ADVERTISEMENT

ಸದನದಲ್ಲಿ ಬಿಎಸ್‌ವೈ– ಎಚ್‌ಡಿಕೆ ಜಗಳ್ಬಂದಿ

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:30 IST
Last Updated 25 ಮೇ 2018, 19:30 IST
ಸದನದಲ್ಲಿ ಬಿಎಸ್‌ವೈ– ಎಚ್‌ಡಿಕೆ ಜಗಳ್ಬಂದಿ
ಸದನದಲ್ಲಿ ಬಿಎಸ್‌ವೈ– ಎಚ್‌ಡಿಕೆ ಜಗಳ್ಬಂದಿ   

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರವು ವಿಶ್ವಾಸಮತ ಸಾಬೀತುಪಡಿಸುವ ವೇಳೆ ಸದನವು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ಜಂಗೀ ಕುಸ್ತಿಗೆ ವೇದಿಕೆಯಾಯಿತು.

ಸದನದ ಘನತೆ ಕಾಪಾಡಿ ಎಂದು ನೂತನ ಸಭಾಧ್ಯಕ್ಷ ಕೆ.ಆರ್‌. ರಮೇಶ್ ಕುಮಾರ್ ಚೌಕಟ್ಟು ಕಟ್ಟಿಕೊಟ್ಟ ಗಂಟೆಯೊಳಗೇ, ಎರಡು ಪಕ್ಷಗಳ ಮುಖಂಡರು ಈ ಎಲ್ಲ ಅಂಶಗಳನ್ನೂ ಗಾಳಿಗೆ ತೂರಿದರು. ಮುಂದಿನ ದಿನಗಳಲ್ಲಿ ಸದನ ಸಾಗುವ ಹಾದಿಯ ಮುನ್ಸೂಚನೆ ನೀಡಿದರು.

10 ವರ್ಷಗಳ ಹಿಂದಿನ ದ್ವೇಷ ಕಾರುವುದಕ್ಕೆ ಈ ಅವಕಾಶ ಬಳಸಿಕೊಂಡ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅವರು ದೇವೇಗೌಡರ ಕುಟುಂಬದ ವಿರುದ್ಧ ಬೈಗುಳಗಳ ಸುರಿಮಳೆ ಸುರಿಸಿದರು.

ADVERTISEMENT

ಅವರಿಗೆ ಅಷ್ಟೇ ತೀಕ್ಷ್ಣವಾಗಿ ಎದಿರೇಟು ನೀಡಿದ ಕುಮಾರಸ್ವಾಮಿ, ರಾಜಕೀಯವಾಗಿ ತಾವು ಎದುರಿಸಿದ ಸಂಕಷ್ಟದ ದಿನಗಳನ್ನೆಲ್ಲಾ ಬಿಚ್ಚಿಟ್ಟರು. ‘ಮುಖ್ಯಮಂತ್ರಿ ಪದವಿ ಸಿಗದ ಹತಾಶೆಯಿಂದ ಆರೋಪ ಮಾಡುತ್ತಿದ್ದಾರೆ. ಅವರೊಬ್ಬ ನಾಟಕದ ಪಾತ್ರಧಾರಿ. ಇದು ತಾಲೀಮು ಇದ್ದಂತೆ’ ಎಂದೂ ಹಂಗಿಸಿದರು.

ಕುಮಾರಸ್ವಾಮಿ ದುರ್ಯೋಧನನ ವಂಶಸ್ಥ: ಬಿಎಸ್‌ವೈ

ಕುಮಾರಸ್ವಾಮಿ ದುರ್ಯೋಧನನ ವಂಶಕ್ಕೆ ಸೇರಿದವರು. ಏಕೆಂದರೆ ದುರ್ಯೋದನನ ರಥದ ಬಾವುಟದಲ್ಲಿ ಹಾವಿನ ಲಾಂಛನ ಇರುತ್ತದೆ. ಹಾಗಾಗಿಯೇ ಅವನನ್ನು ಉರಗ ಪತಾಕಂ ಎಂದು ಕರೆಯುತ್ತಾರೆ. ವಿನಾಶವೇ ದುರ್ಯೋಧನನ ಧ್ಯೇಯ. ಅಂತಹ ವಿನಾಶಕಾರನ ಬಾಯಲ್ಲಿ ವಿಕಾಸದ ಮಂತ್ರ ಹೇಳಿಸುತ್ತಿದ್ದೀರಿ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

