ADVERTISEMENT

ಕಡ್ಡಾಯವಾಗಿ ಮತದಾನ ಮಾಡಿ: ಮಸ್ಕಿ ನಾಗರಾಜ

ಬಿ.ಅರ್.ಬಿ. ಮಹಾವಿದ್ಯಾಲಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 14:18 IST
Last Updated 30 ಮಾರ್ಚ್ 2019, 14:18 IST
ರಾಯಚೂರಿನ ಬಿಆರ್‌ಬಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ ಮಾತನಾಡಿದರು
ರಾಯಚೂರಿನ ಬಿಆರ್‌ಬಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ ಮಾತನಾಡಿದರು   

ರಾಯಚೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದೃಢ ಸರ್ಕಾರ ಆಸ್ತಿತ್ವಕ್ಕೆ ಬರಲು ಮತದಾನದ ಪ್ರಮಾಣ ಹೆಚ್ಚು ಮಾಡಬೇಕು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಬಿಆರ್‌ಬಿ ಕಾಲೇಜಿನ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ ಹೇಳಿದರು.

ನಗರದ ಬಿ.ಅರ್.ಬಿ. ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮತದಾನ ಜಾಗೃತಿ ನಿಮಿತ್ತ ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ, ಪಿಕ್ ಆ್ಯಂಡ್‌ ಸ್ಪೀಕ್, ಪ್ರಬಂಧ ಸ್ಪರ್ಧೆ ಹಾಗೂ ಆರ್ಟ್‌ ನರೇಶನ್ ಸ್ಪರ್ಧೆಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ಮತದಾನದ ಪ್ರಮಾಣ ಹೆಚ್ಚು ಮಾಡಲು ಜಾಗೃತಿ ಕಾರ್ಯಗಳ ಜೊತೆ ಜೊತೆಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಕಾನೂನು ತರಬೇಕಾಗಿದೆ. ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗಿ ದೇವರ ಮುಂದೆ ನಿಂತು ನನಗೆ ಒಳ್ಳೆಯದು ಮಾಡು ಎಂದು ಬೇಡಿಕೊಳ್ಳುವಂತೆ ಚುನಾವಣೆಗಳು ಬಂದ ಸಂದರ್ಭದಲ್ಲಿ ಪ್ರತಿಯೊಬ್ಬರು ಮತಗಟ್ಟೆಗೆ ತೆರಳಿ ಉತ್ತಮ ಅಭ್ಯರ್ಥಿಗೆ ತಪ್ಪದೆ ಮತ ಹಾಕುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಮತದಾನ ಮಾಡುವಂತೆ ವಿದ್ಯಾವಂತರು ಬೇರೆಯವರಿಗೆ ಪ್ರೇರಣೆ ನೀಡಬೇಕು. ಯಾರು ಮತ ಚಲಾಯಿಸಿದ್ದಾರೆ ಯಾರು ಇಲ್ಲ ಎನ್ನುವದರ ಕುರಿತು ತಪಾಸಣೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿದ್ಯಾವಂತರಿರುವ ಪ್ರದೇಶಗಳಲ್ಲಿಯೆ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ದಯವಿಟ್ಟು ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಿ ಜಾಗೃತಿ ಮೂಡಿಸಿ ಮತದಾನದ ಪ್ರಮಾಣ ಹೆಚ್ಚು ಮಾಡಲು ಪ್ರಯತ್ನಿಸಬೇಕೇಂದು ಕರೆ ನೀಡಿದರು.

ಒಬ್ಬ ವ್ಯಕ್ತಿ ಎರಡು ಕಡೆ ಮತ ಹೊಂದಿದ್ದರೆ ಒಂದು ಕಡೆ ಆ ಮತವನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಕಾನೂನಿನ ಪ್ರಕಾರ ಶಿಕ್ಷಾರ್ಹ ಎಂದು ಹೇಳಿದರು.

ಬಿ.ಅರ್.ಬಿ. ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ವೆಂಕಟಾಪೂರ ಷಣ್ಮೂಕಪ್ಪ ಹಾಗೂ ಶ್ರೀಮತಿ.ಮೀತಲ್ ವಿಕಾಸ್ ಬೂಬ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಮತದಾನ ಪ್ರಮಾಣ ಹೆಚ್ಚು ಮಾಡಲು ಶ್ರಮಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಚೇರ್‌ಮನ್‌ ಸಿ.ಎ.ವೆಂಕಟಕೃಷ್ಣನ್ ಎಸ್. ಮಾತನಾಡಿ, ಚುನಾವಣೆ ಕುರಿತು ಅರಿವು ಮೂಡಿಸಲು ಸೂಕ್ತ ವಿಷಯಗಳ ಬಗ್ಗೆ ಸ್ಪರ್ಧೆ ಏರ್ಪಡಿಸಿದ್ದು ಅತ್ಯಂತ ಸಮಯೋಚಿತವಾಗಿದೆ ಎಂದರು.

ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ತಾರಾನಾಥ ಶಿಕ್ಷಣ ಸಂಸ್ಥೆ ಸದಾ ಬೆಂಬಲ ನೀಡಿತ್ತಿದೆ. ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಒಗ್ಗೂಡಿ ಕಾಲೇಜಿನ ಬೆಳವಣಿಗೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಬಿ.ದೇವರಡ್ಡಿ, ಆಡಳಿತ ಮಂಡಳಿ ಸದಸ್ಯರಾದ ಯಾಪಲದಿನ್ನಿ ಉದಯಕುಮಾರ್, ಕಾರ್ಯಕ್ರಮ ಸಂಯೋಜಕಿ ಡಿ.ಐಶ್ವರ್ಯ ಇದ್ದರು.

ಬಸವರಾಜ ಎಸ್.ಯು. ಪ್ರಾರ್ಥಿಸಿದರು. ಗ್ರಂಥಪಾಲಕ ಸಜಿದೇವಿ ಸ್ವಾಗತಿಸಿದರು, ಬಸವರಾಜ ವಂದಿಸಿದರು. ಸಿಮ್ರಾನ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.