ADVERTISEMENT

‘ಫೂಲ್‌ ಆಗ್ಬೇಡಿ, ವೋಟ್ ಮಾಡಿ ಕೂಲ್ ಆಗಿ’;ಮತದಾನ ಜಾಗೃತಿಗೆ ಸಾಮಾಜಿಕ ಜಾಲತಾಣ ಬಳಕೆ

ಎಂ.ಮಹೇಶ
Published 2 ಏಪ್ರಿಲ್ 2019, 20:00 IST
Last Updated 2 ಏಪ್ರಿಲ್ 2019, 20:00 IST
ಮತದಾನ ಜಾಗೃತಿಯ ಪೋಸ್ಟರ್‌
ಮತದಾನ ಜಾಗೃತಿಯ ಪೋಸ್ಟರ್‌   

ಬೆಳಗಾವಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅನುಸರಿಸಬೇಕಾದ ಮಾದರಿ ನೀತಿಸಂಹಿತೆ ಅನುಷ್ಠಾನಕ್ಕೆ ಸಂಬಂಧಿಸಿದ ಮಾಹಿತಿಗಳು ಮತ್ತು ಚುನಾವಣಾ ಅಕ್ರಮಗಳನ್ನು ತಡೆಯುವ ಕುರಿತ ಸೂಚನೆಗಳನ್ನು ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಟ್ವಿಟರ್‌ ಖಾತೆಯಲ್ಲಿ ಆಕರ್ಷಕ ಶೀರ್ಷಿಕೆಗಳು ಹಾಗೂ ಸಾಲುಗಳ ಮೂಲಕ ತಿಳಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಇರುವವರನ್ನು, ಮುಖ್ಯವಾಗಿ ಯುವಜನತೆಯನ್ನು ಮತಗಟ್ಟೆಗಳಿಗೆ ಬರುವಂತೆ ಮಾಡಲು ಹಾಗೂ ನೈತಿಕ ಮತದಾನಕ್ಕೆ ಪ್ರೋತ್ಸಾಹಿಸಲು ಟ್ವಿಟರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳೆರಡರಲ್ಲೂ ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. 4,092 ಮಂದಿ ಈ ಖಾತೆಯನ್ನು ‘ಫಾಲೋ’ ಮಾಡುತ್ತಿದ್ದಾರೆ.

ಕ್ಯಾಚಿ ಹೆಡ್‌ಲೈನ್‌ಗಳುಳ್ಳ ಪೋಸ್ಟರ್‌ಗಳು ಹಾಗೂ ಕಿರುಚಿತ್ರಗಳನ್ನು ಇದರಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ. ಆಯಾ ಸಂದರ್ಭಗಳಿಗೆ ತಕ್ಕಂತೆ ವಿಶೇಷ ಪೋಸ್ಟ್‌ಗಳನ್ನು ಹಾಕುತ್ತಿರುವುದು ಗಮನಸೆಳೆಯುತ್ತಿದೆ. ನೂರಾರು ಟ್ವೀಟ್‌ಗಳನ್ನು ಮಾಡಲಾಗಿದ್ದು, ಬಹುತೇಕವು ಲೋಕಸಭಾ ಚುನಾವಣೆಗೆ ಸಂಬಂಧಿಸಿದವೇ ಆಗಿವೆ.

ADVERTISEMENT

ಆಯೋಗದ ಜಾಲತಾಣದ ಲಿಂಕ್‌ ಕೂಡ ನೀಡಲಾಗಿದೆ. ಅದರಲ್ಲೂ ಬೆರಳ ತುದಿಯಲ್ಲಿಯೇ ಮಾಹಿತಿ ಪಡೆಯಬಹುದು. ದೂರುಗಳಿದ್ದಲ್ಲಿ ಟೋಲ್‌ ಫ್ರೀ ಸಹಾಯವಾಣಿ 1950ಗೆ ಕರೆ ಮಾಡಬಹುದು.

ಘೋಷಣೆಗಳ ಝಲಕ್:

‘ಎಣ್ಣೆ ಕೊಟ್ಟು, ವೋಟ್ ಕೊಡ್ರಿ ಅಂದ್ರೆ ಕೋಳ ಕೈಗೆ ಗ್ಯಾರೆಂಟಿ’, ‘ಮದ್ಯ ಅಥವಾ ಮಾದಕ ವಸ್ತುಗಳನ್ನು ನೀಡಿ ಮತಗಳನ್ನು ಖರೀದಿಸುವುದು ಅಪರಾಧ’, ‘ಜವಾಬ್ದಾರಿಯಿಂದ ಇರಿ, ಬೇಡ ಬೇಜವಾಬ್ದಾರಿ’, ‘ಅದು ಇದು ಕೇಳಿ ಫೂಲ್ ಆಗಬೇಡಿ, ವೋಟ್ ಮಾಡಿ ಕೂಲ್‌ ಆಗಿ’, ‘ಭರವಸೆಗಳನ್ನು ನಂಬಿ ಮೂರ್ಖರಾಗಬೇಡಿ’, ‘ಕುಟುಂಬದಲ್ಲಿ ಮತದಾರರಾಗಿರುವ ಯಾರೂ ಮತದಾನದಿಂದ ಹೊರ ಉಳಿಯದಂತೆ ನೋಡಿಕೊಳ್ಳಿ’, ‘ಮಜಾ ಮಾಡೋದು ಇದ್ದೇ ಇರುತ್ತೆ ಡೋಂಟ್ ವರಿ, ಮೊದಲು ವೋಟ್ ಮಾಡೋಣ ಬನ್ರಿ’, ‘ನಿಮಗೆ ಗೊತ್ತೇ ಮತ ಹಾಕಲು ಶಸ್ತ್ರ ತೋರಿಸಿ ಬೆದರಿಸುವುದು ಅಪರಾಧ’, ‘ನೀವೇ ಬಿಗ್ ಬಾಸ್ ಆಗಿ–ನ್ಯಾಯಯುತ ಚುನಾವಣೆ ನಮ್ಮೆಲ್ಲರ ಹೊಣೆ’,‘ವೋಟ್‌ಗೆ ವೋಟ್, ಕೆಲಸಕ್ಕೆ ಕೆಲಸ, ರಜಕ್ಕೆ ರಜಾ, ಮಜಕ್ಕೆ ಮಜಾ, ದೇಶ ಮೊದಲು ಆಮೇಲೆ ನೀನು,‘ಹೆಣ್ಣು ಮಕ್ಕಳು ಸ್ಟ್ರಾಂಗು ಗುರು, ಬಟ್ ವೋಟ್ ಮಾಡದಿದ್ರೆ ರಾಂಗು ಗುರು!’ ಎಂಬಿತ್ಯಾದಿ ವಿಷಯಗಳನ್ನು ಒಳಗೊಂಡ ಪುಟಗಳು ಗಮನಸೆಳೆಯುತ್ತಿವೆ.

