ADVERTISEMENT

ನೀರಾವರಿ:ತಿಪಟೂರಿನಲ್ಲಿ ಆಕ್ರೋಶದ ಬುಗ್ಗೆ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕಿಡಿ

ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಕಾವೇರಿದ ನೀರಾವರಿ ರಾಜಕಾರಣ; ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕಿಡಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 13:32 IST
Last Updated 9 ಏಪ್ರಿಲ್ 2019, 13:32 IST

ತುಮಕೂರು: ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ತಿಪಟೂರು ತಾಲ್ಲೂಕಿನಲ್ಲಿ ನೀರಾವರಿ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಗುತ್ತಿದೆ. ರೈತ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಚುನಾವಣಾ ಬಹಿಷ್ಕಾರದ ಕೂಗು ಕೇಳುತ್ತಿದೆ. ಇತ್ತೀಚೆಗೆ ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ ಹೊನ್ನವಳ್ಳಿಯಲ್ಲಿ ರೈತರು ಸಭೆ ನಡೆಸಿ ಚುನಾವಣಾ ಬಹಿಷ್ಕಾರದ ಮಾತನಾಡಿದ್ದರು. ಮಾಜಿ ಶಾಸಕ ಕೆ.ಷಡಕ್ಷರಿ ಸಂಧಾನ ಸಭೆ ನಡೆಸಿ ಬಹಿಷ್ಕಾರ ಹಿಂದಕ್ಕೆ ಪಡೆಯುವಂತೆ ಮನವೊಲಿಸಿದರು. ಹೀಗೆ ತಾಲ್ಲೂಕಿನ ಬೇರೆ ಬೇರೆ ಹಳ್ಳಿಗಳಲ್ಲಿ ನೀರಾವರಿ ವಿಚಾರ ಚುನಾವನಾ ಸಂದರ್ಭದಲ್ಲಿ ಕಾವೇರಿದೆ.

ದಕ್ಷಿಣ ಒಳನಾಡು ನೀರಾವರಿ ಹೋರಾಟ ಸಮಿತಿಯ ಅಸ್ತಿತ್ವಕ್ಕೂ ಇದು ಮುನ್ನುಡಿ ಬರೆದಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ-206 ಭೂ ಸಂತ್ರಸ್ತರೂ ಚುನಾವಣೆ ಬಹಿಷ್ಕಾರದ ಮಾತನ್ನಾಡುತ್ತಿದ್ದಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಕೂಡಲೇ ತಾಲ್ಲೂಕಿನ ಸಮಸ್ಯೆಗಳಿಗೆ ಗಮನ ಹರಿಸದಿದ್ದರೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಹಿಷ್ಕಾರ ಅಥವಾ ನೋಟಾ ಅಭಿಯಾನ ಕೈಗೊಳ್ಳಲಾಗುವುದು ಎಂದು ದಕ್ಷಿಣ ಒಳನಾಡು ನೀರಾವರಿ ಹೋರಾಟ ಸಮಿತಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

‘ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ-206 ಭೂ ಸಂತ್ರಸ್ತರ ಹೋರಾಟಕ್ಕೆ ಹಾಗೂ ಶಾಶ್ವತ ನೀರಾವರಿ ವಂಚಿತರ ಬೇಡಿಕೆಗೆ ಕಿಂಚಿತ್ತೂ ಅಧಿಕಾರಿಗಳು ಮತ್ತು ರಾಜಕಾರಣಿಗಳ ಸ್ಪಂದಿಸಿಲ್ಲ. ಭ್ರಷ್ಟ ವ್ಯವಸ್ಥೆಯ ಹಾಗೂ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟಿಸಿ ಚುನಾವಣೆ ಬಹಿಷ್ಕರಿಸಲು ಮುಂದಾಗಿರುವ ಜನಸಾಮಾನ್ಯರನ್ನು ರಾಜಕಾರಣಿಗಳು ಕೇವಲ ಮತಗಳನ್ನಾಗಿ ನೋಡುತ್ತಿರುವುದ ಖಂಡನೀಯ’ ಎಂದು ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜು ತಿಮ್ಮಲಾಪುರ ಆರೋಪಿಸಿದರು.

