ADVERTISEMENT

ಅಸಹನೆಯ ನುಡಿಗೆ ಬೆಲೆ ತೆತ್ತ ಕುಮಾರಸ್ವಾಮಿ

ಜೆಡಿಎಸ್‌ ಭದ್ರಕೋಟೆಯಲ್ಲಿ ಮುಖಭಂಗ; ಇತಿಹಾಸ ನಿರ್ಮಿಸಿದ ಸುಮಲತಾ

ಎಂ.ಎನ್.ಯೋಗೇಶ್‌
Published 24 ಮೇ 2019, 1:50 IST
Last Updated 24 ಮೇ 2019, 1:50 IST
   

ಮಂಡ್ಯ: ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಅಷ್ಟದಿಕ್ಪಾಲಕರಂತೆ ಇದ್ದ ಜೆಡಿಎಸ್‌ ಶಾಸಕರು ತಮ್ಮ ಪುತ್ರ ಕೆ.ನಿಖಿಲ್‌ ಅವರನ್ನು ಗೆಲ್ಲಿಸಿಕೊಡುತ್ತಾರೆ ಎಂಬ ಕನಸು ಕಂಡಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತೀವ್ರ ಮುಖಭಂಗವಾಗಿದೆ.

ಕಾಂಗ್ರೆಸ್‌ ಜತೆಗಿನ ಮೈತ್ರಿಯಿಂದಾಗಿ ಪುತ್ರನಿಗೆ ದೊಡ್ಡ ಸ್ಪರ್ಧೆ ಇರಲಾರದು ಎಂದೇ ಅವರು ನಂಬಿದ್ದರು. ಆದರೆ, ಸುಮಲತಾ ಸ್ಪರ್ಧೆಯ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಜೆಡಿಎಸ್‌ ಮುಖಂಡರಲ್ಲಿ ಅಸಹನೆಯ ಕಟ್ಟೆಯೊಡೆದಿತ್ತು. ‘ಗಂಡ ಸತ್ತು ಆರು ತಿಂಗಳಾಗಿಲ್ಲ, ಚುನಾವಣೆ ಬೇಕಿತ್ತಾ?’ ಎಂದು ಎಚ್‌.ಡಿ.ರೇವಣ್ಣ ನುಡಿದರೆ, ‘ಸುಮಲತಾ ಮುಖದಲ್ಲಿ ಪತಿ ಸತ್ತ ನೋವಿನ ಛಾಯೆ ಇಲ್ಲ’ ಎಂದು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಟೀಕಿಸಿದ್ದರು. ಈ ಅಸಹನೆಯ ನುಡಿಗಳಿಗೆ ಫಲಿತಾಂಶದಲ್ಲಿ ತಕ್ಕ ಬೆಲೆ ತೆರಬೇಕಾಯಿತು.

ಸ್ಪರ್ಧೆ ಸಹಿಸದ ಜೆಡಿಎಸ್‌ ಮುಖಂಡರು ಸುಮಲತಾ ವಿರುದ್ಧ ಆರೋಪಗಳ ಸುರಿಮಳೆಗೈದರು. ಸುಮಲತಾ ಬೆಂಬಲಕ್ಕೆ ಬಂದ ಯಶ್‌–ದರ್ಶನ್‌ ಜೋಡಿಯನ್ನೂ ಜರಿದರು. ಇದು ಅಂಬರೀಷ್‌, ಯಶ್‌, ದರ್ಶನ್‌ ಅಭಿಮಾನಿಗಳು ಸಿಡಿದೇಳುವಂತೆ ಮಾಡಿತು. ಆರೋಪಗಳನ್ನು ತಾಳ್ಮೆಯಿಂದಲೇ ಸ್ವೀಕರಿಸಿದ ಸುಮಲತಾ, ತಮ್ಮ ಎಚ್ಚರಿಕೆಯ ನಡೆ–ನುಡಿಯಿಂದ ಸೆರಗೊಡ್ಡಿ ಮತಭಿಕ್ಷೆ ಬೇಡಿದರು. ಅವರ ಭಾವುಕ ನುಡಿಗಳು ಮತದಾರರ ಮನದಾಳಕ್ಕೆ ಇಳಿದವು.

