ADVERTISEMENT

ಲಿಂಗಾಯತರಿಗೆ ಶೇ 16 ಮೀಸಲಾತಿ: ಪ್ರಣಾಳಿಕೆಯಲ್ಲಿ ಪ್ರಕಟಿಸಲು ಆಗ್ರಹ

ಹೋರಾಟ ವೇದಿಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 10:55 IST
Last Updated 1 ಏಪ್ರಿಲ್ 2019, 10:55 IST
   

ಬೆಳಗಾವಿ: ‘ಮಹಾರಾಷ್ಟ್ರದಲ್ಲಿ ಮರಾಠಾ ಸಮಾಜದವರಿಗೆ ಶೇ 16ರಷ್ಟು ಮೀಸಲಾತಿ ನೀಡಿದ ಮಾದರಿಯಲ್ಲಿ ಕರ್ನಾಟಕದಲ್ಲೂ ಲಿಂಗಾಯತರಿಗೆ ವಿಶೇಷ ಮೀಸಲಾತಿ ಕಲ್ಪಿಸಬೇಕು’ ಎಂದು ‘ಸಮಸ್ತ ಲಿಂಗಾಯತ ಮೀಸಲಾತಿ ಹೋರಾಟ ವೇದಿಕೆ’ಯ ಮುಖ್ಯ ಸಂಘಟಕ ಬಸನಗೌಡ ಚಿಕ್ಕನಗೌಡರ ಆಗ್ರಹಿಸಿದರು.

‘ಈ ಕುರಿತು ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಿದ್ದೇವೆ. ಮೀಸಲಾತಿ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮೀಸಲಾತಿ ನೀಡುವ ಕುರಿತು ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕು. ಈ ಮೂಲಕ ಸಮಾಜದ ಬೆಂಬಲ ಪಡೆದುಕೊಳ್ಳಬೇಕು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಬೇಡಿಕೆ ಕುರಿತು ಮುಖ್ಯಮಂತ್ರಿಗೆ ಜನತಾದರ್ಶನದಲ್ಲಿ ಮನವಿ ಸಲ್ಲಿಸಲಾಗಿತ್ತು. ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವರ್ಗಾಯಿಸಿದ್ದರು. ಬಳಿಕ ಏನಾಯಿತು ಎನ್ನುವುದು ತಿಳಿಯಲಿಲ್ಲ. ಬಹುಸಂಖ್ಯಾತ ಸಮಾಜದ ಬೇಡಿಕೆ ಕಡೆಗಣಿಸುವುದು ಸರಿಯಲ್ಲ’ ಎಂದರು.

ADVERTISEMENT

‘ಮಹಾರಾಷ್ಟ್ರದ ಮರಾಠಾ ಸಮಾಜ ಹಾಗೂ ಲಿಂಗಾಯತರಿಗೆ ಸಾಮ್ಯತೆ ಇದೆ. ನಮ್ಮ ಸಮಾಜವೂ ‘ಹಿಂದುಳಿದ ವರ್ಗ 3ಬಿ‌’ಯಲ್ಲಿ ಬರುತ್ತದೆ. ಅವರು ಮಹಾರಾಷ್ಟ್ರದಲ್ಲಿ ಬಹುಸಂಖ್ಯಾತರಾದರೆ ನಾವು ಇಲ್ಲಿ ಬಹುಸಂಖ್ಯಾತರು. ಅವರಂತೆಯೇ ಕೃಷಿ ಅವಲಂಬಿಸಿದವರು. ಹೀಗಾಗಿ ನಾವೂ ವಿಶೇಷ ಮೀಸಲಾತಿಗೆ ಅರ್ಹರಾಗಿದ್ದೇವೆ. ಮತ್ತೊಬ್ಬರ ಮೀಸಲಾತಿ ಕಸಿದು ನಮಗೆ ಕೊಡಿ ಎಂದು ಕೇಳುತ್ತಿಲ್ಲ. ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಲಿಂಗಾಯತ ಸ್ವತಂತ್ರ ಧರ್ಮದ ವರದಿಯನ್ನು ಕೇಂದ್ರ ತಿರಸ್ಕರಿಸಿ ನಮಗೆ ಅನ್ಯಾಯ ಎಸಗಿದೆ. ಆ ಸರ್ಕಾರ ಯಾವುದೇ ವಿಶೇಷ ಸೌಲಭ್ಯಗಳನ್ನು ಮಾಡಿಕೊಟ್ಟಿಲ್ಲ. ಜಿ.ಎಂ. ಸಿದ್ದೇಶ್ವರ ನಂತರ ಸಮಾಜದ ಬೇರೊಬ್ಬರಿಗೆ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಡಲಿಲ್ಲ. ಬೇಸಾಯವನ್ನೇ ನಂಬಿರುವ ನಮ್ಮ ಸಾಲ ಮನ್ನಾ ಮಾಡದೇ ಅನ್ಯಾಯ ಎಸಗಿದೆ. ಲಿಂಗಾಯತ ವಿರೋಧಿ ಧೋರಣೆ ತಾಳಿದೆ. ಶತಾಯಿಷಿ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲಿಲ್ಲ’ ಎಂದು ದೂರಿದರು.

‘ವಿಶೇಷ ಮೀಸಲಾತಿಗಾಗಿ ಮರಾಠಾ ಸಮಾಜದ ಮಾದರಿಯಲ್ಲಿಯೇ ಇಲ್ಲಿಯೂ‌ ಹೋರಾಟ ಮಾಡಲಾಗುವುದು’ ಎಂದು ತಿಳಿಸಿದರು.

ವೇದಿಕೆಯ ಸಂಘಟಕರಾದ ಎಫ್.ಎಸ್. ಸಿದ್ದನಗೌಡರ, ಈಶ್ವರ ಕತ್ತಿ, ಸವಿತಾ ಹುಡೇದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.