* ನಾಗರಹಾವಿನ ದ್ವೇಷ 12 ವರುಷ ಇರುತ್ತದೆ. ಕುಮಾರಸ್ವಾಮಿ ರೋಷ ನಾಗರಹಾವಿಗಿಂತ ಹೆಚ್ಚು. ಕೊಳ್ಳಿ ದೆವ್ವದ ಬಾಯಲ್ಲಿ ಭಗವದ್ಗೀತೆ ಬಂದಂತೆ ಆಗುತ್ತದೆ ಅಷ್ಟೆ.

* ನಂಬಿದವರನ್ನು ಮುಗಿಸುವಂತದ್ದು ಅವರ ತತ್ವ. ಧರ್ಮಸಿಂಗ್ ಅವರನ್ನು ನಂಬಿಸಿ ಬೀದಿಯಲ್ಲಿ ಬಿಟ್ಟರು. ಅದೇ ಕೊರಗಿನಲ್ಲಿ ಅವರು ಕೈಲಾಸವಾಸಿಯಾದರು. ಇಂತಹ ನಯವಂಚಕ ಕುಮಾರಸ್ವಾಮಿ. ನಮ್ಮ ಜತೆ ಸೇರಿ ಅಧಿಕಾರದ ತೀಟೆ ತೀರಿಸಿಕೊಂಡು, ರೈತರ ಉದ್ಧಾರ ಮಾಡಿದೆ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ.

* ನಾನು ಈಗ ಸಾಂದರ್ಭಿಕ ಶಿಶು ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಬಣ್ಣ ಬದಲಿಸುವ ಊಸರವಳ್ಳಿಗೆ ಧರ್ಮ, ಕರ್ಮ ಗೊತ್ತಿರುತ್ತದೆ. ಅದಕ್ಕೂ ಮೋಸ, ವಂಚನೆ ಗೊತ್ತಿಲ್ಲ. ಆದರೆ, ಈ ಸರ್ಕಾರಕ್ಕೆ ಹಿಂದಿಲ್ಲ ಮುಂದಿಲ್ಲ. ಇದು ದಿನಗೂಲಿ ಸರ್ಕಾರ. ‘ಹೆಳವನ ಹೆಗಲಮೇಲೆ ಕುರುಡ ಕೂತಿದ್ದಾನೆ. ದಾರಿ ಸಾಗುವುದೆಂತೋ ನೋಡಬೇಕು’ ಎಂದು ಕವಿ ಗೋಪಾಲ ಕೃಷ್ಣ ಅಡಿಗರು ಹೇಳುತ್ತಾರೆ. ಈ ಸರ್ಕಾರದ ಸ್ಥಿತಿ ಅದೇ ಆಗಿದೆ.

* ನರೇಂದ್ರ ಮೋದಿ ಅವರ ಅಶ್ವಮೇಧದ ಕುದುರೆ ಕಟ್ಟಿ ಹಾಕಿರುವುದಾಗಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಅವರ ಬಳಿ ಇರುವುದು ಸತ್ತ ಗಾರ್ದಭ (ಕತ್ತೆ), ಅದಕ್ಕೆ ಶೃಂಗಾರ ಮಾಡಿ ಕುದುರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕಿಂತ ತಮಾಷೆ ಬೇರೆ ಇಲ್ಲ.

* ಕುಮಾರಸ್ವಾಮಿ ಅವರು ಕೆಲವೇ ತಿಂಗಳಿನಲ್ಲಿ ಕಾಂಗ್ರೆಸ್ ಹೆಸರು ಇಲ್ಲದಂತೆ ಮಾಡದಿದ್ದರೆ ನನ್ನನ್ನು ಯಡಿಯೂರಪ್ಪ ಅಂತ ಕರೆಯಬೇಡಿ. ಅಪ್ಪ–ಮಕ್ಕಳು ಹಾಗೆ ಮಾಡದೇ ಇದ್ದರೆ ನೋಡಿ. ನಾನು ನೆಚ್ಚಿಕೊಂಡು ಬಂದ ಜೀವನ ಮೌಲ್ಯವನ್ನು ಉಲ್ಲಂಘಿಸದೇ ಇರುವುದು ಸಾರ್ಥಕ ಬದುಕು. ಅದೆಲ್ಲ ನಿಮಗೆ ಅರ್ಥವಾಗುವುದಿಲ್ಲ.

