ADVERTISEMENT

2014ರಲ್ಲಿ ಶೇ.40ರಷ್ಟಿದ್ದ ಶೌಚಾಲಯಗಳು, ಇಂದು ಮಲ್ಲಮ್ಮನಂಥವರ ಪರಿಶ್ರಮದಿಂದ ಶೇ. 80 ರಷ್ಟಾಗಿವೆ! ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 8 ಮೇ 2018, 10:25 IST
Last Updated 8 ಮೇ 2018, 10:25 IST
2014ರಲ್ಲಿ ಶೇ.40ರಷ್ಟಿದ್ದ ಶೌಚಾಲಯಗಳು, ಇಂದು ಮಲ್ಲಮ್ಮನಂಥವರ ಪರಿಶ್ರಮದಿಂದ ಶೇ. 80 ರಷ್ಟಾಗಿವೆ! ಪ್ರಧಾನಿ ಮೋದಿ
2014ರಲ್ಲಿ ಶೇ.40ರಷ್ಟಿದ್ದ ಶೌಚಾಲಯಗಳು, ಇಂದು ಮಲ್ಲಮ್ಮನಂಥವರ ಪರಿಶ್ರಮದಿಂದ ಶೇ. 80 ರಷ್ಟಾಗಿವೆ! ಪ್ರಧಾನಿ ಮೋದಿ   

ಕೊಪ್ಪಳ: ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ ಶ್ರೀಮಂತರಿಗೆ ಬಡವರ ಕಷ್ಟ ಹೇಗೆ ಅರ್ಥವಾಗಬೇಕು? ಶೌಚಾಲಯಗಳಿಲ್ಲದೆ ಮಹಿಳೆಯರು ಅನುಭವಿಸುವ ಮುಜುಗರ–ಅವಮಾನದ ಬಗ್ಗೆ ಅವರಿಗೆ ಎಳ್ಳಷ್ಟೂ ಕಾಳಜಿಯಿಲ್ಲ ಎಂದು ಮೋದಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.

ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ. ಕೊಪ್ಪಳ ಜಿಲ್ಲೆಯ ಬಂಧುಗಳಿಗೆ ನಮಷ್ಕಾರ್‌ಗಳು. ಗವಿಸಿದ್ದೇಶ್ವರ್‌ ಸ್ವಾಮಿಗಳಿಗೆ, ಗವಿಮಠದ ಸಂತ ಪರಂಪರೆಗೆ ಭಕ್ತಿಪೂರ್ವಕ್ ಪ್ರಣಾಮಗಳು. ಈ ಭೂಮಿಯಲ್ಲಿ ಜನಿಸಿದ ಎಲ್ಲ ಮಹಾತ್ಮರಿಗೆ ನನ್ನ ನಮನಗಳು ಎಂದರು. 

ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. 

ADVERTISEMENT

ನಮ್ಮ ಕಾರ್ಯಕರ್ತರ ನಿರೀಕ್ಷೆ ಮೀರಿದ ಜನಸಾಗರ ಇಲ್ಲಿದೆ. ಬಿಸಿಲಿನ ತಾಪ ಅನುಭವಿಸುತ್ತಿದ್ದೀರಿ. ನಿಮ್ಮ ಪ್ರೀತಿ, ಆಶೀರ್ವಾದ, ತಪಸ್ಸನ್ನು ನಾನು ಗೌರವದಿಂದ ಪಡೆದುಕೊಳ್ತೀನಿ. ಅಭಿವೃದ್ಧಿಯ ಮೂಲಕ ನಿಮ್ಮ ಋಣ ತಿರಿಸ್ತೀನಿ ಎಂದು ಮೋದಿ ತಿಳಿಸಿದರು.

