ADVERTISEMENT

ವಿಧಾನಸೌಧದಲ್ಲಿ ಮತ್ತೊಮ್ಮೆ ಹಾರುವುದೇ ಹಸಿರು ಟವೆಲ್‌?

ಪ್ರಚಾರಕ್ಕೆ ಅಂತರರಾಷ್ಟ್ರೀಯ ರೈತ ಪ್ರತಿನಿಧಿಗಳು

ಎಂ.ಎನ್.ಯೋಗೇಶ್‌
Published 5 ಏಪ್ರಿಲ್ 2018, 17:18 IST
Last Updated 5 ಏಪ್ರಿಲ್ 2018, 17:18 IST
ವಿಧಾನಸೌಧದಲ್ಲಿ ಮತ್ತೊಮ್ಮೆ ಹಾರುವುದೇ ಹಸಿರು ಟವೆಲ್‌?
ವಿಧಾನಸೌಧದಲ್ಲಿ ಮತ್ತೊಮ್ಮೆ ಹಾರುವುದೇ ಹಸಿರು ಟವೆಲ್‌?   

ಗ್ರಾಮೀಣ ಕುಸ್ತಿ, ಕಬಡ್ಡಿಗೆ ರಾಯಭಾರಿಯಂತಿದ್ದ ಕೆ.ಎಸ್‌.ಪುಟ್ಟಣ್ಣಯ್ಯ ನಿಧನದೊಂದಿಗೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕ್ರೀಡಾಸ್ಫೂರ್ತಿಯೊಂದು ಮರೆಯಾದಂತಾಯಿತು. ಆದರೆ, ಬಾಲ್‌ ಬ್ಯಾಡ್ಮಿಂಟನ್‌ ಕ್ರೀಡಾಪಟು, ಪುಟ್ಟಣ್ಣಯ್ಯ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಕ್ಷೇತ್ರದಲ್ಲಿ ಮತ್ತೊಮ್ಮೆ ಕ್ರೀಡಾಸ್ಫೂರ್ತಿ ಎದ್ದು ಕಾಣುತ್ತಿದೆ.

‘ದೇಶದ ಏಕೈಕ ರೈತ ಪ್ರತಿನಿಧಿ’ ಎಂಬ ಕೀರ್ತಿಗೆ ಪಾತ್ರರಾಗಿದ್ದ ಪುಟ್ಟಣ್ಣಯ್ಯ ಸ್ವರಾಜ್‌ ಇಂಡಿಯಾ ಪಕ್ಷದಿಂದ ಸ್ಪರ್ಧಿಸಲು ಅಣಿಯಾಗುತ್ತಿದ್ದಾಗಲೇ ಮೃತಪಟ್ಟಿದ್ದು ಅನಿರೀಕ್ಷಿತ. ಬಿ.ಇ ಪದವಿ ಪಡೆದು ಅಮೆರಿಕದಲ್ಲಿ ಸ್ವಂತ ಕಂಪನಿ ಸ್ಥಾಪಿಸಿದ್ದ ದರ್ಶನ್‌ ಈಗ ತಂದೆಯ ಉತ್ತರಾಧಿಕಾರಿ. ತಂದೆಯ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಅವರು, ಬ್ಯಾಂಕ್‌ನಲ್ಲಿ ರೈತರು ಅಡವಿಟ್ಟ ಚಿನ್ನದ ಹರಾಜು ಪ್ರಕ್ರಿಯೆ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ತಂದೆಯಂತೆ ‘ಮಾತಿನ ಮಲ್ಲ’ನಲ್ಲದಿದ್ದರೂ ತಮ್ಮ ಗಾಂಭೀರ್ಯದಿಂದ ಗಮನ ಸೆಳೆಯುತ್ತಿದ್ದಾರೆ. ತಂದೆಯಂತೆ ನ್ಯಾಯ–ಪಂಚಾಯಿತಿ ಮಾಡದಿದ್ದರೂ ಜನರ ಜೊತೆ ಬೆರೆಯುವ ಮೂಲಕ ಭರವಸೆ ಮೂಡಿಸಿದ್ದಾರೆ.

