ADVERTISEMENT

ರೆಡ್ಡಿ ಸೋದರರ ಕಾಲೆಳೆದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 16:46 IST
Last Updated 25 ಏಪ್ರಿಲ್ 2018, 16:46 IST
ರೆಡ್ಡಿ ಸೋದರರ ಕಾಲೆಳೆದ ಸಿ.ಎಂ
ರೆಡ್ಡಿ ಸೋದರರ ಕಾಲೆಳೆದ ಸಿ.ಎಂ   

ಬೆಂಗಳೂರು: ಚುನಾವಣಾ ಅಖಾಡ ರಂಗೇರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣಿ ಧಣಿಗಳಾದ ಜನಾರ್ದನ ರೆಡ್ಡಿ ಸಹೋದರರ ಕಾಲೆಳೆದಿದ್ದಾರೆ.

‘ರೆಡ್ಡಿ ಸಹೋದರರ ಸಾರಥ್ಯದಲ್ಲಿ 2008–12ರವರೆಗೆ ಬಳ್ಳಾರಿ ರಿಪಬ್ಲಿಕ್‌ ನಡೆಯಿತು. ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಅವರು ಲೆಕ್ಕಕ್ಕೆ ಮಾತ್ರ ಮುಖ್ಯಮಂತ್ರಿಯಾಗಿದ್ದರು. ಆಪರೇಷನ್‌ ಕಮಲದ ಅಡಿಯಲ್ಲಿ ಶಾಸಕರನ್ನು ಖರೀದಿಸಿದರು ಹಾಗೂ ಸರ್ಕಾರ ಉಳಿಸಿಕೊಳ್ಳಲು ರೆಸಾರ್ಟ್‌ನಲ್ಲಿ ಇಟ್ಟರು. ₹35 ಸಾವಿರ ಕೋಟಿ ಮೌಲ್ಯದ ಅದಿರು ಲೂಟಿ ಮಾಡಿದರು. ಅತ್ಯಂತ ಭ್ರಷ್ಟ ರಾಜ್ಯ ಎಂಬ ಕುಖ್ಯಾತಿ ಬರುವಂತೆ ಮಾಡಿದರು. ರಾಜ್ಯವನ್ನು ಲೂಟಿ ಮಾಡಲು ಮತ್ತೊಮ್ಮೆ ಬಂದಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ರಾತ್ರಿ ಟ್ವೀಟ್‌ ಮಾಡಿದ್ದರು.

ಜತೆಗೆ, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್‌ ಸಿಂಗ್‌ ಸುರ್ಜೇವಾಲಾ ಪತ್ರಿಕಾಗೋಷ್ಠಿಯ ವಿವರಗಳನ್ನು ಟ್ಯಾಗ್‌ ಮಾಡಿದ್ದರು. ಇದಕ್ಕೆ 826 ಮಂದಿ ರೀಟ್ವೀಟ್‌ ಮಾಡಿದ್ದಾರೆ ಹಾಗೂ 1,784 ಮಂದಿ ಲೈಕ್‌ ಮಾಡಿದ್ದಾರೆ. ಕೆಲವರು ಮುಖ್ಯಮಂತ್ರಿ ಪರ ನಿಂತರೆ, ಇನ್ನು ಕೆಲವರು ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.

ADVERTISEMENT

‘ಯಾವ ಗಣಿ ಧಣಿಗಳ ವಿರುದ್ಧ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ದರೋ ಇಂದು ಅದೇ ಗಣಿ ಲೂಟಿಯಲ್ಲಿ ಭಾಗಿಯಾಗಿದ್ದ ಆನಂದ್‌ ಸಿಂಗ್, ನಾಗೇಂದ್ರ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸಿದ್ದರಾಮಯ್ಯನವರು ತಾವು ಅಧಿಕಾರಕ್ಕೆ ಬರಲು ಪಾದಯಾತ್ರೆ ನಾಟಕವಾಡಿದ್ದಾರೆ’ ಎಂದು ಸಂಗ‌ಮೇಶ್‌ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಸ್ವಾಮಿ ಆನಂದ್ ಸಿಂಗ್‌, ಕೂಡ್ಲಿಗಿ ನಾಗೇಂದ್ರ, ಖೇಣಿ, ಇವರೆಲ್ಲರೂ ಸಾಚಾನಾ? ನೋಡಿ, ನೀವೂ ಅವರೇ ಮತ್ತು ಅವರೂ ನೀವೇ’ ಎಂದು ನೆಟ್ಟಿಗ ರಾಹುಲ್‌ ಬೆಕನಕಾರ್‌ ಕೇಳಿದ್ದಾರೆ.

‘ಆನಂದ್ ಸಿಂಗ್, ಅಶೋಕ್ ಖೇಣಿ, ನ್ಯಾಷನಲ್ ಹೆರಾಲ್ಡ್ ಕೇಸ್ ಹಾಕಿಸಿಕೊಂಡಿರೋ ಸೋನಿಯಾ ಗಾಂಧಿ, ರಾಹುಲ್ ಗಾಂಧಿ... ಇವರೆಲ್ಲಾ ಶುದ್ಧ ರಾಜಕಾರಣಿಗಳ ಪಟ್ಟಿಯಲ್ಲಿ ಗಿನ್ನಿಸ್ ದಾಖಲೆ ಸೇರಿರೋರು’ ಎಂದು ಸನತ್‌ ಕುಮಾರ್ ಕಣ್ಣು ಮಿಟುಕಿಸಿದ್ದಾರೆ.

