ADVERTISEMENT

ರೈತರ ಸಂಪೂರ್ಣ ಸಾಲಮನ್ನಾ ಭರವಸೆ: ಮೈತ್ರಿ ಪಕ್ಷದೊಂದಿಗೆ ಚರ್ಚಿಸಿ ನಿರ್ಧಾರ - ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಮೇ 2018, 13:28 IST
Last Updated 22 ಮೇ 2018, 13:28 IST
ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಅವರು ಭಾರತೀ ತೀರ್ಥ ಸ್ವಾಮೀಜಿ ಆಶೀರ್ವಾದ ಪಡೆದರು.
ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಅವರು ಭಾರತೀ ತೀರ್ಥ ಸ್ವಾಮೀಜಿ ಆಶೀರ್ವಾದ ಪಡೆದರು.   

ಚಿಕ್ಕಮಗಳೂರು: ರೈತರ ಸಂಪೂರ್ಣ ಸಾಲಮನ್ನಾ ನಿಟ್ಟಿನಲ್ಲಿ ಸಚಿವ ಸಂಪುಟ ರಚನೆಯಾದ ನಂತರ ಮೈತ್ರಿ ಪಕ್ಷದವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯ ಧಾರ್ಮಿಕ ಕ್ಷೇತ್ರ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್‌ಗೆ ಬಹುಮತ ನೀಡಿದ್ದರೆ ಪ್ರಮಾಣವಚನ ಸ್ವೀಕರಿಸಿದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತಿದ್ದೆ. ಈಗ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡುತ್ತಿದ್ದೇವೆ. ಎರಡು ಪಕ್ಷಗಳು ಜೊತೆಯಾಗಿ ಸಾಗಬೇಕಿದೆ. ಹೀಗಾಗಿ, ಕಾಂಗ್ರೆಸ್‌ ಪಕ್ಷವನ್ನು ವಿಶ್ವಾಸ ತೆಗೆದುಕೊಂಡು ತೀರ್ಮಾನ ಕೈಗೊಳ್ಳಬೇಕಿದೆ’ ಎಂದು ಪ್ರತಿಕ್ರಿಯಿಸಿದರು.

‘ಜೆಡಿಎಸ್‌ಗೆ ಪೂರ್ಣ ಬಹುಮತ ನೀಡಿದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಜನರನ್ನು ಪರಿಪರಿಯಾಗಿ ಬೇಡಿಕೊಂಡಿದ್ದೆ. ಜನತೆ ನಮ್ಮನ್ನು ತಿರಸ್ಕರಿಸಿರುವುದನ್ನು ಗಮನಿಸಿದರೆ ಜನರಿಗೆ ಸಾಲಮನ್ನಾ ಬೇಕಿಲ್ಲವೇನೋ ಎಂದೆನಿಸಿದೆ. ಜನತೆ ನಮಗೆ ಅಧಿಕಾರ ಕೊಟ್ಟಲ್ಲ’ ಎಂದು ಉತ್ತರಿಸಿದರು.

ADVERTISEMENT

‘ಎರಡೂ ಪಕ್ಷಗಳೂ ಪ್ರಣಾಳಿಕೆಯಲ್ಲಿ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕಾದ ಕರ್ತವ್ಯ, ಬದ್ಧತೆ ನಮ್ಮ ಮೇಲಿದೆ. ರೈತರು ನೆಮ್ಮದಿಯಿಂದ ಬದುಕಬೇಕು. ಅವರು ಸುಖ ಮುಖ್ಯ.  ಮೈತ್ರಿ ಪಕ್ಷದ ಸಹಕಾರ ಪಡೆದು ಪ್ರಣಾಳಿಕೆಯಲ್ಲಿನ ಅಂಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ತೀರ್ಮಾನ ಕೈಗೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ’ ಎಂದು ಹೇಳಿದರು.

ಚಂಡಿಕಾಯಾಗ, ಪೂರ್ಣಾಹುತಿ ಕೈಂಕರ್ಯ
ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಮುನ್ನಾದಿನವಾದ ಮಂಗಳವಾರ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಅನಿತಾ ಕುಮಾರಸ್ವಾಮಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಪತ್ನಿ ಚೆನ್ನಮ್ಮ, ಪುತ್ರಿ ಅನಸೂಯಾ, ಶಾಸಕ ಎಚ್‌.ಡಿ.ರೇವಣ್ಣ  ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.

ಶೃಂಗೇರಿ ಶಾರದಾಂಬೆ ದೇಗುಲದ ಆವರಣದಲ್ಲಿನ ಚಂದ್ರಶೇಖರ ಭಾರತೀ ಸ್ವಾಮೀಜಿ ಸಭಾ ಭವನದಲ್ಲಿ ಕುಟುಂಬದವರೊಡಗೂಡಿ ಚಂಡಿಕಾಯಾಗ, ಪೂರ್ಣಾಹುತಿ ಕೈಂಕರ್ಯ ನೆರವೇರಿಸಿದರು. ನಂತರ, ನರಸಿಂಹ ವನಕ್ಕೆ ತೆರಳಿ ಭಾರತೀ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಅಲ್ಲಿಂದ ಕಾಳಿಕಾಂಬ ದೇವಸ್ಥಾನಕ್ಕೆ ತೆರಳಿ ನಮಿಸಿದರು. ತೋರಣ ಗಣಪತಿ ದೇಗುಲದಲ್ಲಿ ಹಿಡುಗಾಯಿ ಸೇವೆ ನೆರವೇರಿಸಿದರು.

ಚಂಡಿಕಾಯಾಗ, ಪೂರ್ಣಾಹುತಿ ಕೈಂಕರ್ಯದಲ್ಲಿ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕುಟುಂಬದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.