ರೈತ ಸಂಘದ ಹಳೇ ತಲೆಮಾರಿನ ಮುಖಂಡರ ಮಕ್ಕಳೆಲ್ಲರೂ ಈಗ ದರ್ಶನ್‌ ಬೆನ್ನಿಗೆ ನಿಂತಿದ್ದಾರೆ. ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಮಕ್ಕಳಾದ ಚುಕ್ಕಿ, ಪಚ್ಚೆ, ಎನ್‌.ಡಿ.ಸುಂದರೇಶ್‌ ಅವರ ಪುತ್ರ ಸತೀಶ್‌ ಪ್ರಚಾರಕ್ಕೆ ಇಳಿದಿದ್ದಾರೆ. ಯೋಗೇಂದ್ರ ಯಾದವ್‌, ದೇವನೂರ ಮಹಾದೇವ ಸೇರಿ ಸ್ವರಾಜ್‌ ಇಂಡಿಯಾ ಪಕ್ಷದ ರಾಷ್ಟ್ರ, ರಾಜ್ಯ ಮಟ್ಟದ ಮುಖಂಡರು ‘ದರ್ಶನ್‌ ಗೆಲುವೇ ಪುಟ್ಟಣ್ಣಯ್ಯ ಗೆಲುವು’ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ, ಇಟಲಿಯ ‘ಲಾ ವಯಾ ಕಂಪ್ಯಾಸಿನಾ’ (ಅಂತರರಾಷ್ಟ್ರೀಯ ರೈತ ಒಕ್ಕೂಟ) ಕಾರ್ಯಕರ್ತರು ಪ್ರಚಾರ ಮಾಡಲು ಪಾಂಡವಪುರಕ್ಕೆ ಬರುತ್ತಿದ್ದಾರೆ. ಈ ಎಲ್ಲ ಕಾರಣದಿಂದಾಗಿ, ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವ ಕಣವಾಗಿ ಮಾರ್ಪಟ್ಟಿದೆ.

ADVERTISEMENT

ಪುಟ್ಟರಾಜು ಕೈಗೆ ಜೆಡಿಎಸ್‌ ನಾಯಕತ್ವ: ಕೆ.ಎಸ್‌.ಪುಟ್ಟಣ್ಣಯ್ಯ ಭೌತಿಕವಾಗಿ ಇಲ್ಲದಿದ್ದರೂ ಈ ಚುನಾವಣೆ ಪುಟ್ಟಣ್ಣಯ್ಯ ಮತ್ತು ಜೆಡಿಎಸ್‌ ಅಭ್ಯರ್ಥಿ ಸಿ.ಎಸ್‌.ಪುಟ್ಟರಾಜು ನಡುವಿನ ಹೋರಾಟ ಎಂದೇ ಬಿಂಬಿತವಾಗಿದೆ.

ಎನ್‌.ಚಲುವರಾಯಸ್ವಾಮಿ ಅವರಲ್ಲಿದ್ದ ಜಿಲ್ಲೆಯ ಜೆಡಿಎಸ್‌ ನಾಯಕತ್ವ ಈಗ ಪುಟ್ಟರಾಜು ಹೆಗಲಿಗೆ ಜಾರಿದೆ. ಸಂಸತ್‌ ಸದಸ್ಯತ್ವದ ಸ್ಥಾನ ಇನ್ನೂ ಒಂದು ವರ್ಷ ಬಾಕಿ ಇದ್ದರೂ ಅವರನ್ನು ವಿಧಾನಸಭೆಗೆ ಕಳುಹಿಸಲು ಎಚ್‌.ಡಿ.ದೇವೇಗೌಡ ಮುಂದಾಗಿದ್ದಾರೆ. ಕುಮಾರ ಪರ್ವ, ವಿಕಾಸ ಪರ್ವ, ಮನೆಮನೆಗೆ ಕುಮಾರಣ್ಣ, ರೈತ ಚೈತನ್ಯ ಯಾತ್ರೆ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್‌ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ.