ADVERTISEMENT

ಗೌಡ್ತಿ ಪ್ರಶ್ನೆ: ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ‘ಸುಮಲತಾ ಗೌಡ್ತಿ ಅಲ್ಲ’ ಎಂಬ ಜಾತಿಯ ವಿಷಯ ಎತ್ತಿ ಜನರ ಕೆಂಗಣ್ಣಿಗೆ ಗುರಿಯಾದರು. ಇದರ ಪರಿಣಾಮ ಅರ್ಥ ಮಾಡಿಕೊಳ್ಳದ ಮುಖಂಡರೂ ಅದೇ ವಿಷಯವನ್ನು ಮತ್ತೆ ಮತ್ತೆ ಪ್ರಸ್ತಾಪಿಸಿದರು. ಸಂಸದ ಎಲ್‌.ಆರ್‌. ಶಿವರಾಮೇಗೌಡ ಮಾತುಮಾತಿಗೂ ‘ಆಕೆ ನಾಯ್ಡು, ಮಂಡ್ಯವನ್ನು ನಾಯ್ಡುಮಯಗೊಳಿಸುತ್ತಾರೆ’ ಎಂದರು. ಆ ಮೂಲಕ ಒಕ್ಕಲಿಗ ಮತಗಳನ್ನು ಕ್ರೋಡೀಕರಿಸಲು ಯತ್ನಿಸಿದರು. ಆದರೆ, ಅದುಇತರ ಸಮುದಾಯಗಳು ಒಂದಾಗುವಂತೆ ಮಾಡಿತು.

ಹೆಸರಿಗಷ್ಟೇ ಮೈತ್ರಿ: ಕ್ಷೇತ್ರದಲ್ಲಿ ಹೆಸರಿಗಷ್ಟೇ ಮೈತ್ರಿ ಆಗಿದ್ದು, ಅತೃಪ್ತ ಕಾಂಗ್ರೆಸ್‌ ಮುಖಂಡರು ಸುಮಲತಾ ಅವರನ್ನು ಅಸ್ತ್ರದಂತೆ ಪ್ರಯೋಗಿಸಿದರು. ಚಲುವರಾಯಸ್ವಾಮಿ ಸೇರಿ ಹಲವು ಮುಖಂಡರು ಸುಮಲತಾ ಬೆನ್ನಿಗೆ ನಿಂತಿದ್ದು ರಹಸ್ಯವಾಗಿ ಉಳಿಯಲಿಲ್ಲ. ಶೇ 90ರಷ್ಟು ಸ್ಥಳೀಯ ಕಾಂಗ್ರೆಸ್‌ ನಾಯಕರು ಪಕ್ಷೇತರ ಅಭ್ಯರ್ಥಿಯ ಜೊತೆಗಿದ್ದರು. ಬಿಜೆಪಿ, ರೈತಸಂಘದ ಬೆಂಬಲವೂ ಸಿಕ್ಕಿತು.

‘ಸ್ವಾಭಿಮಾನದ ಸಂಕೇತ’ ಎಂದೇ ಬಿಂಬಿತರಾದರು. ಇದು ಗೆಲುವಿಗೆ ವರವಾಯಿತು. ಸುಮಲತಾ ಹೆಸರಿನ ಮೂವರನ್ನು ಕಣಕ್ಕಿಳಿಸಿದ್ದು, ಅಧಿಕಾರದ ದುರುಪಯೋಗ ಆರೋಪ ಮುಖ್ಯಮಂತ್ರಿ ಸ್ಥಾನದ ಘನತೆ ಕುಂದಿಸಿತು. ಮಹಿಳಾ ಮತದಾರರ ಒಳ ಏಟು ಗುಪ್ತಗಾಮಿನಿಯಂತೆ ಕೆಲಸ ಮಾಡಿತು.

ಇತಿಹಾಸ ನಿರ್ಮಾಣ: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯೊಬ್ಬರು ಪಕ್ಷೇತರವಾಗಿ ಸ್ಪರ್ಧಿಸಿ ಸಂಸತ್‌ ಪ್ರವೇಶಿಸಿದ ಇತಿಹಾಸವನ್ನು ಸುಮಲತಾ ಬರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.