ADVERTISEMENT

‘ಮೈತ್ರಿ’ ಬಂಡಾಯ ಬಿಜೆಪಿಗೆ ವರ: ಬಿಜೆಪಿ ಶಾಸಕ ಆರ್‌.ಅಶೋಕ್‌ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 17:08 IST
Last Updated 3 ಮೇ 2019, 17:08 IST
ಆರ್‌.ಅಶೋಕ್‌
ಆರ್‌.ಅಶೋಕ್‌   

ಚಿತ್ರದುರ್ಗ: ಕಾಂಗ್ರೆಸ್‌–ಜೆಡಿಎಸ್‌ ಮಿತ್ರ ಪಕ್ಷಗಳಲ್ಲಿ ತಾರಕಕ್ಕೆ ಏರಿರುವ ಬಂಡಾಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಆರ್‌.ಅಶೋಕ್ ವಿಶ್ಲೇಷಣೆ ಮಾಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂಡ್ಯ, ತುಮಕೂರು ಹಾಗೂ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್‌ ಬಾವುಟ ಹಿಡಿದ ‘ಕೈ’ ಕಾರ್ಯಕರ್ತರು ಜೆಡಿಎಸ್ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ನಾಯಕರು ಹೊಂದಾಣಿಕೆ ಮಾಡಿಕೊಂಡರೂ ಕಾರ್ಯಕರ್ತರಿಗೆ ಒಪ್ಪಿಗೆ ಇಲ್ಲ. ಈ ಗೊಂದಲ ಬಿಜೆಪಿಗೆ ಉತ್ತಮ ಭೂಮಿಕೆ ಸೃಷ್ಟಿಸಿದೆ’ ಎಂದು ವಿವರಿಸಿದರು.

‘ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ನೆಪಮಾತ್ರಕ್ಕೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿತ್ತು. ಈ ಬಾರಿ ವಾತಾವರಣ ಸಂಪೂರ್ಣ ಬದಲಾಗಿದೆ. ಪ್ರತಿ ಕ್ಷೇತ್ರದಲ್ಲಿ ಬಿಜೆಪಿ ತೀವ್ರ ಪೈಪೋಟಿ ಒಡ್ಡುತ್ತಿದೆ. ಮೈಸೂರು ಭಾಗದಲ್ಲಿ ಬಿಜೆಪಿಯ ಹಲವು ಅಭ್ಯರ್ಥಿಗಳು ವಿಜೇತರಾಗುವ ಸಾಧ್ಯತೆ ದಟ್ಟವಾಗಿದೆ. ರಾಜ್ಯದಲ್ಲಿ 22ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವಿಜೇತರಾಗಲಿದ್ದೇವೆ’ ಎಂದು ಹೇಳಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಜನರಲ್ಲಿ ಉತ್ತಮ ಭಾವನೆ ಇದೆ. ಐದು ವರ್ಷ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ ಎಂಬ ಅಭಿಮಾನವಿದೆ. ರಾಜ್ಯದ ಏಳು ಸ್ಥಳಗಳಲ್ಲಿ ಮೋದಿ ಅವರು ರ‍್ಯಾಲಿ ನಡೆಸಲಿದ್ದಾರೆ. ಏ.8ರಂದು ಚಿತ್ರದುರ್ಗ ಹಾಗೂ ಮೈಸೂರಿನಲ್ಲಿ ನಡೆಯುವ ಬೃಹತ್‌ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಏ.10, 12 ಅಥವಾ 13ರಂದು ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಮೋದಿ ಅವರಿಗೆ ಸರಿಸಾಟಿಯಾಗಬಲ್ಲ ನಾಯಕ ಪ್ರತಿಪಕ್ಷಗಳಲ್ಲಿ ಇಲ್ಲ. ರಾಹುಲ್‌ ಗಾಂಧಿ ಅವರನ್ನು ಮಮತಾ ಬ್ಯಾನರ್ಜಿ ಅವರೇ ಒಪ್ಪುತ್ತಿಲ್ಲ. ಮಾರ್ಚ್‌ 31ರಂದು ಸಂಜೆ 5ಕ್ಕೆ ‘ನಾನೂ ಚೌಕೀದಾರ್‌’ ವಿಡಿಯೊ ಸಂವಾದವನ್ನು ಮೋದಿ ನಡೆಸಲಿದ್ದಾರೆ. ರಾಜ್ಯದ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಂವಾದದಲ್ಲಿ ಪಾಲ್ಗೊಳ್ಳಿದ್ದಾರೆ’ ಎಂದು ಹೇಳಿದರು.

3ಜಿ, 4ಜಿ ರಾಜಕಾರಣ:ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ವಂಶಾಡಳಿತ ರಾಜಕಾರಣವನ್ನು ಆರ್‌.ಅಶೋಕ್‌, ‘3ಜಿ ಹಾಗೂ 4ಜಿ’ಗೆ ಹೋಲಿಸಿ ವಿಶ್ಲೇಷಣೆ ಮಾಡಿದರು.

‘ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ನಿಖಿಲ್‌ ಹಾಗೂ ಪ್ರಜ್ವಲ್‌ ಇರುವ ಜೆಡಿಎಸ್‌, 3ಜಿ ಪಕ್ಷ. ನೆಹರೂ, ಇಂದಿರಾಗಾಂಧಿ, ರಾಜೀವಗಾಂಧಿ ಹಾಗೂ ರಾಹುಲ್‌ ಗಾಂಧಿವರೆಗೂ ಮುಂದುವರಿಯುತ್ತಿರುವ ಕಾಂಗ್ರೆಸ್‌, 4ಜಿ ಪಕ್ಷ. ಪೀಳಿಗೆಯನ್ನೇ ದತ್ತು ಪಡೆಯುತ್ತಿರುವ ರಾಜಕೀಯ ಪಕ್ಷಗಳನ್ನು ಕೊನೆಗಾಣಿಸುವ ಅಗತ್ಯವಿದೆ’ ಎಂದು ಹೇಳಿದರು.

ಸುಮಲತಾಗೆ ಕಿರುಕುಳ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಸುಮಲತಾ ಅಂಬರೀಷ್‌ ಅವರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನೋಟಿಸ್‌ ಕೊಡಿಸುತ್ತಿದ್ದಾರೆ ಎಂದು ಆರೋಪಿಸಿದರು.

‘ಮಂಡ್ಯ ಲೋಕಸಭಾ ವ್ಯಾಪ್ತಿಯ ಎಲ್ಲ ಎಂಟು ಜೆಡಿಎಸ್‌ ಶಾಸಕರು, ಮುಖ್ಯಮಂತ್ರಿ, ಮಾಜಿ ಪ್ರಧಾನಿಯನ್ನು ಸುಮಲತಾ ಸಮರ್ಥವಾಗಿ ಎದುರಿಸುತ್ತಿದ್ದಾರೆ. ಭೀತಿಗೆ ಒಳಗಾದ ಜೆಡಿಎಸ್, ಸುಮಲತಾ ಹೆಸರಿನ ನಾಲ್ಕೈದು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ’ ಎಂದರು.

ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್‌.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌, ವಿಭಾಗೀಯ ಸಹಪ್ರಭಾರಿ ಜಿ.ಎಂ.ಸುರೇಶ್‌, ಶಿವಯೋಗಿಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.