ADVERTISEMENT

ನರೇಂದ್ರ ಮೋದಿ ಪ್ರತಿಬಿಂಬ ರಾಜ್ಯದಲ್ಲೂ ಮೂಡಲಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:14 IST
Last Updated 8 ಫೆಬ್ರುವರಿ 2018, 9:14 IST
ಮದ್ದೂರು ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ಮಾತನಾಡಿದರು
ಮದ್ದೂರು ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ಮಾತನಾಡಿದರು   

ಮಂಡ್ಯ: ‘ಪಾರದರ್ಶಕ, ನಿಷ್ಕಳಂಕ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಬಿಂಬ ರಾಜ್ಯದಲ್ಲೂ ಮೂಡಬೇಕು. ಇದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು’ ಎಂದು ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ಹೇಳಿದರು.

ಮದ್ದೂರಲ್ಲಿ ಶುಕ್ರವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡು ಅವರು ಮಾತನಾಡಿದರು. ‘2014ರಲ್ಲಿ ಇಡೀ ದೇಶ ಒಂದು ದೊಡ್ಡ ಪರಿವರ್ತನೆಯತ್ತ ಹೆಜ್ಜೆ ಹಾಕಿತು. ಆ ಬದಲಾವಣೆಗೆ ನರೇಂದ್ರ ಮೋದಿ ಕಾರಣೀಭೂತರಾದರು. ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಕಾಂಗ್ರೆಸ್‌ ಸರ್ಕಾರದ ಹಗರಣ, ಭ್ರಷ್ಟಾಚಾರದಿಂದ ಮುಕ್ತಿಗಾಗಿ ಜನರೇ ನರೇಂದ್ರ ಮೋದಿ ಅವರನ್ನು ಸೃಷ್ಟಿಸಿದರು. ಮೂರು ವರ್ಷಗಳಿಂದ ದೇಶ ಆರ್ಥಿಕ ಅಪರಾಧಗಳಿಂದ ಮುಕ್ತವಾಗಿದೆ. ವಿಶ್ವ ಸಮುದಾಯದಲ್ಲಿ ಪ್ರಧಾನಮಂತ್ರಿಗೆ ಸಿಕ್ಕಿರುವ ಅಗ್ರಮಾನ್ಯತೆಗೆ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡಬೇಕು’ ಎಂದು ಹೇಳಿದರು.

‘19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪಕ್ಷದ ಅಧ್ಯಕ್ಷ ಅಮಿತ್‌ ಷಾ ಹಾಗೂ ಪ್ರಧಾನಮಂತ್ರಿ ಎಲ್ಲ ರಾಜ್ಯಗಳಲ್ಲೂ ಬಹಳ ಸೂಕ್ಷ್ಮವಾಗಿ ಕೆಲಸ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರ ಕೆಲಸಗಳ ಪ್ರತಿಬಿಂಬ ರಾಜ್ಯಕ್ಕೂ ಬರಬೇಕಾದರೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು. ಈಗಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯವೂ ಆಗಿದೆ’ ಎಂದು ಹೇಳಿದರು.

ADVERTISEMENT

ಮುಖ್ಯಮಂತ್ರಿ ವಿರುದ್ಧ ಕೃಷ್ಣ ವ್ಯಂಗ್ಯ: ಕಾರ್ಯಕ್ರಮಕ್ಕೂ ಮೊದಲು ಎಸ್‌.ಎಂ.ಕೃಷ್ಣ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರು ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸೋಮನಹಳ್ಳಿ ಬಳಿಯ ಕಾಫಿ ಡೇಯಲ್ಲಿ ತಿಂಡಿ ಕುಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಸ್‌.ಎಂ.ಕೃಷ್ಣ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ಹುಡುಕಬೇಕಾಗಿದೆ. ಎಲ್ಲಿದೆ ಆಡಳಿತ? ರಾಜ್ಯ ಸರ್ಕಾರ ಏನು ಸಾಧನೆ ಮಾಡಿದೆ ಎಂಬ ಪ್ರಶ್ನೆಗೆ ಮೂರು ತಿಂಗಳಲ್ಲಿ ಜನರು ಉತ್ತರ ಕೊಡುತ್ತಾರೆ’ ಎಂದು ಹೇಳಿದರು.

ಪುತ್ರಿ ಶಾಂಭವಿ ಸ್ಪರ್ಧಿಸುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕೃಷ್ಣ ‘ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸುತ್ತೇನೆ. ನಾನು ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸಲು ಇದೂ ಒಂದು ಕಾರಣ’ ಎಂದು ಹೇಳಿದರು.

ಅನುಯಾಯಿ, ಅಭಿಮಾನಿಗಳು ಬಿಜೆಪಿಗೆ ಬರಲಿ

‘ರಾಜ್ಯದಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಪಡಿಸಲು ನನ್ನ ಅನುಯಾಯಿ, ಅಭಿಮಾನಿಗಳು ಬಿಜೆಪಿಗೆ ಬರಬೇಕು’ ಎಂದು ಎಸ್‌.ಎಂ.ಕೃಷ್ಣ ಕರೆ ನೀಡಿದರು.

‘ದೇಶಕ್ಕೆ ಉತ್ತಮ ಆಡಳಿತ ನೀಡುತ್ತಿರುವ ನರೇಂದ್ರ ಮೋದಿ ಕೈ ಬಲಪಡಿಸಬೇಕು. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬೇಕು. ಈ ನಿಟ್ಟಿನಲ್ಲಿ ನನ್ನ ಬೆಂಬಲಿಗರು ಕೆಲಸ ಮಾಡಬೇಕು’ ಎಂದು ಹೇಳಿದರು.

ಬೆಳ್ಳಿ ಚೆಂಬು ವಿತರಣೆ

ಮಂಡ್ಯ: ನಗರದಲ್ಲಿ ಶುಕ್ರವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಕಾರ್ಯಕ್ರಮ ಆಯೋಜಕರು ಬೆಳ್ಳಿ ಚೆಂಬು ವಿತರಣೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ.

ಸಮಾವೇಶಕ್ಕೆ ಜನರನ್ನು ಆಕರ್ಷಿಸಲು ತಾಲ್ಲೂಕಿನ ಹಳ್ಳಿಗಳಿಂದ ಬಂದಿದ್ದ ಪುರಷರಿಗೆ ಹಣ, ಮಹಿಳೆಯರಿಗೆ ಬೆಳ್ಳಿ ಚೆಂಬು ವಿತರಣೆ ಮಾಡಲಾಗಿದೆ. ಚೆಂಬು ಸಿಗದ ಕಾರಣ ಕೆಲವು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ವಾಗ್ವಾದವೂ ನಡೆಯಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.