ADVERTISEMENT

ಸ್ಪರ್ಧಿಸಿದ್ದ ಮೂವರು ಮಹಿಳೆಯರಿಗೂ ಜಯ!

ನಿಪ್ಪಾಣಿ, ಬೆಳಗಾವಿ ಗ್ರಾಮೀಣ, ಖಾನಾಪುರದಲ್ಲಿ ಸ್ತ್ರೀಯರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 15 ಮೇ 2018, 14:32 IST
Last Updated 15 ಮೇ 2018, 14:32 IST

ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಮುಖ ಪಕ್ಷಗಳ ಮೂವರೂ ಮಹಿಳೆಯರು ಗೆಲುವು ಸಾಧಿಸಿರುವುದು ವಿಶೇಷ ದಾಖಲೆಯಾಗಿದೆ. ಏಕೆಂದರೆ, ಈ ಹಿಂದಿನ ಯಾವುದೇ ಚುನಾವಣೆಯಲ್ಲೂ ಮೂವರು ಸ್ತ್ರೀಯರು ಒಮ್ಮೆಯೇ ಆಯ್ಕೆಯಾದ ಉದಾಹರಣೆಗಳಿಲ್ಲ.

ನಿಪ್ಪಾಣಿಯಲ್ಲಿ ಬಿಜೆಪಿಯಿಂದ ಶಶಿಕಲಾ ಜೊಲ್ಲೆ ಸತತ 2ನೇ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನಿಂದ ಲಕ್ಷ್ಮಿ ಹೆಬ್ಬಾಳಕರ (ಬೆಳಗಾವಿ ಗ್ರಾಮೀಣ) ಹಾಗೂ ಡಾ.ಅಂಜಲಿ ನಿಂಬಾಳ್ಕರ (ಖಾನಾಪುರ ಕ್ಷೇತ್ರ) ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೋದ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದ ಲಕ್ಷ್ಮಿ, ಬಿಜೆಪಿಯ ಸಂಜಯ ಪಾಟೀಲ ವಿರುದ್ಧ ಸೋತಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲೂ ಸೋತಿದ್ದರು. ಈ ಬಾರಿಯ ವಿಧಾನಸಭಾ ಚುನಾವಣಾ ಕದನದಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ಖಾತೆ ತೆರೆದಂತಾಗಿದೆ.

ADVERTISEMENT

2013ರ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಿಂದ ಟಿಕೆಟ್‌ ದೊರೆಯದಿದ್ದುದರಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಜಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲಿತ ಪಕ್ಷೇತರ ಅಭ್ಯರ್ಥಿ ಅರವಿಂದ ಪಾಟೀಲ ವಿರುದ್ಧ ಸೋಲನುಭವಿಸಿದ್ದರು. ಈ ಬಾರಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವಿನ ನಗೆ ಬೀರಿದ್ದಾರೆ. ಇದರೊಂದಿಗೆ, ಈ ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲುವಿನ ಖಾತೆ ತೆರೆದಂತಾಗಿದೆ. ಎಂಇಎಸ್‌ ಅಧಿಪತ್ಯಕ್ಕೆ ಅಂತ್ಯ ಹಾಡಿದಂತಾಗಿದೆ. ಇಲ್ಲಿ, ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಿರುವುದು ಇದು 2ನೇ ಬಾರಿ. 2008ರ ಚುನಾವಣೆಯಲ್ಲಿ ಬಿಜೆಪಿಯ ಪ್ರಹ್ಲಾದ ರೇಮಾಣಿ (ಇವರು ಇತ್ತೀಚೆಗೆ ನಿಧನರಾಗಿದ್ದಾರೆ) ಗೆದಿದ್ದರು.

ಈವರೆಗೆ ಗೆದ್ದವರು

18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಇಲ್ಲಿ ಈವರೆಗೆ ನಡೆದಿರುವ ಚುನಾವಣೆಗಳಲ್ಲಿ ಐವರು ಮಹಿಳೆಯರು 8 ಬಾರಿ ಗೆದ್ದಿದ್ದರು. ಕಾಂಗ್ರೆಸ್‌ನಿಂದ ಚಂಪಾಬಾಯಿ ಬೋಗಲೆ 3, ಲೀಲಾದೇವಿ ಆರ್. ಪ್ರಸಾದ್‌ 2 ಬಾರಿ, ಕಾಂಗ್ರೆಸ್‌ನಿಂದ ಶಾರದಮ್ಮ ಪಟ್ಟಣ, ಜನತಾ ಪಕ್ಷದಿಂದ ಶಕುಂತಲಾ ತುಕಾರಾಂ ಚೌಗಲೆ, ಬಿಜೆಪಿಯಿಂದ ಶಶಿಕಲಾ ಜೊಲ್ಲೆ ತಲಾ ಒಂದೊಂದು ಬಾರಿ ಆಯ್ಕೆಯಾಗಿದ್ದರು.

ಕರ್ನಾಟಕ ಏಕೀಕರಣದ ಬಳಿಕ 1957ರಲ್ಲಿ ಜಿಲ್ಲೆಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹುಕ್ಕೇರಿಯಿಂದ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಚಂಪಾಬಾಯಿ ಬೋಗಲೆ ಜಿಲ್ಲೆಯ ಮೊದಲ ಶಾಸಕಿ ಎಂಬ ಖ್ಯಾತಿ ಗಳಿಸಿದ್ದರು. 1962ರಲ್ಲಿ ಸಂಕೇಶ್ವರ ಕ್ಷೇತ್ರದಲ್ಲಿ ಆರ್‌ಪಿಐನ ಬಿ. ಶಂಕರಾನಂದ ವಿರುದ್ಧ ಗೆದಿದ್ದರು. 1967ರಲ್ಲಿ ಕಾಗವಾಡ ಕ್ಷೇತ್ರದಲ್ಲಿ ಜಯಿಸಿದ್ದರು.

1967ರಲ್ಲಿ ರಾಮದುರ್ಗ ಕ್ಷೇತ್ರದಿಂದ ಕಾಂಗ್ರೆಸ್‌ನ ಶಾರದವ್ವ ಪಟ್ಟಣ ಗೆದ್ದಿದ್ದರು. 1985ರಲ್ಲಿ ಜನತಾ ಪಕ್ಷದಿಂದ ಚಿಕ್ಕೋಡಿ ಸ್ಪರ್ಧಿಸಿದ್ದ ಶಕುಂತಲಾ ಚೌಗಲೆ, ಕಾಂಗ್ರೆಸ್‌ನ ಎಲ್.ಬಿ. ಕರಾಳೆ ಅವರನ್ನು ಸೋಲಿಸಿದ್ದರು. 1978ರಲ್ಲಿ ಅಥಣಿಯಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದಿದ್ದ ಲೀಲಾದೇವಿ ಪ್ರಸಾದ ಸೋತಿದ್ದರು. 1985ರಲ್ಲಿ ಮತ್ತೆ ಸ್ಪರ್ಧಿಸಿ ಕಾಂಗ್ರೆಸ್‌ನ ಡಿ.ಬಿ. ಪವಾರ ದೇಸಾಯಿ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. 1994ರಲ್ಲಿ ಜನತಾದಳದಿಂದ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.