ನಮ್ಮ ದೇಶವು ರಾಮನನ್ನು ಆರಾಧಿಸುತ್ತದೆ. ಹಾಗೆಂದು ಶಬರಿಯನ್ನೂ ನೆನಪಿಸಿಕೊಳ್ಳುತ್ತೆ. ಶಬರಿ ಅಂದ್ರೆ ಭಕ್ತಿಯನ್ನು ಮಾತೆಯ ರೂಪದಲ್ಲಿ ತೋರಿಸಿದ ಸಾಧಕಿ. ನಾವು ಬಿಜೆಪಿ ಕಾರ್ಯಕರ್ತರು ರಾಷ್ಟ್ರಭಕ್ತಿ, ಜನರ ಪ್ರೀತಿ, ಬಡವರ ಸೇವೆಯನ್ನು ಶಬರಿ ರೂಪದಲ್ಲಿ ನಿರ್ವಹಿಸುತ್ತೇವೆ. ಶಬರಿಗೆ ರಾಮನ ಮೇಲೆ ಇದ್ದಷ್ಟೇ ಭಕ್ತಿ–ಪ್ರೀತಿ ನಿಮ್ಮ ಮೇಲೆ ನಮಗೆ ಇದೆ ಎಂದರು.

ನಮ್ಮದು ಒಂದೇ ಮಂತ್ರ ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’. ನಮಗೆ ಎದುರಾಗಿರುವ ಪಕ್ಷದವರು ಸರ್ಕಾರವನ್ನು ಕುಟುಂಬಕ್ಕಾಗಿ ನಡೆಸುತ್ತಾರೆ. ಕುಟುಂಬದ ಆಜ್ಞೆಗಳೇ ಅವರಿಗೆ ಸಂವಿಧಾನ ಎನಿಸಿಕೊಂಡಿದೆ. ಕಾಂಗ್ರೆಸ್‌ನವರದು ವಿಕೃತ ರಾಜಕಾರಣ. ಅಧಿಕಾರವನ್ನು ತಮ್ಮ ಕುಟುಂಬದ ಮುಷ್ಟಿಯಲ್ಲಿ ಇರಿಸಿಕೊಳ್ಳುವುದೇ ಅವರ ಉದ್ದೇಶ ಎಂದರು.

ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಐತಿಹಾಸಿಕ ಪರಂಪರೆ ಉಳಿಸುವ ಉದ್ದೇಶದಿಂದ ಹಂಪಿ ಉತ್ಸವ ಆರಂಭಿಸಿದ್ದರು. ವಿಜಯನಗರ ಸಾಮ್ರಾಜ್ಯ ನೆನಪಿಸಿಕೊಳ್ಳಲು ಯತ್ನಿಸಿದ್ದರು. ಈಗಿನ ಕಾಂಗ್ರೆಸ್ ಸರ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ನಿಲ್ಲಿಸಿದರು. ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಹೋಗುವ ಮಕ್ಕಳಿಗೂ ಜಾತಿ ಆಧರಿತ ಪಟ್ಟಿ ತಂದರು. ಇದು ಇವರ ಕೆಟ್ಟ ಆಡಳಿತಕ್ಕೆ ಉದಾಹರಣೆ ಎಂದರು.

ಕೊಪ್ಪಳ ಜೈನ ಕಾಶಿಯೂ ಹೌದು. ಸರ್ಕಾರ ಅದರ ಅಭಿವೃದ್ಧಿಗೆ ಏನೂ ಮಾಡಿಲ್ಲ. ಸಾಂಸ್ಕೃತಿಕ ವೈಭವ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ 5000 ಕೋಟಿ ಮೊತ್ತದ ಯೋಜನೆ ರೂಪಿಸಿದೆ. ವಿವಿಧ ಸರ್ಕೀಟ್‌ಗಳನ್ನು ರೂಪಿಸಿದೆ. ಇದರಲ್ಲಿ ರಾಮ ಸರ್ಕೀಟ್, ಬುದ್ಧ ಸರ್ಕೀಟ್, ಸ್ವಾತಂತ್ರ್ಯ ಹೋರಾಟಗಾರರ ಸರ್ಕೀಟ್ ಸೇರಿದಂತೆ ಹಲವು ಸರ್ಕೀಟ್‌ಗಳು ಇವೆ. ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಇದು ಒಳಗೊಂಡಿದೆ
ಕೊಪ್ಪಳ ಮತ್ತು ಸುತ್ತಮುತ್ತಲ ಪ್ರದೇಶ ‘ರಾಮಾಯಣ ಸರ್ಕೀಟ್‌ ಯಾತ್ರೆ’ಯಿಂದ ದೊಡ್ಡ ಲಾಭ ಆಗಲಿದೆ ಎಂದು ಮೋದಿ ತಿಳಿಸಿದರು.

