ADVERTISEMENT

ರಾಜ್ಯ ವಿಧಾನಸಭೆ ಚುನಾವಣೆ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 10:47 IST
Last Updated 24 ಏಪ್ರಿಲ್ 2018, 10:47 IST
ರಾಜ್ಯ ವಿಧಾನಸಭೆ ಚುನಾವಣೆ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯ
ರಾಜ್ಯ ವಿಧಾನಸಭೆ ಚುನಾವಣೆ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯ   

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಮಂಗಳವಾರ ಮುಕ್ತಾಯವಾಯಿತು.

ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿ, ಏ.17ರಿಂದ ಏ.24ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿತ್ತು.

ಕೊನೆಯ ದಿನವಾದ ಇಂದು ರಾಜ್ಯದ ಗಮನ ಸೆಳೆದಿರುವ ಕ್ಷೇತ್ರ ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಶ್ರೀರಾಮುಲು, ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವ ಎಂ.ಎಚ್‌. ಅಂಬರೀಷ್‌ ಅವರು ಕಾಂಗ್ರೆಸ್‌ಗೆ ‘ಕೈ’ಕೊಟ್ಟಿದ್ದರಿಂದ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಗಣಿಗ ಪಿ. ರವಿಕುಮಾರ್ ಅವರನ್ನು ಕಣಕ್ಕಿಳಿಸಿದೆ.

ADVERTISEMENT

ಎಲ್ಲರ ಕುತೂಲ ಕೆರಳಿಸಿದ್ದ ವರುಣಾ ಕ್ಷೇತ್ರದಲ್ಲಿ ಸಿಎಂ ಪುತ್ರನ ವಿರುದ್ಧ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂದು ಹೇಳುತ್ತಾ ಬಂದಿದ್ದ ಬಿಜೆಪಿ ಸೋಮವಾರ ತನ್ನ ವರಸೆಯನ್ನು ಬದಲಿಸಿತ್ತು. ವಿಜಯೇಂದ್ರ ನಾಮಪತ್ರ ಸಲ್ಲಿಸುವುದಿಲ್ಲ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ನಿನ್ನೆ ಮತ್ತು ಇಂದು ಹೇಳಿಕೆ ನೀಡಿ ಸ್ಪಷ್ಟ ಪಡಿಸಿದರು. ಇದಕ್ಕೆ ಒಪ್ಪದ ಕಾರ್ಯಕರ್ತರು ವಿಜಯೇಂದ್ರ ಅವರಿಗೇ ಟಿಕೆಟ್‌ ನೀಡಬೇಕು ಎಂದು ಮೈಸೂರಿನಲ್ಲಿ ಪ್ರತಿಭಟನೆಗಿಳಿದಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ ಘಟನೆಯೂ ನಡೆಯಿತು.

ವರುಣಾದಲ್ಲಿ ತೋಟದಪ್ಪ ಬಸವರಾಜಪ್ಪ ಬಿಜೆಪಿಯಿಂದ ಕಣಕ್ಕೆ
ಕೊನೆ ಕ್ಷಣದಲ್ಲಿ ಬಿ.ವೈ.ವಿಜಯೇಂದ್ರಗೆ ಟಿಕೆಟ್‌ ಕೈತಪ್ಪಿದ್ದರಿಂದ ತೋಟದಪ್ಪ ಬಸವರಾಜಪ್ಪ ಅವರು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

* ಏ. 25ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ. 27ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ.

ಕೊನೆಯ ದಿನ ಮಧ್ಯಾಹ್ನ 3ರ ವರೆಗೆ ನಾಮಪತ್ರ ಸಲ್ಲಿಸಲು ಸ್ಪರ್ಧಾಕಾಂಕ್ಷಿಗಳಿಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿತ್ತು. ಈ ಸಂಬಂದ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಚುನಾವಣಾ ಕಚೇರಿಯನ್ನು ತರೆದು ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆಗೆ ಭದ್ರತಾ ವ್ಯವಸ್ಥೆಯನ್ನೂ ಒದಗಿಸಲಾಗಿತ್ತು.

ಯಾವ ದಿನ ಏನು?
ಏ. 17ರಂದು ನಾಮಪತ್ರ ಸಲ್ಲಿಕೆ ಆರಂಭ

ಏ. 24ರಂದು ನಾಮಪತ್ರ ಸಲ್ಲಿಕೆಗೆ ಕೊನೆದಿನ

ಏ. 25 ನಾಮಪತ್ರ ಪರಿಶೀಲನೆ

ಏ. 27 ನಾಮಪತ್ರ ವಾಪಸ್‌ಗೆ ಕೊನೆ ದಿನ

ಮೇ 12 ಮತದಾನ

ಮೇ 15 ಮತ ಏಣಿಕೆ

ಮೇ 18 ಚುನಾವಣಾ ಪ್ರಕ್ರಿಯೆ ಪೂರ್ಣ

ಮೊಬೈಲ್‌ ಆ್ಯಪ್‌
ಚುನಾವಣೆಯನ್ನು ಕ್ರಮಬದ್ಧ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಚುನಾವಣಾ ಆಯೋಗವು ಸುವಿಧ, ಸುಗಮ ಹಾಗೂ ಸಮಾಧಾನ್‌ ಎಂಬ ಆ್ಯಪ್‌ ಬಿಡುಗಡೆ ಮಾಡಿದೆ.

ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ, ರ‍್ಯಾಲಿ, ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆಯಲು ‘ಸುವಿಧ’ ಆ್ಯಪ್‌, ಚುನಾವಣೆಗಾಗಿ ಬಳಸುವ ವಾಹನಗಳಿಗೆ ಜಿಪಿಆರ್‌ಎಸ್‌ ಅಳವಡಿಸಿ ಅವುಗಳ ಸಂಚಾರದ ಬಗ್ಗೆ ನಿಗಾ ವಹಿಸಲು ‘ಸುಗಮ’ ಆ್ಯಪ್‌ ಹಾಗೂ ಸಾರ್ವಜನಿಕರ ದೂರು ಸಲ್ಲಿಸಲು ‘ಸಮಾಧಾನ್‌’ ಆ್ಯಪ್‌ ಅನ್ನು ಬಿಡುಗಡೆ ಮಾಡಲಾಗಿದೆ.

ceo.karnataka.kar.nic.in ತಂತ್ರಾಂಶದ ಮೂಲಕ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಆ್ಯಪ್‌ ಆಯ್ಕೆ ಮಾಡಿ ಅರ್ಜಿ ಸಲ್ಲಿಸಬೇಕು. ಅರ್ಜಿಯ ಹಿರಿಯತೆ ಆಧಾರದ ಮೇಲೆ ಅನುಮತಿ ನೀಡಲಾಗುವುದು.

ಸಾರ್ವಜನಿಕರು ಚುನಾವಣಾ ಅಕ್ರಮದ ಬಗ್ಗೆ ‘ಸಮಾಧಾನ್‌’ ಆ್ಯಪ್‌ ಮೂಲಕ ಅಥವಾ ದೂರವಾಣಿ ಮೂಲಕ ಮಾಹಿತಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.