ADVERTISEMENT

ವಿಧಾನಸಭೆ ಗುರಿ, ಲೋಕಸಭೆಗೆ ಪ್ರಚಾರ

ಅಭ್ಯರ್ಥಿಗಳು ಕಣದಲ್ಲಿ ಇಲ್ಲದಿದ್ದರೂ ಭಾರಿ ಪ್ರಚಾರ ನಡೆಸುತ್ತಿರುವ ಎಂಎನ್‌ಎಸ್‌ನ ರಾಜ್‌ ಠಾಕ್ರೆ

ಮೃತ್ಯುಂಜಯ ಬೋಸ್
Published 24 ಏಪ್ರಿಲ್ 2019, 20:30 IST
Last Updated 24 ಏಪ್ರಿಲ್ 2019, 20:30 IST
ರಾಜ್‌ ಠಾಕ್ರೆ
ರಾಜ್‌ ಠಾಕ್ರೆ   

ಮುಂಬೈ: ಮಹಾರಾಷ್ಟ್ರ ನವ ನಿರ್ಮಾಣ ಸೇನಾ (ಎಂಎನ್‌ಎಸ್‌) ಸ್ಥಾಪಕ ರಾಜ್‌ ಠಾಕ್ರೆ ಒಂದು ಕಾಲದದಲ್ಲಿ ನರೇಂದ್ರ ಮೋದಿ ಅವರ ಗುಜರಾತ್‌ ಮಾದರಿಯ ಆರಾಧಕರಾಗಿದ್ದರು. ಎಂಟೇ ವರ್ಷಗಳಲ್ಲಿ ಗುಜರಾತ್‌ ಮಾದರಿಯ ಕಟು ಟೀಕಾಕಾರರಾಗಿ ಅವರು ಬದಲಾಗಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಂಎನ್‌ಎಸ್ ಎಲ್ಲಿಯೂ ಸ್ಪರ್ಧಿಸಿಲ್ಲ. ಆದರೆ, ಚುನಾವಣಾ ಪ್ರಚಾರದ ಕೇಂದ್ರ ಬಿಂದುವಾಗಿ ರಾಜ್‌ ಹೊರಹೊಮ್ಮಿದ್ದಾರೆ.‌

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬುದು ಎಂಎನ್‌ಎಸ್‌ ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡ ನಿರ್ಧಾರ. ಶಿವಸೇನಾ ಸ್ಥಾಪಕ ಬಾಳಾಠಾಕ್ರೆ ಅವರ ಸೋದರಳಿಯ ರಾಜ್‌ ಅವರು ಒಂದೇ ಸಂದೇಶ ಹಿಡಿದು ಮಹಾರಾಷ್ಟ್ರ ಸುತ್ತಾಡುತ್ತಿದ್ದಾರೆ. ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಅಧಿಕಾರದಿಂದ ಇಳಿಸಿ ಎಂಬುದೇ ಈ ಸಂದೇಶ.

ಮೋದಿ–ಶಾ ವಿರುದ್ಧ ರಾಜ್‌ ಠಾಕ್ರೆಯ ಕಟು ಟೀಕೆಗಳಿಗೆ ಶಿವಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರು ಈವರೆಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟದ ಪರವಾಗಿ ರಾಜ್‌ ಅವರು ಕೆಲಸ ಮಾಡುತ್ತಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರಿಂದ ಆದೇಶಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಫಡಣವೀಸ್‌ ಹೇಳಿದ್ದಾರೆ.