* ಜೆಡಿಎಸ್‌ ಜತೆಗೆ ಮುತ್ತಿಡಲು ಹೊರಟಿದ್ದು ಯಾಕೆ. ಅದು ಯಾವ ನೈತಿಕತೆ. ಅಧಿಕಾರಕ್ಕಾಗಿ ನಾಟಕ, ಕಪಟತನ, ಮೋಸ, ದಗಲ್ಬಾಜಿ ಮಾಡುವ ಕುಮಾರಸ್ವಾಮಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವ ನೈತಿಕತೆ ಬಗ್ಗೆ ಕಾಂಗ್ರೆಸ್ ಶಾಸಕರು ಚಿಂತನೆ ನಡೆಸಲಿ. ಕಾಂಗ್ರೆಸ್ ಭವಿಷ್ಯದ ಬಗ್ಗೆ ಯೋಚಿಸಿ. ರಾಜ್ಯದ ಅಪಾಯದ ಕಡೆ ಹೋಗುವುದನ್ನು ತಪ್ಪಿಸಿ. ಈಗ ಹೇಳುತ್ತೇನೆ. ನೀವು ಯಾರೂ ಈ ಕಡೆ ಬರಬೇಡಿ. ನಾವು ವಿರೋಧ ಪಕ್ಷದಲ್ಲಿ ಕೂರುತ್ತೇವೆ.

* ರಾಜಕೀಯದಲ್ಲಿ ಪಥ ಎಂಬುದಿದ್ದರೆ ಶಪಥ ಕೈಗೊಳ್ಳಬಹುದು. ಆದರೆ, ಸಾರ್ವಜನಿಕ ಬದುಕಿನಲ್ಲಿ ದಿಕ್ಕೆಟ್ಟ ಪಥ, ದಿಕ್ಕುದೆಸೆ ಇಲ್ಲದ ಪಥ ಇರುವವರಿಂದ ಶಪಥ ಹೇಗೆ ಸಾಧ್ಯ. ಪಥವೇ ಇಲ್ಲದ ಕುಮಾರಸ್ವಾಮಿ ಕೈಗೊಂಡ ಶಪಥದಿಂದ ತಬ್ಬಲಿಯು ನೀನಾದೆ ಮಗನೇ ಎಂಬ ಸ್ಥಿತಿ ಉಂಟಾಗಲಿದೆ. ತಬ್ಬಲಿಗಳನ್ನು ಹೆಬ್ಬುಲಿಗಳ ಮೇಲೆ ಹಾಕುವುದು ಕುಮಾರಸ್ವಾಮಿ ಅವರ ಪಥ.

* 12 ವರ್ಷ ಅಧಿಕಾರ ಇಲ್ಲದೇ ವನವಾಸ ಅನುಭವಿಸಿದ್ದ ಕುಮಾರಸ್ವಾಮಿಗೆ ಸಿಟ್ಟು, ಸೆಡವು, ಮಾತ್ಸರ್ಯ, ರೋಷ ಇರುವುದು ಸ್ವಾಭಾವಿಕ. ಮದ–ಮತ್ಸರಗಳೇ ತುಂಬಿರುವ ಅಪ್ಪಮಕ್ಕಳು, ಶಿವಕುಮಾರ್ ಅವರೇ ನಿಮ್ಮನ್ನು ಬಿಡುವುದಿಲ್ಲ.

