ADVERTISEMENT

ಬರ ಪರಿಸ್ಥಿತಿ ವೇಳೆ ಸಿ.ಎಂ ರೆಸಾರ್ಟ್‌ ವಾಸ್ತವ್ಯಕ್ಕೆ ವಿರೋಧ ‍ಪಕ್ಷದಿಂದ ಟೀಕೆ

ಸಿದ್ದರಾಮಯ್ಯ ತಂಗಿದ್ದ ರೆಸಾರ್ಟ್‌ಗೆ ಸಿಎಂ?

​ಪ್ರಜಾವಾಣಿ ವಾರ್ತೆ
Published 9 ಮೇ 2019, 11:41 IST
Last Updated 9 ಮೇ 2019, 11:41 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ    

ಮಡಿಕೇರಿ: ‘ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿ’ ಎಂಬ ಕಾಂಗ್ರೆಸ್‌ ಶಾಸಕರ ಹೇಳಿಕೆಯಿಂದ ಬೇಸರಗೊಂಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜಕೀಯ ಚಟುವಟಿಕೆಯಿಂದ ದೂರ ಉಳಿದು ಮಡಿಕೇರಿಯ ಇಬ್ಬನಿ ರೆಸಾರ್ಟ್‌ನಲ್ಲಿ ಎರಡು ದಿನ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಶನಿವಾರ ರಾತ್ರಿ ರೆಸಾರ್ಟ್‌ಗೆ ಮುಖ್ಯಮಂತ್ರಿ ಬರುವ ಸಾಧ್ಯತೆಯಿದ್ದು ಸೋಮವಾರ ಮಧ್ಯಾಹ್ನ ವಾಪಸ್‌ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ರೆಸಾರ್ಟ್‌ಗೆ ಭಾನುವಾರ ಬಂದಿದ್ದ ‘ಮೈತ್ರಿ’ ಸರ್ಕಾರದ ಸಮನ್ವ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎರಡು ದಿನ ವಿಶ್ರಾಂತಿಗೆ ಮೊರೆ ಹೋಗಿದ್ದರು. ಕುಮಾರಸ್ವಾಮಿಯೂ ಅದೇ ರೆಸಾರ್ಟ್‌ಗೆ ಬರುತ್ತಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ರಾಜಕೀಯ ಚಟುವಟಿಕೆ, ಅಧಿಕಾರಿಗಳ ಸಭೆ, ಉಪ ಚುನಾವಣೆ ಪ್ರಚಾರದಿಂದಲೂ ಮುಖ್ಯಮಂತ್ರಿ ದೂರ ಉಳಿದು ವಿಶ್ರಾಂತಿ ಪಡೆಯಲಿದ್ದಾರೆ. ಸಿಎಂ ಅವರೊಂದಿಗೆ ಕೆಲವು ಸಚಿವರೂ ಬರುವ ಸಾಧ್ಯತೆಯಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರ ಪರಿಸ್ಥಿತಿಯಿದ್ದು, ಅಲ್ಲಿನ ಸಮಸ್ಯೆ ಆಲಿಸುವುದನ್ನು ಬಿಟ್ಟು ರೆಸಾರ್ಟ್‌ ವಾಸ್ತವ್ಯ ಮಾಡುತ್ತಿರುವುದಕ್ಕೆ ವಿರೋಧ ಪಕ್ಷದಿಂದ ಟೀಕೆ ವ್ಯಕ್ತವಾಗಿದೆ.

ಇತ್ತೀಚೆಗಷ್ಟೇ ಉಡುಪಿ ಜಿಲ್ಲೆಯ ಮೂಳೂರಿನಲ್ಲಿರುವ ಸಾಯಿರಾಧಾ ರೆಸಾರ್ಟ್‌ನಲ್ಲಿ ಕುಮಾರಸ್ವಾಮಿ ಪ್ರಕೃತಿ ಚಿಕಿತ್ಸೆ ಪಡೆದುಕೊಂಡು ಬೆಂಗಳೂರಿಗೆ ವಾಪಸ್‌ ಆಗಿದ್ದರು. ಈಗ ಮತ್ತೆ ರೆಸಾರ್ಟ್‌ ವಾಸ್ತವ್ಯಕ್ಕೆ ಚಿಂತನೆ ನಡೆಸಿದ್ದಾರೆ.

‘ಮುಖ್ಯಮಂತ್ರಿ ಬರುವ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸಿದ್ಧತೆ ನಡೆಯುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಸ್ಥಳೀಯ ಕಾಂಗ್ರೆಸ್‌ ಮುಖಂಡರನ್ನು ಇಬ್ಬನಿ ರೆಸಾರ್ಟ್‌ಗೆ ಕರೆಸಿಕೊಳ್ಳದೇ ಬರೀ ಅವರ ಆತ್ಮೀಯರನ್ನಷ್ಟೇ ಭೇಟಿ ಮಾಡಿದ್ದರು. ಅಂದು ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಫಲಿತಾಂಶದ ಬಗ್ಗೆಯೂ ಚರ್ಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.