ಅದರಲ್ಲಿ ಆನೆಗುಂದಿ, ಹಂಪಿ ಸೇರಿದೆ. ಇದು ಹನುಮಂತನ ಜನ್ಮಸ್ಥಳ, ಶ್ರೀರಾಮಚಂದ್ರ ಇಲ್ಲಿಗೆ ಬಂದಿದ್ದ ಎಂಬ ಪ್ರತೀತಿ ಇದೆ.ವಿಮಾನ ಮಾರ್ಗದ ಪ್ರವಾಸಕ್ಕೂ ನಾವು ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಹವಾಯ್ ಚಪ್ಪಲಿ ತೊಟ್ಟುಕೊಳ್ಳುವವರೂ ಈಗ ವಿಮಾನ ಏರಬಹುದು. ಅದಕ್ಕೆ ಅನುಕೂಲವಾಗುವ ವ್ಯವಸ್ಥೆ ಮಾಡಿದ್ದೇವೆ. ಬಿಜೆಪಿ ಪ್ರಣಾಳಿಕೆಯಲ್ಲಿಯೂ ಪ್ರವಾಸೋದ್ಯಮ ಅಭಿವೃದ್ಧಿಯ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಇದಕ್ಕಾಗಿ ನಾನು ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ ಎಂದು ಮೋದಿ ಹೇಳಿದರು.

ಎರಡು ವರ್ಷಗಳ ಕೆಳಗೆ ಕೊಪ್ಪಳ ಜಿಲ್ಲೆಯ ಮಲ್ಲಮ್ಮ ಅವರ ಹೆಸರನ್ನು ಮನ್‌ ಕಿ ಬಾತ್‌ನಲ್ಲಿ ಉಲ್ಲೇಖಿಸಿದ್ದ. ಮಲ್ಲಮ್ಮ ಶೌಚಾಲಯ ಕಟ್ಟಿಸಲು ಹಠ ಹಿಡಿದು ಹೋರಾಡಿದಳು. ಅವಳ ಸಾಧನೆ ಇಡೀ ದೇಶದ ಕಣ್ತರೆಸಿತು. ಮಲ್ಲಮ್ಮನಂಥ ಲಕ್ಷಾಂತರ ಹೆಣ್ಣುಮಕ್ಕಳು ಈ ದೇಶದಲ್ಲಿ ಶೌಚಾಲಯ ಅಭಿಯಾನ ಮುನ್ನಡೆಸುತ್ತಿದ್ದಾರೆ. ನಾನು ಮಲ್ಲಮ್ಮನಂಥ ಸಾಧಕಿಯರಿಗೆ ಜನ್ಮಕೊಟ್ಟ ಜಿಲ್ಲೆಗೆ ಸಹಸ್ರ ನಮನ ಸಲ್ಲಿಸುತ್ತೇನೆ ಎಂದರು.