* ಮೈತ್ರಿ ಮಾಡಿಕೊಂಡು ಅಪ್ಪನಿಗೆ ನೋವು ಮಾಡಿದೆ ಎಂಬ ಪಶ್ಚಾತ್ತಾಪವಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅವರ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿದ್ದು ನನ್ನ ಜೀವನದ ಅಕ್ಷಮ್ಯ ಅಪರಾಧ. ಇದಕ್ಕಾಗಿ ರಾಜ್ಯದ ಜನರ ಕ್ಷಮೆ ಕೇಳುತ್ತೇನೆ. ಅವತ್ತು ನಾನು ಕೈಜೋಡಿಸದೇ ಇದ್ದರೆ ನೀವು ಎಲ್ಲಿ ಇರುತ್ತಿದ್ದಿರಿ. ನಿಮ್ಮ ಹೃದಯವನ್ನು ಕೇಳಿಕೊಳ್ಳಿ ಕುಮಾರಸ್ವಾಮಿ.

* 20:20 ಸರ್ಕಾರದ ಹೊಂದಾಣಿಕೆ ಬಗ್ಗೆ ನಮ್ಮ ಮನೆಯಲ್ಲಿ ಕುಳಿತು ಚರ್ಚೆಯಾಗಿತ್ತು. ಅವತ್ತು ಅನಂತಕುಮಾರ್, ಈಶ್ವರಪ್ಪ, ಶೆಟ್ಟರ್ ಎಲ್ಲರೂ ಇದ್ದರು. ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಮಾಡಿದ್ದೀರಿ.

* ಶೇ 4ರ ಬಡ್ಡಿ ದರದಲ್ಲಿ ರೈತರು ಪಡೆದ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದೆ. ಆದರೆ, ನಿಮ್ಮ ತಂದೆ (ದೇವೇಗೌಡರು) ಮನೆಗೆ ಕರೆಸಿ ನಿಮಗೆ ಯಾವ ಅಧಿಕಾರ ಇದೆ, ಹಣ ಎಲ್ಲಿಂದ ತರುತ್ತೀರಿ ಎಂದು ಕೇಳಿದ್ದರು. ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡುವ ತೀರ್ಮಾನ ಕೈಗೊಂಡಾಗಲೂ ವಿರೋಧ ವ್ಯಕ್ತಪಡಿಸಿದ್ದೀರಿ. ಇಷ್ಟೆಲ್ಲ ಹೇಳಿದ ಮೇಲೂ ಕಾಂಗ್ರೆಸ್‌ನವರು ಜೆಡಿಎಸ್ ಜತೆ ಸಖ್ಯ ಮಾಡಿಕೊಳ್ಳುವುದಾದರೆ ನನ್ನದೇನೂ ಅಭ್ಯಂತರವಿಲ್ಲ. ನಾನ್ಯಾರು ಅದನ್ನು ಕೇಳುವುದಕ್ಕೆ.

* ದೇವೇಗೌಡರು ತಮ್ಮ ಮಕ್ಕಳು, ಅಳಿಯಂದಿರು ಸೇರಿದಂತೆ ಕುಟುಂಬದವರಿಗೆ 1984ರಲ್ಲಿಯೇ 46 ನಿವೇಶನಗಳನ್ನು ಮೈಸೂರಿನಲ್ಲಿ ಹಂಚಿದ್ದಾರೆ. ಕುಮಾರಸ್ವಾಮಿ ಹಿಂದೆ ಉಸ್ತುವಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2,530 ಹೆಕ್ಟೇರ್‌ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಅನುಮತಿ ಕೊಟ್ಟಿದ್ದಾರೆ. ಈ ಹಗಲು ದರೋಡೆಯನ್ನು ಬಿಚ್ಚಿಡುವೆ.