‘ಬಲಾತ್ಕಾರ್‌ ಜನತಾ ಪಾರ್ಟಿ, ಭ್ರಷ್ಟಾಚಾರ ಜನತಾ ಪಾರ್ಟಿ, ಭಾರತೀಯ ಜೈಲ್‌ ಪಾರ್ಟಿ’ ಎಂದು ಮನು ಗೌಡ ಎಂಬುವವರು ಹೇಳಿದ್ದಾರೆ.

ಬಿಜೆಪಿಗೆ ಆಮದು ನಾಯಕರೇ ಗತಿ’

ಬಿಜೆಪಿ ನಾಯಕರನ್ನು ಮತ್ತೆ ಟ್ವಿಟರ್‌ನಲ್ಲಿ ಕೆಣಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಿಜೆಪಿಗೆ ರಾಜ್ಯದಲ್ಲಿ ಉತ್ತಮ ನಾಯಕರೇ ಇಲ್ಲ’ ಎಂದು ಕುಟುಕಿದ್ದಾರೆ.

‘ಉತ್ತರ ಭಾರತದ ಆಮದು ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗಾಗಿ @BJP4Karnataka ಕಾಯುವ ಮೂಲಕ, ರಾಜ್ಯದಲ್ಲಿ ಅವರಿಗೆ ನಾಯಕರೇ ಇಲ್ಲ ಎನ್ನುವುದನ್ನು ಒಪ್ಪಿಕೊಂಡಿದೆ. ಅವರ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರನ್ನು ನೆ‍ಪಮಾತ್ರಕ್ಕೆ (ಡಮ್ಮಿ) ಎನ್ನುವಂತೆ ಅವರೇ ಬಿಂಬಿಸುತ್ತಿದ್ದಾರೆ. ಪ್ರಧಾನಿ ಬರುತ್ತಾರೆ, ಹೋಗುತ್ತಾರೆ. ಇಲ್ಲಿ ಸಿದ್ದರಾಮಯ್ಯ vs ಬಿಎಸ್‌ವೈ ಮತ್ತು ಇದರಲ್ಲಿ ಗೆಲ್ಲುವುದು ಯಾರೆಂದು ನಿಮಗೆ ಗೊತ್ತೇ ಇದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ, ‘ರಾಹುಲ್‌ ಗಾಂಧಿ ಅವರೂ ಉತ್ತರ ಪ್ರದೇಶದವರೇ ಎಂಬುದನ್ನು @INCKarnataka ಮರೆತಿದೆಯಾ? ಅಥವಾ ಇಟಲಿಯವರೆನ್ನುವ ಕಟು ಸತ್ಯವನ್ನು ಒಪ್ಪಿಕೊಂಡಿದೆಯಾ? ಮೋದಿ ಅವರು ಖಂಡಿತಾ ರಾಜ್ಯಕ್ಕಲ್ಲ, ಅವರು ದೇಶಕ್ಕಾಗಿ. ಬಿಜೆಪಿಯಿಂದ ನೀವು ಎಷ್ಟು ತಳಮಳ ಅನುಭವಿಸುತ್ತಿದ್ದೀರಿ ಎಂಬುದು ಇದರಿಂದ ಸ್ಪಷ್ಟವಾಗಿದೆ’ ಎಂದಿದ್ದಾರೆ.

***

ಎಂತಹದೇ ಪರಿಸ್ಥಿತಿ ಇದ್ದರೂ ಕರ್ನಾಟಕದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ

–ಮೋಹನ್ ಭಾಗವತ್
ಆರ್‌ಎಸ್‌ಎಸ್‌ ಮುಖ್ಯಸ್ಥ

ತಮ್ಮ ವಿರುದ್ಧದ ಎಲ್ಲ 40 ಆರೋಪಗಳನ್ನೂ ಸಿಬಿಐ ವಾಪಸ್‌ ಪಡೆದಿದೆ ಎಂದು ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಕರ್ನಾಟಕದ ಗಣಿ ಧಣಿ
ಜನಾರ್ದನ ರೆಡ್ಡಿ, ಸಹೋದರರು ಎನ್‌ಡಿಟಿವಿಗೆ ತಿಳಿಸಿದ್ದಾರೆ. ರಾಜಕಾರಣಿಗಳ ವಿರುದ್ಧದ ಪ್ರಕರಣಗಳನ್ನು ವಿಶೇಷ ಕೋರ್ಟ್‌ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸುವ ಭರವಸೆಯನ್ನು ಪ್ರಧಾನಿ ಮೋದಿ 2014ರಲ್ಲಿ ನೀಡಿದ್ದರು.

ಎಂ.ಕೆ. ವೇಣು, @mkvenu1

ಇದಕ್ಕೆ ನೀವು ಮಾಡಬೇಕಾಗಿದ್ದು ಇಷ್ಟೆ. ಬಿಜೆಪಿ ಸೇರಬೇಕು. ತಕ್ಷಣವೇ ಪ್ರಕರಣಗಳನ್ನು ಕೈಬಿಟ್ಟು, ಕ್ಲೀನ್‌ ಚಿಟ್‌ ನೀಡಲಾಗುತ್ತದೆ. ಇದು ತ್ವರಿತಗತಿಯ ಇತ್ಯರ್ಥವಲ್ಲವೇ?

ರಾಜ್‌ ಕೃಷ್ಣ, @rk300777

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.