ಶೌಚಾಲಯ ಅನ್ನೋದು ಹೆಣ್ಣುಮಗಳ ಗೌರವಕ್ಕೆ ಸಂಬಂಧಿಸಿದ್ದು. ಸೂರ್ಯ ಹುಟ್ಟುವ ಮೊದಲು ಬಯಲಿಗೆ ಹೋಗಿ ಬಂದರೆ ಇಡೀ ದಿನ ಕಷ್ಟ ಅನುಭವಿಸುತ್ತಾರೆ. ಸೂರ್ಯ ಮುಳುಗಿದ ಮೇಲೆ ಮತ್ತೆ ಬಯಲಿಗೆ ಹೋಗ್ತಾರೆ. ನಮ್ಮ ದೇಶದ ಮಹಿಳೆಯರಿಗೆ ಈ ನೋವಿನಿಂದ ಮುಕ್ತಿ ಸಿಗುವುದು ಬೇಡವೇ? ಈ ಪರಿಸ್ಥಿತಿ ತಪ್ಪಿಸಲು ನಾವು ಅಭಿಯಾನ ನಡೆಸಿದವು. ನಾನು ಕೆಂಪುಕೋಟೆಯಲ್ಲಿ ಶೌಚಾಲಯದ ಬಗ್ಗೆ ಸ್ವಚ್ಛ ಭಾರತದ ಬಗ್ಗೆ ಮಾತನಾಡಿದಾಗ ಹೆಸರು ಮಾಡಿದ ನಾಯಕರು ಕೆಲಸ ಮಾಡುವ ನನ್ನಂಥವನ ಬಗ್ಗೆ ಲೇವಡಿ ಮಾಡಿದರು. ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ ಶ್ರೀಮಂತರಿಗೆ ಬಡವರ ಕಷ್ಟ ಹೇಗೆ ಅರ್ಥವಾಗಬೇಕು? ಮಹಿಳೆಯರು ಅನುಭವಿಸುವ ಮುಜುಗರ– ಅವಮಾನದ ಬಗ್ಗೆ ಅವರಿಗೆ ಎಳ್ಳಷ್ಟೂ ಕಾಳಜಿಯಿಲ್ಲ. 2014ರಲ್ಲಿ ನಾನು ಪ್ರಧಾನಿಯಾದೆ. ಅಲ್ಲಿಯವರೆಗೆ ನಮ್ಮ ದೇಶದಲ್ಲಿ ಶೌಚಾಲಯಗಳು ಇದ್ದದು ಕೇವಲ ಶೇ.40 ಮಾತ್ರ. ಈಗ ಮಲ್ಲಮ್ಮನಂಥವರ ಪರಿಶ್ರಮದಿಂದ ಇಂದು ಶೇ80ರಷ್ಟು ಮನೆಗಳಿಗೆ ಶೌಚಾಲಯಗಳು ಇವೆ ಎಂದರು.

ನನ್ನ ಬಾಲ್ಯದಲ್ಲಿ ಅಮ್ಮ ಹೊಗೆಯಲ್ಲಿ ಕಷ್ಟಪಟ್ಟು ಅಡುಗೆ ಮಾಡೋದು ನೋಡ್ತಿದ್ದೆ. ನನ್ನಮ್ಮನಂಥ ಕೋಟ್ಯಂತರ ತಾಯಂದಿರು ಇದ್ದಾರೆ. ಅಡುಗೆ ಮಾಡುವಾಗ ಅವರಿಗೆ 400 ಸಿಗರೇಟ್ ಸೇದಿದಷ್ಟು ಹೊಗೆ ಸೇರ್ತಿತ್ತ? ಕಳೆದ 4 ವರ್ಷಗಳಲ್ಲಿ ದೇಶದ 4 ಕೋಟಿ ಮನೆಗಳಿಗೆ ಗ್ಯಾಸ್ ಸಂಪರ್ಕ ಕೊಟ್ಟಿದ್ದೇವೆ. ಈ ಮೂಲಕ ತಾಯಂದಿರ ಕಷ್ಟ ಕಡಿಮೆ ಮಾಡಲು ಯತ್ನಿಸಿದ್ದೇವೆ. ಸಮಾಜದಲ್ಲಿ ಗಂಡು–ಹೆಣ್ಣಿನ ಸಂಖ್ಯೆಯಲ್ಲಿ ಅಸಮಾನತೆ ಇದೆ. ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಇದನ್ನು ಸರಿಪಡಿಸಲು ನಾವು ಹೆಣ್ಣುಮಕ್ಕಳನ್ನು ಉಳಿಸಲು ಅಭಿಯಾನ ಆರಂಭಿಸಿದ್ದೇವೆ. ಹೆಣ್ಣುಮಕ್ಕಳು ಹೊರೆ ಅಲ್ಲ ಅಂತ ಅಭಿಯಾನ ಮಾಡಿದೆವು. ಇದರ ಫಲ ಎಂಬಂತೆ ಈಗ ಸಾವಿರ ಗಂಡುಮಕ್ಕಳಿಗೆ ಸಾವಿರ ಹೆಣ್ಣುಮಕ್ಕಳು ಹುಟ್ಟುತ್ತಿದ್ದಾರೆ. ಸ್ತ್ರೀಭ್ರೂಣ ಹತ್ಯೆಗೆ ಕಡಿವಾಣ ಹಾಕಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.