ADVERTISEMENT

ಸುಮಲತಾ ಮೇಲೆ ಅನುಕಂಪವೇಕೆ? ಬಿಜೆಪಿಯವರಿಗೆ ಲಕ್ಷ್ಮಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 13:35 IST
Last Updated 29 ಮಾರ್ಚ್ 2019, 13:35 IST
   

ಬೆಳಗಾವಿ: ‘ತೇಜಸ್ವಿನಿ ಅನಂತಕುಮಾರ್‌ ಅವರ ಬಗ್ಗೆ ಇಲ್ಲದ ಅನುಕಂಪ ಸುಮಲತಾ ಅವರ ಮೇಲೆ ಬಿಜೆಪಿಯವರು ಏಕೆ ತೋರಿಸುತ್ತಿದ್ದಾರೆ’ ಎಂದು ಶಾಸಕಿಲಕ್ಷ್ಮಿ ಹೆಬ್ಬಾಳಕರ ಪ್ರಶ್ನಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಅಪಾರ ಶ್ರಮವಹಿಸಿದ ಅನಂತಕುಮಾರ್‌ ಅವರು ಈಗಿಲ್ಲ. ಅವರ ಪತ್ನಿ ತೇಜಸ್ವಿನಿ ಪರ ಅನುಕಂಪದ ಅಲೆ ಇದ್ದಾಗಲೂ ಏಕೆ ಟಿಕೆಟ್‌ ತಪ್ಪಿಸಲಾಯಿತು? ಇನ್ನೊಂದೆಡೆ, ಮಂಡ್ಯದಲ್ಲಿ ಸ್ಪರ್ಧಿಸಿರುವ ಸುಮಲತಾ ಅವರ ಬಗ್ಗೆ ಏಕೆ ಬಿಜೆಪಿಯವರು ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.

‘ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಮೈತ್ರಿ ಧರ್ಮ ಪಾಲಿಸಬೇಕಾಗಿದೆ. ಈಗಾಗಲೇ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಸುಮಲತಾ ಅವರಿಗೆ ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ರಾಜ್ಯ ನಾಯಕರು ಸೂಚಿಸಿದ್ದರು. ಅದನ್ನು ಧಿಕ್ಕರಿಸಿ ಅವರು ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ ಯಾರಿಗೂ ಅನ್ಯಾಯ ಮಾಡಿಲ್ಲ’ ಎಂದು ವಿವರಿಸಿದರು.

ADVERTISEMENT

ರಮೇಶ ಕತ್ತಿ ಕಾಂಗ್ರೆಸ್‌ಗೆ– ಹೈಕಮಾಂಡ್‌ ತೀರ್ಮಾನ:

‘ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈತಪ್ಪಿರುವ ರಮೇಶ ಕತ್ತಿ ಅವರು ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇನೆ. ಯಾರು ಬೇಕಾದವರೂ ಪಕ್ಷಕ್ಕೆ ಬರಬಹುದು. ಇದರ ಬಗ್ಗೆ ಹೈಕಮಾಂಡ್‌ ತೀರ್ಮಾನ ಕೈಗೊಳ್ಳುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಮೋದಿ ಅಲೆ ದೇಶದಲ್ಲಿ ಎಲ್ಲಿಯೂ ಇಲ್ಲ. ಉಪಗ್ರಹ ಪ್ರಯೋಗದ ಯಶಸ್ಸು ವಿಜ್ಞಾನಿಗಳಿಗೆ ಸಲ್ಲಬೇಕು. ಕಾಂಗ್ರೆಸ್‌ ಆಡಳಿತದಲ್ಲಿಯೇ ಇಸ್ರೊ ಸ್ಥಾಪಿಸಲಾಗಿತ್ತು’ ಎಂದು ನುಡಿದರು.

ಅನರ್ಹಗೊಳಿಸಲು ಒತ್ತಾಯ

‘ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಕಚೇರಿಗಳನ್ನು ಪ್ರಧಾನಿ ನರೇಂದ್ರ ಮೋದಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳ ಮಟ್ಟಹಾಕಲು ಇವುಗಳನ್ನು ಬಳಸುತ್ತಿರುವ ಮೋದಿ ವಿರುದ್ಧ ಚುನಾವಣಾ ಆಯೋಗವು ಸ್ವಯಂ ಪ್ರೇರಿತ ಕ್ರಮಕೈಗೊಳ್ಳಬೇಕು’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.