ಯಡಿಯೂರಪ್ಪ ನಾಟಕದ ಪಾತ್ರಧಾರಿ: ಎಚ್‌ಡಿಕೆ

* ಎಚ್‌.ಡಿ. ದೇವೇಗೌಡರು 10 ತಿಂಗಳು ಪ್ರಧಾನಿಯಾಗಿದ್ದರು. ಮುಖ್ಯಮಂತ್ರಿಯಾಗಿ ಇದ್ದಿದ್ದು 18 ತಿಂಗಳು. ನಾಲ್ಕು ವರ್ಷ ನೀರಾವರಿ ಮಂತ್ರಿಯಾಗಿದ್ದರು. ಅವರು ವಿರೋಧ ಪಕ್ಷದಲ್ಲಿದ್ದದ್ದೇ ಜಾಸ್ತಿ. ಕಾಂಗ್ರೆಸ್‌ ಪಕ್ಷವು ದೇವೇಗೌಡ ನೇತೃತ್ವದ ಸರ್ಕಾರದ ಬೆಂಬಲ ಹಿಂಪಡೆಯಿತು. ಆಗ ವಾಜಪೇಯಿ ಅವರು ಬೆಂಬಲ ನೀಡುತ್ತೇವೆ ಎಂದು ಚೀಟಿ ಕಳುಹಿಸಿದರು. ಅದನ್ನು ಗೌಡರು ತಿರಸ್ಕರಿಸಿದರು. ನಮ್ಮ ಕುಟುಂಬ ಯಾವತ್ತೂ ಅಧಿಕಾರಕ್ಕೆ ಅಂಟಿ ಕೂತಿಲ್ಲ.

* ನಾನು ವಚನಭ್ರಷ್ಟ ಅಲ್ಲ. 20 ತಿಂಗಳು ಅಧಿಕಾರ ನಡೆಸಿದ ಬಳಿಕ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದೆ. ಅವರು 9 ದಿನ ಅಧಿಕಾರ ನಡೆಸಿದ್ದರು. ಈ ನಡುವೆ, ಬಿಜೆಪಿಯ ಕೇಂದ್ರ ನಾಯಕರು ದೇವೇಗೌಡರ ಜತೆಗೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡರು. ಅಧಿಕಾರ ಕಳೆದುಕೊಳ್ಳಲು ನಾನು ಕಾರಣ ಅಲ್ಲ ಎಂಬುದನ್ನು ಯಡಿಯೂರಪ್ಪ ಅವರೇ ಕೆಜೆಪಿಯಲ್ಲಿದ್ದಾಗ ಹೇಳಿದ್ದಾರೆ. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ತಂದೆಗೆ ನೋವುಂಟು ಮಾಡಿದೆ. ನನ್ನ ನಡೆಯಿಂದಾಗಿ ದೇವೇಗೌಡರ ಜಾತ್ಯತೀತ ಸಿದ್ಧಾಂತಕ್ಕೆ ಕಪ್ಪು
ಚುಕ್ಕೆ ಇಟ್ಟಂತಾಗಿತ್ತು. ಈ ಸಲ ಬಿಜೆಪಿ ಜತೆಗೆ ಹೋದರೆ ಕುಟುಂಬದಿಂದ ಬಹಿಷ್ಕಾರ ಹಾಕುವುದಾಗಿ ಅಪ್ಪ ಎಚ್ಚರಿಸಿದರು. ನನ್ನ ಹಾಗೂ ಪಕ್ಷದ ರಾಜಕೀಯ ಭವಿಷ್ಯ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡೆ.

* ಯಡಿಯೂರ‍ಪ್ಪ ಅವರು ರಾಜ್ಯವನ್ನೆಲ್ಲ ಸುತ್ತಾಡಿ ಜನರ ಕಷ್ಟ ಆಲಿಸಿದ್ದಾರೆ. ಈ ವಯಸ್ಸಿನಲ್ಲಿ ಅವರು ಮತ್ತೆ ರಾಜ್ಯ ಪ್ರವಾಸ ಮಾಡಿ ಕಷ್ಟಪಡುವುದು ಬೇಡ. ಮನೆಯಲ್ಲಿ ನೆಮ್ಮದಿಯಾಗಿ ಕುಳಿತುಕೊಳ್ಳಲಿ. ಅವರಲ್ಲಿರುವ ಎಲ್ಲ ಮಾಹಿತಿಗಳನ್ನು ನಮಗೆ ಕೊಡಲಿ. ಸಮಸ್ಯೆಗಳನ್ನು ಪರಿಹರಿಸುತ್ತೇವೆ.

* ರಾಜ್ಯದಲ್ಲಿ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಫಲಿತಾಂಶ ಬಂದ ದಿನವೇ ಹೇಳಿದ್ದರು. ಇದು ಪ್ರಜಾತಂತ್ರ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿ.