ಚುನಾವಣೆ ಸಂದರ್ಭದಲ್ಲಿ ನಗದು ವಹಿವಾಟಿಗೆ ಇರುವ ನಿರ್ಬಂಧಗಳನ್ನು ತಿಳಿಸಲಾಗಿದೆ. ನವ ಮತದಾರರು ಏನು ಮಾಡಬೇಕು ಎನ್ನುವ ವಿಡಿಯೊಗಳ ಲಿಂಕ್‌ಗಳನ್ನು ಹಾಕಲಾಗಿದೆ. ಮತದಾನದ ದಿನದಂದು ಅಂಗವಿಕಲರಿಗೆ ಮಾಡಿರುವ ವ್ಯವಸ್ಥೆಗಳು, ಅದಕ್ಕೆ ಸಂಬಂಧಿಸಿದ ವಿಡಿಯೊಗಳು, ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.

ಒಂದು ನಿಮಿಷದ ಸಿನಿಮಾ:

ಸಿವಿಜಿಲ್‌ ಆ್ಯಪ್, ಚುನಾವಣಾ ಆ್ಯಪ್ ಮಾಹಿತಿಯೂ ಇದೆ. ಚುನಾವಣೆ, ಮತದಾನಕ್ಕೆ ಸಂಬಂಧಿಸಿದ ಮೊಬೈಲ್‌ ಫಿಲ್ಮ್ ಸ್ಪರ್ಧೆಯನ್ನೂ ನಡೆಸಲಾಗುತ್ತಿದೆ. 1 ನಿಮಿಷದ ಅವಧಿಯ ಸಿನಿಮಾ ಸಲ್ಲಿಸಲು ಏ. 5ರವರೆಗೆ ಅವಕಾಶವಿದೆ. ‘ವೋಟ್ ಮಾಡಿ ಆಮೇಲೆ ನೋಡಿ’, ‘ನೈತಿಕ ಮತದಾನ‌’, ‘ಮೊದಲು ವೋಟಿಂಗ್ ಆಮೇಲೆ ಔಟಿಂಗ್’, ‘ವೋಟಿಂಗ್– ನಮ್ಮ ಹೆಮ್ಮೆ ಮತ್ತು ಜವಾಬ್ದಾರಿ’, ‘ನಮ್ಮ ನಡೆ ಮತಗಟ್ಟೆಯ ಕಡೆ’, ‘ಪ್ರತಿ ಮತ ಅಮೂಲ್ಯ’ ಎನ್ನುವ ವಿಷಯಗಳನ್ನು ನೀಡಲಾಗಿದೆ.

‘ಚುನಾವಣಾ ಅಕ್ರಮ ಮಾಡಿ ತಪ್ಪಿಸಿಕೊಳ್ಳೋಕೆ ಚಾನ್ಸೇ ಇಲ್ಲ, ನೋ ವೇಸ್... ಸಿ ವಿಜಿಲ್ ಆ್ಯಪ್ ಇದ್ಯಲ್ಲ’ ಎನ್ನುವ ಪೋಸ್ಟರ್‌ ಆಕರ್ಷಕವಾಗಿದೆ. ಈ ಆ್ಯಪ್‌ನಲ್ಲಿ ದಾಖಲಾಗುವ ದೂರುಗಳ ಸಂಖ್ಯೆಯನ್ನೂ ಆಗಾಗ ಪ್ರಕಟಿಸಲಾಗುತ್ತಿದೆ.

‘ಈ ಚುನಾವಣೆಯಲ್ಲಿ ವೋಟರ್‌ ಗೈಡ್ (ಕನ್ನಡ ಮತ್ತು ಇಂಗ್ಲಿಷ್) ಅನ್ನು ನೀಡಲಾಗುವುದು. ಇದರಲ್ಲಿ ಚುನಾವಣೆಯ ದಿನಾಂಕ, ಸಮಯ, ಮತಗಟ್ಟೆ, ಅಧಿಕಾರಿಗಳ ಸಂಪರ್ಕ ಮಾಹಿತಿ, ಪ್ರಮುಖ ಜಾಲತಾಣಗಳು, ಸಹಾಯವಾಣಿ ಸಂಖ್ಯೆಗಳು, ಮತಗಟ್ಟೆಯಲ್ಲಿ ಗುರುತಿಸಲು ಬೇಕಾದ ದಾಖಲೆಗಳ ಮಾಹಿತಿ ಅದರಲ್ಲಿರುತ್ತದೆ’ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.