ಪುಟ್ಟಣ್ಣಯ್ಯ ನಿಧನದಿಂದ ಸೃಷ್ಟಿಯಾಗಿರುವ ಅನುಕಂಪದ ಅಲೆಯ ವಿರುದ್ಧ ಪುಟ್ಟರಾಜು ಈಜಬೇಕಾಗಿದೆ. ಜೊತೆಗೆ ಬೇಬಿ ಬೆಟ್ಟದ ಅಕ್ರಮ ಕಲ್ಲುಗಣಿಗಾರಿಕೆ ಉರುಳು ಕೊರಳಿಗೆ ಸುತ್ತಿಕೊಂಡಿದೆ. ಹಲವು ದೂರುಗಳು ದಾಖಲಾಗಿದ್ದು ವಿಚಾರಣೆ ಹಂತದಲ್ಲಿವೆ. ತಮ್ಮೆಲ್ಲಾ ಶಕ್ತಿಯನ್ನು ಪಣಕ್ಕಿಟ್ಟು ಅವರು ರಾಜ್ಯ ರಾಜಕಾರಣಕ್ಕೆ ಬರಲು ಹವಣಿಸುತ್ತಿದ್ದಾರೆ. ಲಕ್ಷಾಂತರ ಜನ ಸೇರಿಸಿ ಕುಮಾರ ಪರ್ವ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಮಳೆಯಲ್ಲೇ ನಿಂತು ಎಚ್‌.ಡಿ.ಕುಮಾರಸ್ವಾಮಿ ಭಾಷಣ ಮಾಡಿದ್ದು, ಕಣ್ಣೀರು ಹಾಕಿದ್ದು ಎಲ್ಲವೂ ಕ್ಷೇತ್ರದಲ್ಲಿ ಕುತೂಹಲ ಸೃಷ್ಟಿಸಿವೆ.

ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ 2 ಬಾರಿ ಶಾಸಕರಾಗಿದ್ದ ಡಿ.ಹಲಗೇಗೌಡರ ಮಗ ಎಚ್‌.ಮಂಜುನಾಥ್‌ ಈಗ ಬಿಜೆಪಿ ಅಂಗಳದಲ್ಲಿದ್ದು ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಇದೆ. ರೇಕಿ, ಸಮ್ಮೋಹಿನಿ ತಜ್ಞ ಡಾ. ಬಾಲಕೃಷ್ಣ ಗುರೂಜಿಯೂ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

***

ಗ್ರಾಮೋದ್ಯಮಕ್ಕೆ ಉತ್ತೇಜನ’

ತಂದೆ ಸಾಯುವುದಕ್ಕೆ ಆರು ತಿಂಗಳ ಹಿಂದೆ, ಪಚ್ಚೆ ನಂಜುಂಡಸ್ವಾಮಿ ಹಾಗೂ ನನಗೆ  ‘ನೀವಿಬ್ಬರೂ ವಿಧಾನಸೌಧದಲ್ಲಿ ಹಸಿರು ಟವೆಲ್‌ ಹಾರಿಸಬೇಕು’ ಎಂದು ಹೇಳಿದ್ದರು. ತಂದೆಯ ಕನಸು ಈಡೇರಿಸುವ ಗುರಿ ಇದೆ. ಜೊತೆಗೆ ಮಂಡ್ಯ ಜಿಲ್ಲೆ ಕೃಷಿ ಪ್ರಧಾನವಾಗಿದ್ದರೂ ಪ್ರತಿ ರೈತನ ಕೃಷಿ ಭೂಮಿ ಹಿಡುವಳಿ ಬಹಳ ಕಡಿಮೆ ಇದೆ. ಹೀಗಾಗಿ ಗ್ರಾಮದಲ್ಲೇ ಗ್ರಾಮೋದ್ಯಮ ಸ್ಥಾಪಿಸುವ ಬಗ್ಗೆ ಯುವಜನರಿಗೆ ಅರಿವು ಮೂಡಿಸಲು ಚಿಂತಿಸಲಾಗಿದೆ. ರೈತರ ಪರವಾಗಿ ಹೋರಾಟ, ಗ್ರಾಮಗಳಲ್ಲಿ ಕೃಷಿ ಆಧಾರಿತ ಸಣ್ಣ ಕಾರ್ಖಾನೆ ಸ್ಥಾಪನೆಗೆ ಉತ್ತೇಜನ ನೀಡುತ್ತೇನೆ.