ADVERTISEMENT

‘ಭೂಸ್ವಾಧೀನಾಧಿಕಾರಿ ಗುತ್ತಿಗೆದಾರರು ಮತ್ತು ಮೈತ್ರಿ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ರೈತ ಕುಟುಂಬಗಳ ಲಕ್ಷಾಂತರ ಮೌಲ್ಯದ ಕೃಷಿ ಭೂಮಿಗಳನ್ನು ವಾಸ್ತವ ಮಾರುಕಟ್ಟೆಗಿಂತ ಅಪಮೌಲ್ಯಗೊಳಿಸಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುತ್ತಿದ್ದಾರೆ’ ಎಂದು ದೂರಿದರು.

ಹೊನ್ನವಳ್ಳಿ ನೀರಾವರಿ ಯೋಜನೆಯನ್ನು ತಾಂತ್ರಿಕವಾಗಿ ಅನುಷ್ಠಾನಗೊಳಿಸದೆ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದು ಅವರ ಅವಶ್ಯಕ್ಕೆ ತಕ್ಕಂತೆ ವಿನ್ಯಾಸ ಬದಲಾಯಿಸಲಾಗುತ್ತಿದೆ. ನೀರು ಬಳಕೆದಾರರು ಅದರ ಪ್ರಯೋಜನ ಪಡೆಯುವ ಬದಲಾಗಿ ಶಾಶ್ವತವಾಗಿ ನೀರಾವರಿ ವಂಚಿತರಾಗುತ್ತಿದ್ದಾರೆ. ಜನರ ಅಭಿವೃದ್ಧಿ ಪರಿಗಣಿಸಿ ಕ್ರಿಯಾ ಯೋಜನೆ ರೂಪಿಸಬೇಕು ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಎಸ್‌.ದೇವರಾಜ್ ನುಡಿಯುವರು.

ಯೋಜನೆಗಳನ್ನು ರೂಪಿಸುವುದು, ಬದಲಾಯಿಸುವುದು, ಮುಂದೂಡುವುದು ಅಧಿಕಾರಿಗಳು ಮತ್ತು ರಾಜಕಾರಣಿಗಳ ಉದ್ದೇಶವಾಗಿರುವಂತೆ ಕಾಣುತ್ತಿದೆ. ಪ್ರಸ್ತುತ ಲೋಕಸಭಾ ಚುನಾವಣೆಯ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಜಿಲ್ಲೆಯ ಯಾವುದೇ ಸಮಸ್ಯೆಗಳ ಅರಿವು ಇಲ್ಲ. ಕೇವಲ ಚೌಕಿದಾರ– ಚೋರ ಎಂದು ಕಳ್ಳ ಪೊಲೀಸ್ ಆಟವಾಡುತ್ತಿದ್ದಾರೆ ಎಂದು ದಕ್ಷಿಣ ಒಳನಾಡು ನೀರಾವರಿ ಹೋರಾಟ ಸಮಿತಿಯ ಶ್ರೀಕಾಂತ್ ಕೆಳಹಟ್ಟಿ ಹೇಳಿದರು.

ಸ್ಪಂದಿಸದ ಶಾಸಕ, ಡಿಸಿಎಂ

ಕೆಲವು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 206ರ ಭೂ ಸಂತ್ರಸ್ತರು ಧರಣಿ ಕುಳಿತ್ತಿದ್ದಾಗ ಶಾಸಕರು ಅಥವಾ ಉಪ ಮುಖ್ಯಮಂತ್ರಿ ಕಿಂಚಿತ್ತು ಸ್ಪಂದಿಸಿಲ್ಲ. ಇವರಿಗೆ ರೈತರು ಮತ್ತು ತಾಲ್ಲೂಕಿನ ಸಮಸ್ಯೆಗಳ ಪರಿಹಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ. ರಾಷ್ಟ್ರೀಯ ಹೆದ್ದಾರಿ ಮತ್ತು ಎತ್ತಿನಹೊಳೆ ಯೋಜನೆಗಳ ಭೂ ಸಂತ್ರಸ್ತರ ಸಮಾಧಿಯ ಮೇಲೆ ಚುನಾವಣೆ ಮಾಡಲು ಹೊರಟಿರುವುದು ನಾಚಿಕೆಗೆಡಿನ ವಿಷಯ ಎಂದು ಮನೋಹರ ಭೈರನಾಯಕನಹಳ್ಳಿ ಆಕ್ರೋಶ ವ್ಯಕ್ತಪಡಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.