ADVERTISEMENT

ಆರೋಗ್ಯ ಸೇವೆಗೆ ಆದ್ಯತೆ: ಡಿಕೆಶಿ

ಹೊಸದುರ್ಗ ಗ್ರಾಮದಲ್ಲಿ 24X7ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 11:42 IST
Last Updated 7 ಫೆಬ್ರುವರಿ 2018, 11:42 IST

(ಕೋಡಿಹಳ್ಳಿ) ಕನಕಪುರ: ಗ್ರಾಮೀಣ ಭಾಗದ ಬಡಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಸೋಮವಾರ ತಿಳಿಸಿದರು.

ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹೊಸದುರ್ಗ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ್ದ 24X7 ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ, ಗ್ರಾಮ ಪಂಚಾಯಿತಿಯಿಂದ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿಗೆ ಅಡಿಗೆ ಮಾಡುವ ಪರಿಕರಗಳ ಕಿಟ್‌ ಮತ್ತು ಸಂಧ್ಯಾ ಸುರಕ್ಷಾ ಮಂಜೂರಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.‌

ಆರೋಗ್ಯ ಸೇವೆ ಎಂಬುದು ಪ್ರತಿಯೊಬ್ಬರಿಗೂ ಸಿಗಬೇಕಾದ ಅಗತ್ಯ ಸೇವೆಯಾಗಿದೆ. ಸರ್ಕಾರ ಇದಕ್ಕೆ ಹೆಚ್ಚಿನ ಒತ್ತು ನೀಡಿದ್ದು,  ಗ್ರಾಮದ ದಾನಿಗಳಾದ ಮಾರೇಗೌಡ ಅವರು ಗ್ರಾಮದ ಜನರಿಗೆ ಅನುಕೂಲವಾಗಲೆಂದು ಎರಡು ಎಕರೆ ಭೂಮಿ ದಾನ ಮಾಡಿದ್ದಾರೆ ಎಂದರು.

ADVERTISEMENT

ವಿತರಣೆ: ಗ್ರಾಮ ಪಂಚಾಯಿತಿಯಲ್ಲಿ ಖರ್ಚಾಗುವ ಅನುದಾನದಲ್ಲಿ ಪರಿಶಿಷ್ಟ ಜಾತಿ, ಪಂಗಡದ ‌ಅಭಿವೃದ್ಧಿ ಪಾಲಿನ ಹಣ ಒಟ್ಟುಗೂಡಿಸಿ ಅಡುಗೆ ಮಾಡುವ ಪರಿಕರಗಳ ಕಿಟ್‌ ನೀಡಲಾಗುತ್ತಿದೆ. ಪಂಚಾಯಿತಿಯಲ್ಲಿ ಒಟ್ಟು 450 ಕುಟುಂಬಗಳನ್ನು ಗುರುತಿಸಿದ್ದು ₹3,000 ಬೆಲೆಯ ಕಿಟ್‌ಗಳನ್ನು ಕೊಡಲಾಗುತ್ತಿದೆ ‌ಎಂದರು.

ನರೇಗಾ ಯೋಜನೆ ಬಳಸಿಕೊಂಡು ತೋಟಗಾರಿಕೆ ಇಲಾಖೆ ಮಾರ್ಗದರ್ಶನದಲ್ಲಿ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗಲಿರುವ ಸುಂದರ ಉದ್ಯಾನ ಕಾಮಗಾರಿಗೆ ಚಾಲನೆ ನೀಡಲಾಯಿತು.

ಹಂಚಿಕೆ: ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ರೀತಿಯ ಸರ್ಕಾರಿ ಮಾಸಾಶನದ ಮಂಜೂರಾತಿ ಆದೇಶ ಪತ್ರವನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಯಿತು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಬೆಂಗಳೂರು ಪಾಲಿಕೆ ಸದಸ್ಯೆ ಪದ್ಮಾವತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಬಸಪ್ಪ, ಶಿವಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ.ವಿಜಯದೇವು, ಎಂ.ಎಸ್‌.ಐ.ಎಲ್‌. ನಿರ್ದೇಶಕ ಚಲುವರಾಜು, ಮುಖಂಡರಾದ ಕೆ.ಎಂ. ರಾಜೇಂದ್ರ, ಮುನಿಹುಚ್ಚೇಗೌಡ, ವಿಶ್ವನಾಥ್‌, ಚಲುವರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ಉಪಾಧ್ಯಕ್ಷೆ ರಾಣಿ, ತಹಶೀಲ್ದಾರ್‌ ಆರ್‌.ಯೋಗಾನಂದ, ತಾಲ್ಲೂಕು ಪಂಚಾಯಿತಿ ಇ.ಒ. ಶಿವರಾಮ್‌, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ.ಕುಮಾರ್‌, ಹೊಸದುರ್ಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗೇಂದ್ರಕುಮಾರ್‌, ಪಂಚಾಯಿತಿ ಪಿ.ಡಿ.ಒ. ಎನ್‌.ಎಸ್‌.ರಘು, ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.