ADVERTISEMENT

ಸಂಜೆ ನಂತರ ಸಿಗಬಾರದ ಮನುಷ್ಯ!

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ಪ್ರಥಮ್
ಪ್ರಥಮ್   

ಒಳ್ಳೆಯ ಹುಡುಗ ಪ್ರಥಮ್ ಅಭಿನಯದ ಚಿತ್ರ ‘ದೇವ್ರಂಥ ಮನುಷ್ಯ’! ಈ ಚಿತ್ರದ ಬಗ್ಗೆ ಮಾಹಿತಿ ನೀಡಲು ಸಿನಿತಂಡ ಸುದ್ದಿಗೋಷ್ಠಿ ಕರೆದಿತ್ತು. ಸುದ್ದಿಗೋಷ್ಠಿ ನಡೆಯುವ ಸ್ಥಳದಲ್ಲಿ ಪ್ರಥಮ್‌ ಅವರ ಹತ್ತು ಮುಖಗಳನ್ನು (ಅಥವಾ ತಲೆಗಳನ್ನು) ತೋರಿಸುವ ಒಂದು ಕಟೌಟ್‌ ಇತ್ತು. ಅಂದರೆ, ಈ ಸಿನಿಮಾದಲ್ಲಿ ದೇವ್ರಂಥಾ ಮನುಷ್ಯನ ಹತ್ತು ಅವತಾರಗಳನ್ನು ತೋರಿಸಲು ನಿರ್ದೇಶಕರು ಮುಂದಾಗಿದ್ದಾರಾ ಎಂಬ ಊಹೆ ಮೂಡಿಸುವಂತೆ ಇತ್ತು ಆ ಕಟೌಟ್‌!

ಚಿತ್ರದ ನಿರ್ಮಾಪಕರಾದ ಎಚ್.ಸಿ. ಮಂಜುನಾಥ್ ಮತ್ತು ಕೆ. ತಿಮ್ಮರಾಜು, ನಿರ್ದೇಶಕ ಕಿರಣ್ ಶೆಟ್ಟಿ, ನಾಯಕ ನಟ ಪ್ರಥಮ್, ನಾಯಕಿಯರಾದ ಶ್ರುತಿ ಮತ್ತು ವೈಷ್ಣವಿ ಅಲ್ಲಿದ್ದರು. ಮೊದಲ ಮಾತು ಮಂಜುನಾಥ್ ಅವರದ್ದಾಗಿತ್ತು. ‘ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಇದು ವೀಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ಮನೋರಂಜನೆ ನೀಡುವ ಚಿತ್ರ. ಸಮಯದ ಪರಿವೆಯೇ ಇಲ್ಲದಂತೆ ಸಿನಿಮಾ ನೋಡಬಹುದು’ ಎಂದರು ಮಂಜುನಾಥ್.

‘ಪ್ರಥಮ್ ಲವಲವಿಕೆಯಿಂದ ಮಾತನಾಡುವ ವ್ಯಕ್ತಿ. ಅವರಿಗೆ ಸರಿಹೊಂದುವ ಪಾತ್ರ ಸಿನಿಮಾದಲ್ಲಿದೆ. ಇಡೀ ಸಿನಿಮಾ ಮನೋರಂಜನೆಯ ಒಂದು ಪ್ಯಾಕೇಜ್. ಚಿತ್ರದ ಹಾಡುಗಳನ್ನು ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಮೆಚ್ಚಿದ್ದಾರೆ’ ಎಂದರು ಕಿರಣ್ ಶೆಟ್ಟಿ.

ADVERTISEMENT

‘ಪ್ರಥಮ್ ಅವರದ್ದು ವಿಭಿನ್ನ ಪಾತ್ರ. ಒಂದು ಮುಖ ಹತ್ತು ನಿಮಿಷ ಇದ್ದರೆ, ಮುಂದಿನ ಹತ್ತು ನಿಮಿಷ ಇನ್ನೊಂದು ಬಗೆಯ ಮುಖ ಕಾಣಿಸುತ್ತದೆ’ ಎಂದು ಹೇಳಿದರು ಶೆಟ್ಟಿ.

‘ರಿಚ್ ಅಪ್ಪನ ಪೆಚ್ಚು ಮಗ ನಾನು‌’ ಎಂದು ತಮ್ಮ ಪಾತ್ರದ ಬಗ್ಗೆ ಚುಟುಕಾಗಿ ಹೇಳಿದರು ಪ್ರಥಮ್. ‘ಈ ಚಿತ್ರದ ಹೀರೊ ನಾನಲ್ಲ. ಸುಚೇಂದ್ರ ಪ್ರಸಾದ್ ಮತ್ತು ತಬಲಾ ನಾಣಿ ನಿಜವಾದ ಹೀರೊಗಳು’ ಎಂದೂ ಅವರು ಹೇಳಿದರು. ‘ನನ್ನದು ಡೀಸೆಂಟ್ ಪಾತ್ರ’ ಎಂದಷ್ಟೇ ಹೇಳಿದರು ಶ್ರುತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.