಸದಲ್ಲಿ ಹಿರಿಯ ಮುಖಂಡರ ಜತೆಗೆ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.