ADVERTISEMENT

ರಾಜ್‌ ಅವರು ಬಹಳ ಪರಿಣಾಮಕಾರಿ ಮಾತುಗಾರ. ವಿಡಿಯೊ ಪ್ರದರ್ಶನದ ಮೂಲಕ ಅವರು ಮೋದಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ‘ಮೋದಿ ಅವರದ್ದು ಹಿಟ್ಲರ್‌ ಶೈಲಿಯ ಸರ್ವಾಧಿಕಾರ’ ಎಂದು ರಾಜ್‌ ಆರೋಪಿಸುತ್ತಿದ್ದಾರೆ. ಬಿಹಾರ ಮತ್ತು ಮಹಾರಾಷ್ಟ್ರದ ಹರಿಸಾಲ್‌ ಡಿಜಿಟಲ್‌ ಗ್ರಾಮದಲ್ಲಿ ಒಂದೇ ವಾರದಲ್ಲಿ 8.5 ಲಕ್ಷ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂಬ ಹೇಳಿಕೆಗಳನ್ನು ವಿಡಿಯೊ ಪ್ರದರ್ಶಿಸಿ ರಾಜ್‌ ಅವರು ಲೇವಡಿ ಮಾಡುತ್ತಿದ್ದಾರೆ.

ಹತ್ತಕ್ಕೂ ಹೆಚ್ಚು ರ‍್ಯಾಲಿಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಈಗಾಗಲೇ ಹಲವು ರ್‍ಯಾಲಿಗಳಲ್ಲಿ ಮಾತನಾಡಿದ್ದಾರೆ. ಪ್ರತಿ ಸಮಾವೇಶದಲ್ಲಿಯೂ ಏನೋ ಒಂದು ಅಚ್ಚರಿಯ ಅಂಶವನ್ನು ಸೇರಿಸುವ ಮೂಲಕ ರಾಜ್‌ ಅವರು ಜನರನ್ನು ಆಕರ್ಷಿಸುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ರಫೇಲ್‌ ಖರೀದಿ ಒಪ್ಪಂದದಲ್ಲಿ ಅಕ್ರಮವಾಗಿದೆ ಎಂದೂ ಹೇಳುತ್ತಿದ್ದಾರೆ.

ರಾಜ್‌ ಅವರಿಗೆ ಎರಡು ಉದ್ದೇಶ ಇದ್ದಂತಿದೆ. ಮೊದಲನೆಯದಾಗಿ, ಅವರು ಮೋದಿ–ಶಾ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಎರಡನೆಯದಾಗಿ, ಅವರು ಮುಂದಿನ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷವನ್ನು ಸಜ್ಜು ಮಾಡುತ್ತಿದ್ದಾರೆ. ಸಮಾವೇಶಗಳಲ್ಲಿ ಭಾಗವಹಿಸುತ್ತಿದ್ದರೂ ಅವರು ಯಾವುದೇ ಪಕ್ಷ ಅಥವಾ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡುತ್ತಿಲ್ಲ ಎಂದು ರಾಜಕೀಯ ವಿಶ್ಲೇಷಕ ಪ್ರಕಾಶ್‌ ಅಕೋಲ್ಕರ್‌ ಹೇಳುತ್ತಿದ್ದಾರೆ.

ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿದ್ದರೂ ಚುನಾವಣಾ ಪ್ರಚಾರ ನಡೆಸುತ್ತಿರುವ ಮೊದಲ ಪಕ್ಷ ಎಂಎನ್‌ಎಸ್ ಆಗಿರಬಹುದು. ಮಹಾರಾಷ್ಟ್ರದ ಆಡಳಿತ ಮತ್ತು ವಿರೋಧ ಪಕ್ಷಗಳ ಸಮಾವೇಶಗಳಿಗಿಂತ ರಾಜ್‌ ಅವರ ರ‍್ಯಾಲಿಗಳಿಗೆ ಹೆಚ್ಚು ಜನರು ಸೇರುತ್ತಿದ್ದಾರೆ.

ರಾಜ್‌ ಅವರು ತಮ್ಮ ಪಕ್ಷಕ್ಕೆ ಪುನಶ್ಚೇತನ ಕೊಟ್ಟಿದ್ದಾರೆ ಎಂದು ಅಕೋಲ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

ರಾಜ್‌ ರಾಜಕೀಯ ಹಾದಿ...

ಶಿವಸೇನಾದಿಂದ ಹೊರಗೆ...