ದರ್ಶನ್‌ ಪುಟ್ಟಣ್ಣಯ್ಯ, ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿ

***

‘ಅನುಕಂಪದ ಅಲೆ ಇಲ್ಲ’

ಕಳೆದ ಐದು ವರ್ಷಗಳಲ್ಲಿ ಮೇಲುಕೋಟೆ ಕ್ಷೇತ್ರವನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ರೂಪಿಸುವ ಎಲ್ಲಾ ಅವಕಾಶಗಳು ಇದ್ದವು. ಆದರೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಅಭಿವೃದ್ಧಿ ಎಂದಾಗ 10 ವರ್ಷ ಹಿಂದಕ್ಕೆ ಹೋಗಬೇಕಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಅನುಕಂಪದ ಅಲೆ ನಡೆಯದು. ಈಗ ಕ್ಷೇತ್ರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅಲೆ ಮಾತ್ರ ಇದೆ. ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಕೆಲಸಗಳನ್ನು ಜನರು ಮರೆತಿಲ್ಲ. ಅವರು ಕ್ಷೇತ್ರಕ್ಕೆ ಬಂದರೆ ಜನರು ತೋರುವ ಪ್ರೀತಿ ಜೆಡಿಎಸ್‌ ಪರ ಇರುವ ಅಲೆಯ ಪ್ರತೀಕವಾಗಿದೆ.

ಸಿ.ಎಸ್‌.ಪುಟ್ಟರಾಜು, ಜೆಡಿಎಸ್‌ ಅಭ್ಯರ್ಥಿ

***

ಗ್ರಾಮೀಣ ರಸ್ತೆಗಳು ಉತ್ತಮ ಗೊಳ್ಳುತ್ತಿವೆ. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಬಸ್‌ಗಳು ಇಲ್ಲ. ಇದರಿಂದ ಆಟೊಗಳ ಹಾವಳಿ ವಿಪರೀತವಾಗಿದ್ದು, ಅಪಘಾತದ ಭಯ ಕಾಡುತ್ತದೆ. ಸರ್ಕಾರಿ ಬಸ್‌ ಸಂಚರಿಸಿದರೆ ವಿದ್ಯಾರ್ಥಿಗಳಿಗೆ ಒಳ್ಳೆಯದಾಗುತ್ತದೆ. ಅಪಘಾತದ ಭಯವೂ ಹೋಗುತ್ತದೆ.

ಕಾವ್ಯಾ, ಬಿ.ಎ ವಿದ್ಯಾರ್ಥಿನಿ

***

ಪಾಂಡವಪುರ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಅಪೂರ್ಣ ಗೊಂಡಿದ್ದು ಜನರಿಗೆ ಬಹಳ ತೊಂದರೆಯಾಗಿದೆ. ತೆರೆದ ಚರಂಡಿಗಳಿಂದಾಗಿ ಕಾರ್ಮಿಕರು ವಾಸಿಸುವ ಗುಡಿಸಲುಗಳಲ್ಲಿ ರೋಗ ಭೀತಿ ಕಾಡುತ್ತಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಶ್ರೀಮಂತರು ವಾಸಿಸುವ ಬಡಾವಣೆಗೆ ಸೌಲಭ್ಯ ಕೊಡುತ್ತಾರೆ. ಕಾರ್ಮಿಕರು ವಾಸಿಸುವ ಗುಡಿಸಲು ಪ್ರದೇಶವನ್ನು ನಿರ್ಲಕ್ಷ್ಯ ಮಾಡುತ್ತಾರೆ.

ಶ್ರೀಧರ್, ಕಟ್ಟಡ ಕಾರ್ಮಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.