ADVERTISEMENT

‘ಹಸಿರು ಶಾಲು ಹೊದ್ದು ಸಿ.ಎಂ ಆಗುವೆ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 8:54 IST
Last Updated 8 ಫೆಬ್ರುವರಿ 2018, 8:54 IST

ಹರಪನಹಳ್ಳಿ: ‘ಹಸಿರು ಶಾಲು ಹೊದ್ದು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ದೃಢ ಮಾತುಗಳಲ್ಲಿ ಹೇಳಿದರು.

ಶುಕ್ರವಾರ ಇಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ‘ಹಸಿರು ಶಾಲು ಹಾಕಿಕೊಳ್ಳುವ ನೈತಿಕತೆ ನನಗೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ನಾನು ಮುಖ್ಯಮಂತ್ರಿ ಆಗಿ, ಅಧಿಕಾರ ಸ್ವೀಕಾರ ಮಾಡಿದ್ದೇ ಹಸಿರು ಶಾಲು ಧರಿಸಿ. ಈಗ ಅದೇ ಶಾಲು ಧರಿಸಿ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರೈತರಿಗೆ ಉಚಿತ ವಿದ್ಯುತ್‌, ಸಹಕಾರ ಸಂಸ್ಥೆಗಳಲ್ಲಿ ರೈತರಿಗೆ ಬಡ್ಡಿ ರಹಿತ ಸಾಲ ನೀಡಿದ್ದು ನಮ್ಮ ಸಾಧನೆ. ಕೃಷಿಗೆ ಪ್ರತ್ಯೇಕ ಬಜೆಟ್‌ ಮಂಡಿಸಿ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ’ ಎಂದರು.

ADVERTISEMENT

ನವೆಂಬರ್‌ 2ರಂದು ಆರಂಭವಾದ ಯಾತ್ರೆ, ಫೆಬ್ರುವರಿ 2ರವರೆಗೆ 224 ಕ್ಷೇತ್ರಗಳಲ್ಲಿ ಸಂಚರಿಸಿದೆ. 11 ಸಾವಿರ ಕಿ.ಮೀ ಪ್ರಯಾಣ ಮಾಡಿ, 1.80 ಕೋಟಿ ಜನರ ಎದುರು ಭಾಷಣ ಮಾಡಲಾಗಿದೆ. ರಾಜ್ಯದಲ್ಲಿ ಇದೊಂದು ದಾಖಲೆ ಎಂದು ಹೇಳಿದರು.

‘ಕಾಂಗ್ರೆಸ್ ರ‍್ಯಾಲಿಯಲ್ಲಿ ಸ್ತ್ರೀಶಕ್ತಿ ಸ್ವಸಾಯ ಸಂಘಗಳ ಸದಸ್ಯರನ್ನು ತಂದು ಬಲವಂತದಿಂದ ಕೂರಿಸಲಾಗುತ್ತಿತ್ತು. ನಮ್ಮ ಯಾತ್ರೆಯ ಪ್ರತಿ ಕಾರ್ಯಕ್ರಮದಲ್ಲಿ 10–20 ಸಾವಿರ ಜನ ಭಾಗವಹಿಸಿದರು. ಕರ್ನಾಟಕ ಕಾಂಗ್ರೆಸ್‌ ಮುಕ್ತವಾಗಲಿದೆ. ಹರಪನಹಳ್ಳಿಯೂ ಕಾಂಗ್ರೆಸ್‌ ಮುಕ್ತವಾಗಲಿ’ ಎಂದರು.

ಬಿಜೆಪಿ ಅಧಿಕಾರದಲ್ಲಿದ್ದಾಗ 17 ಲಕ್ಷ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್‌ ನೀಡಲಾಗಿತ್ತು. ಪ್ರತಿ ವರ್ಷ 3 ಲಕ್ಷ ಬಾಂಡ್‌ ವಿತರಿಸಲಾಗುತ್ತಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ವರ್ಷಕ್ಕೆ 1 ಲಕ್ಷ ಹೆಣ್ಣುಮಕ್ಕಳಿಗೂ ಬಾಂಡ್‌ ವಿತರಣೆ ಆಗುತ್ತಿಲ್ಲ. ಇದೊಂದು ಬೇಜವಾಬ್ದಾರಿ ಸರ್ಕಾರ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.