* 2006: ಉದ್ಧವ್‌ ಠಾಕ್ರೆ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಶಿವಸೇನಾದಿಂದ ಹೊರನಡೆದ ರಾಜ್‌. ಸಾಮಾನ್ಯ ಜನರನ್ನು ತಟ್ಟುವ ಹಲವು ವಿಚಾರಗಳ ಬಗ್ಗೆ ಅವರು ಈ ಸಂದರ್ಭದಲ್ಲಿ ಮಾತನಾಡಿದ್ದಾರೆ. ಮರಾಠಿ ಅಸ್ಮಿತೆಯನ್ನು ಅವರು ಕೇಂದ್ರವಾಗಿಸಿಕೊಂಡಿದ್ದರು. ಚುನಾವಣಾ ರಾಜಕೀಯವನ್ನೇ ಮಾನದಂಡವಾಗಿಸಿ ನೋಡಿದರೆ ಅವರಿಗೆ ಅಂತಹ ಗೆಲುವೇನೂ ದಕ್ಕಲಿಲ್ಲ

ಮೋದಿ ಪ್ರೀತಿ–ದ್ವೇಷ

* 2014ರ ಲೋಕಸಭಾ ಚುನಾವಣೆಗೆ ಮೊದಲು 9 ದಿನಗಳ ಗುಜರಾತ್‌ ಪ್ರವಾಸ. ಮೋದಿ ಅವರ ಗುಜರಾತ್‌ ಮಾದರಿ ಬಗ್ಗೆ ಮೆಚ್ಚುಗೆ. 2014ರ ಲೋಕಸಭಾ ಚುನಾವಣೆ ಬಳಿಕ ಮೋದಿ ಅವರ ಕಟು ಟೀಕಾಕಾರರಾಗಿ ಬದಲು

ಸೇನಾ–ಬಿಜೆಪಿ ಮೈತ್ರಿಕೂಟಕ್ಕೆ ಪೆಟ್ಟು

* 2009ರ ಲೋಕಸಭಾ ಚುನಾವಣೆಯಲ್ಲಿ ಎಂಎನ್‌ಎಸ್‌ ಯಾವುದೇ ಕ್ಷೇತ್ರದಲ್ಲಿ ಗೆಲ್ಲಲಿಲ್ಲ. ಆದರೆ, ಮುಂಬೈಯಲ್ಲಿ ಸೇನಾ–ಬಿಜೆಪಿ ಮೈತ್ರಿಕೂಟದ ಗೆಲುವಿನ ಸಾಧ್ಯತೆಗಳನ್ನು ಮುರುಟಿಸಿತ್ತು. ವಿಧಾನಸಭಾ ಚುನಾವಣೆಯಲ್ಲಿ ಎಂಎನ್‌ಎಸ್‌ ಗೆದ್ದದ್ದು 11 ಕ್ಷೇತ್ರಗಳಲ್ಲಿ ಮಾತ್ರ. ಆದರೆ, ಸೇನಾ–ಬಿಜೆಪಿಯ ಗೆಲುವಿಗೆ ನಗರ ಪ್ರದೇಶಗಳ ಹಲವು ಕ್ಷೇತ್ರಗಳಲ್ಲಿ ಅಡ್ಡಗಾಲಾಯಿತು

ವಿಧಾನಸಭೆ ಮೇಲೆ ಕಣ್ಣು

* 2014ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹೊತ್ತಿಗೆ ಉದ್ಧವ್‌ ಮತ್ತು ರಾಜ್‌ ನಡುವಣ ಮನಸ್ತಾಪ ಸರಿಪಡಿಸಲಾರದಷ್ಟು ಹದಗೆಟ್ಟಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ರಾಜ್‌ ಠಾಕ್ರೆಯ ಪಕ್ಷಕ್ಕೆ ಒಂದು ಕ್ಷೇತ್ರವೂ ದಕ್ಕಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದದ್ದು ಒಂದು ಕ್ಷೇತ್ರ ಮಾತ್ರ. ಈಗ ಅವರು ಮುಂದಿನ ವಿಧಾನಸಭಾ ಚುನಾವಣೆಯನ್ನೇ ಗುರಿಯಾಗಿರಿಸಿಕೊಂಡು ಕೆಲಸ ಮಾಡುತ್ತಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.