* 2006ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ತಿಂಗಳು ಕಳೆದಿತ್ತು ಅಷ್ಟೆ. ಆಗ ವಿಧಾನ ‍ಪರಿಷತ್‌ ಸದಸ್ಯರೊಬ್ಬರು ₹150 ಕೋಟಿ ಗಣಿ ಲೂಟಿ ಮಾಡಿದ್ದೇನೆ ಎಂದು ಆರೋಪ ಮಾಡಿದ್ದರು. ಅದನ್ನು ಏಕಾಂಗಿಯಾಗಿ ಎದುರಿಸಿದ್ದೆ. ಸಚಿವರೊಬ್ಬರನ್ನು ಕೊಲ್ಲಿಸಲು ಸುಪಾರಿ ಕೊಟ್ಟಿದ್ದೇನೆ ಎಂದು ಎಫ್‌ಐಆರ್ ಹಾಕಿಸಿದರು. ಚಿತ್ರಹಿಂಸೆ ಅನುಭವಿಸಿ ರಾಜಕಾರಣದಲ್ಲಿ ಮುಂದುವರಿದಿದ್ದೆ.

* ನಾನು ಮಲೇಷ್ಯಾದಲ್ಲಿ ಆಸ್ತಿ ಮಾಡಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಜಾರಿ ನಿರ್ದೇಶನಾಲಯದ (ಇ.ಡಿ.) ಮೂಲಕ ದಾಳಿ ಮಾಡಿಸುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಇದಕ್ಕೆಲ್ಲ ಬಗ್ಗುವುದಿಲ್ಲ.

* ಅಧಿಕಾರದ ಚುಕ್ಕಾಣಿ ಸಿಗದ ಕಾರಣಕ್ಕೆ ಯಡಿಯೂರಪ್ಪ ಹತಾಶರಾಗಿದ್ದಾರೆ. ಬಯಲು ರಂಗಮಂದಿರದಲ್ಲಿ ನಾಟಕ ಪ್ರದರ್ಶಿಸಲು ಇಲ್ಲಿ ರಿಹರ್ಸಲ್ ಮಾಡಿದ್ದಾರೆ ಅಷ್ಟೆ.

* 2004–2008ರ ಅವಧಿಯಲ್ಲಿ ನಾನು ಮೊದಲ ಬಾರಿ ಶಾಸಕನಾಗಿದ್ದೆ. ಆಗ ಕೊನೆಯ ಸಾಲಿನಲ್ಲಿ ಕೂರುತ್ತಿದ್ದೆ. 2005ರಲ್ಲಿ ಯಡಿಯೂರಪ್ಪ ನನಗೊಂದು ಚೀಟಿ ಕಳುಹಿಸಿ, ‘ನಿಮ್ಮ ಜತೆಗೆ ಐದು ನಿಮಿಷ ಮಾತನಾಡುವುದಿದೆ. ಮನೆಗೆ ಬರಬಹುದೇ’ ಎಂದು ಕೇಳಿದ್ದರು. ಅದಕ್ಕೆ ಒಪ್ಪಿದ್ದೆ. ‘ನಾನು ಬಿಜೆಪಿಗೆ ರಾಜೀನಾಮೆ ನೀಡಿ ಬರುತ್ತೇನೆ. ನನ್ನನ್ನು ಮಂತ್ರಿಯನ್ನಾಗಿ ಮಾಡಿ’ ಎಂದು ಗೋಗರೆದಿದ್ದರು. ಆಗ ಅವರಿಗೆ ಬುದ್ಧಿಮಾತು ಹೇಳಿ ಕಳುಹಿಸಿದ್ದೆ.

* ಜಂತಕಲ್‌ ಮೈನಿಂಗ್‌ ಪ್ರಕರಣದಲ್ಲಿ ನನ್ನ ಹೆಸರಿದೆ ಎಂದು ಆರೋಪ ಮಾಡಿದ್ದಾರೆ. ಕಡತಕ್ಕೆ ಟಿಪ್ಪಣಿ ಬರೆದ ಐಎಎಸ್‌ ಅಧಿಕಾರಿ ಜೈಲಿಗೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.